
ಬೆಂಗಳೂರು: ದುಷ್ಕರ್ಮಿಗಳು ಯುವತಿಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸುವುದಾಗಿ ಬೆದರಿಸಿ ಹಣ ವಸೂಲು ಮಾಡಲು ಯತ್ನಿಸಿರುವ ಘಟನೆ ನಡೆದಿದೆ. 19 ವರ್ಷದ ಯುವತಿ ನೀಡಿದ ದೂರಿನನ್ವಯ ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುವತಿ ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದು, ತನ್ನ ಪ್ರಿಯಕರನಿಗೆ ಖಾಸಗಿ ಫೋಟೋಗಳನ್ನು ಕಳುಹಿಸಿದ್ದಳು ಎನ್ನಲಾಗಿದೆ. ಬಳಿಕ ಮೊಬೈಲ್ ಸಂಖ್ಯೆಯಿಂದ ಯುವತಿಗೆ ಕರೆ ಮಾಡಿದ ವ್ಯಕ್ತಿಯು ಆಕೆಯ ಖಾಸಗಿ ಫೋಟೊಗಳನ್ನು ಕಳುಹಿಸಿದ್ದಾನೆ. ಅಲ್ಲದೆ, ಒಂದು ಲಕ್ಷ ರು. ಕೊಡದಿದ್ದರೆ ಆ ಫೋಟೊಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಡುವುದಾಗಿ ಹೆದರಿಸಿದ್ದಾನೆ.
ಇದರಿಂದ ಆತಂಕಗೊಂಡ ಯುವತಿ, ಖಾಸಗಿ ಫೋಟೊಗಳು ಹಾಗೂ ಬೆದರಿಕೆ ಹಾಕಿದವನ ಬಗ್ಗೆ ಪ್ರಿಯಕರನ ಜತೆ ಚರ್ಚಿಸಿದ್ದಾಳೆ. ನಂತರ ಕರೆ ಮಾಡಿದ್ದ ವ್ಯಕ್ತಿಗೆ ಪ್ರಿಯಕರನಿಂದ ಒಂದು ಲಕ್ಷ ರುಪಾಯಿ ನಗದು ಕೊಡಿಸಿದ್ದಾಳೆ. ಆ ನಂತರವೂ ಅಪರಿಚಿತ ವ್ಯಕ್ತಿ ಯುವತಿಗೆ ಕರೆ ಮಾಡಿ ಹೆಚ್ಚಿನ ಹಣ ಕೊಡುವಂತೆ ಬೆದರಿಕೆ ಹಾಕಿದ್ದಾನೆ ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ಖಾಸಗಿ ಫೋಟೋ ಅಪರಿಚಿತ ವ್ಯಕ್ತಿಗೆ ಹೇಗೆ ದೊರೆಯಿತು ಎಂದು ಆತಂಕಗೊಂಡ ಯುವತಿ, ಮೊದಲು ಪ್ರಿಯಕರನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಳು. ಈ ನಿಟ್ಟಿನಲ್ಲಿ ತನಿಖೆ ಮಾಡಿದಾಗ ಆತನಿಂದ ಬಹಿರಂಗವಾಗಿಲ್ಲ ಎಂಬುದು ಗೊತ್ತಾಗಿದೆ. ಫೋಟೊಗಳು ಅಪರಿಚಿತನಿಗೆ ಹೇಗೆ ಸಿಕ್ಕಿದವು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.
ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ತಾಯಿ ಸ್ಥಳದಲ್ಲೇ ಮೃತಪಟ್ಟು, ಮಗಳು ಗಾಯಗೊಂಡಿರುವ ಘಟನೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಬೂಸಾಬ್ ಪಾಳ್ಯದ ನಿವಾಸಿ ಅರುಣಾ (42) ಮೃತ ಮಹಿಳೆ. ಮಗಳು ನಂದಿನಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ನಂದಿನಿ ಜ.24ರ ಸಂಜೆ ತನ್ನ ತಾಯಿಯನ್ನು ದ್ವಿಚಕ್ರ ವಾಹನದಲ್ಲಿ ಹೆಬ್ಬಾಳದ ಕಡೆ ಹೋಗುತ್ತಿದ್ದರು. ರಿಂಗ್ ರಸ್ತೆಯ ಹೆಣ್ಣೂರು ಜಂಕ್ಷನ್ ಅಂಡರ್ ಪಾಸ್‌ನಲ್ಲಿ ಹೋಗುತ್ತಿದ್ದಾಗ ವೇಗವಾಗಿ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನದಿಂದ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಆ ಸಂದರ್ಭದಲ್ಲಿ ಕಾರು ಅರುಣಾ ಅವರ ಮೇಲೆ ಹರಿದ ಪರಿಣಾಮ ಗಂಭೀರ ಗಾಯಗೊಂಡು, ಮೃತಪಟ್ಟರು. ಕೇರಳ ಮೂಲದ ಚಾಲಕ ಅನಾಸ್ ನಗರದಲ್ಲಿ ಬಾಡಿಗೆ ವಾಹನ ಓಡಿಸುತ್ತಿದ್ದು, ಅತಿ ವೇಗದ ಚಾಲನೆಯಿಂದಾಗಿ ಈ ದುರ್ಘಟನೆ ನಡೆದಿದೆ. ಚಾಲಕನನ್ನು ಬಂಧಿಸಿ, ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ