
ಬೆಳಗಾವಿ : ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ಮಾರ್ಗವಾಗಿ ಸಾಗಿಸಲಾಗುತ್ತಿದ್ದ ₹400 ಕೋಟಿ ನಗದು ಹೊಂದಿದ್ದ ಎರಡು ಕಂಟೇನರ್‌ಗಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಎಸ್ಐಟಿ ತಂಡ ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ.
ಮಚೀಂದ್ರಾ ಮಾದವಿ ಎಂಬಾತನನ್ನು ಬಂಧಿಸಿ, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದರಿಂದಾಗಿ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಒಟ್ಟು ಆರು ಜನ ಆರೋಪಿಗಳನ್ನು ಬಂಧಿಸಿದಂತಾಗಿದೆ.
ಈ ಮಧ್ಯೆ, ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ತನಿಖೆಗೆ ಅಗತ್ಯವಿರುವ ಸಂಪೂರ್ಣ ಮಾಹಿತಿ ನಮಗೆ ಇನ್ನೂ ಲಭ್ಯವಾಗಿಲ್ಲ ಎಂದು ತಿಳಿಸಿದರು. ಜ.6ರಂದು ನಮಗೆ ನಾಸಿಕ್ ಪೊಲೀಸರಿಂದ ಪತ್ರ ಬಂದಿದೆ. ಬೆಳಗಾವಿಯ ಸಬ್ ಇನ್‌ಸ್ಪೆಕ್ಟರ್ ನೇತೃತ್ವದ ತಂಡ ಮಹಾರಾಷ್ಟ್ರದ ನಾಸಿಕ್‌ಗೆ ತೆರಳಿದ್ದು, ತನಿಖೆಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಎರಡು ಕಂಟೇನರ್‌ಗಳಲ್ಲಿ ನಗದು ಸಾಗಿಸಲಾಗಿದೆ ಎಂಬ ಮಾಹಿತಿ ಮಾತ್ರ ಲಭ್ಯವಿದ್ದು, ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬ ಕುರಿತು ಮಹಾರಾಷ್ಟ್ರ ಪೊಲೀಸರಿಂದ ಇನ್ನೂ ವಿವರ ಮಾಹಿತಿ ಬಂದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದ ಪತ್ರದಲ್ಲಿ ಹೆಸರುಗಳಷ್ಟೇ ಉಲ್ಲೇಖವಾಗಿದ್ದು, ಸಂಪೂರ್ಣ ವಿವರಗಳನ್ನು ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಕಾಶ ಸಿಕ್ಕಲ್ಲಿ ರಾಜ್ಯದ ಪೊಲೀಸರು ತನಿಖೆ ನಡೆಸಲಿದ್ದಾರೆ. ಚೆಕ್‌ಪೋಸ್ಟ್‌ಗಳಲ್ಲಿ ಸಿಸಿಟಿವಿ ವ್ಯವಸ್ಥೆ ಇಲ್ಲದಿರುವ ವಿಚಾರವನ್ನು ಮುಂದಿನ ಹಂತದಲ್ಲಿ ಪರಿಶೀಲಿಸಲಾಗುವುದು. ನಗದು ಕುರಿತು ಓಲ್ಡ್ ನೋಟ್ಸ್ ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ ಎಂದು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ಸಂದೀಪ್ ಪಾಟೀಲ್ ರನ್ನು ಅಪಹರಿಸಲಾಗಿತ್ತು. ಆದರೆ, ಸಂದೀಪ್ ಪಾಟೀಲ್ ಈ ಘಟನೆಯನ್ನು ಕಣ್ಣಾರೆ ನೋಡಿಲ್ಲ. ಅವರ ಹೇಳಿಕೆ ಆಧರಿಸಿ ಮಾಹಿತಿ ಲಭ್ಯವಾಗಿದೆ. ಪ್ರಕರಣವನ್ನು ಯಾರಾದರೂ ನೋಡಿದ್ದಾರಾ ಎಂಬುದರ ಕುರಿತು ಮಹಾರಾಷ್ಟ್ರ ಪೊಲೀಸರಿಂದ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಚೋರ್ಲಾ ಘಾಟ್ ಪ್ರದೇಶ ಮೂರು ರಾಜ್ಯಗಳ ವ್ಯಾಪ್ತಿಗೆ ಒಳಪಡುವ ಪ್ರದೇಶವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸಾಕ್ಷಿದಾರರು ಯಾರು ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ರಾಜ್ಯದ ಪೊಲೀಸರು ನಾಸಿಕ್‌ನಲ್ಲೇ ಇದ್ದು, ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಪ್ರಕರಣವು ಮೊದಲಿಗೆ ಮಹಾರಾಷ್ಟ್ರದಲ್ಲಿ ನಡೆದಿದೆ ಎಂಬ ಕಾರಣದಿಂದ ತನಿಖೆ ಅಲ್ಲಿ ನಡೆಯಬೇಕಾಗಿದೆ. ನಮಗೆ ಇನ್ನೂ ಸಂಪೂರ್ಣ ಮಾಹಿತಿ ಹಂಚಿಕೆಯಾಗಿಲ್ಲ. ಆರೋಪಿಗಳೊಂದಿಗೆ ನೇರವಾಗಿ ಮಾತನಾಡಲು ಅವಕಾಶ ಸಿಕ್ಕಿಲ್ಲ. ಈ ಪ್ರಕರಣದ ತನಿಖೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಎರಡು ಕಂಟೇನರ್‌ಗಳಲ್ಲಿ ನಗದು ಸಾಗಿಸಲಾಗಿದೆ ಎಂಬ ಮಾಹಿತಿ ಮಾತ್ರ ಲಭ್ಯವಿದ್ದು, ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬ ಕುರಿತು ಮಹಾರಾಷ್ಟ್ರ ಪೊಲೀಸರಿಂದ ಇನ್ನೂ ವಿವರ ಮಾಹಿತಿ ಬಂದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದ ಪತ್ರದಲ್ಲಿ ಹೆಸರುಗಳಷ್ಟೇ ಉಲ್ಲೇಖವಾಗಿದ್ದು, ಸಂಪೂರ್ಣ ವಿವರ ನೀಡಲಾಗಿಲ್ಲ. ಅವಕಾಶ ಸಿಕ್ಕಲ್ಲಿ ಈ ಬಗ್ಗೆ ರಾಜ್ಯದ ಪೊಲೀಸರು ತನಿಖೆ ನಡೆಸಲಿದ್ದಾರೆ. ಚೆಕ್‌ಪೋಸ್ಟ್‌ಗಳಲ್ಲಿ ಸಿಸಿಟಿವಿ ವ್ಯವಸ್ಥೆ ಇಲ್ಲದಿರುವ ವಿಚಾರವನ್ನು ಮುಂದಿನ ಹಂತದಲ್ಲಿ ಪರಿಶೀಲಿಸಲಾಗುವುದು.
ಕೆ.ರಾಮರಾಜನ್, ಬೆಳಗಾವಿ ಎಸ್‌ಪಿ
2025ರ ಅ.16ರಂದು 400 ಕೋಟಿ ರು. ನಗದಿದ್ದ ಎರಡು ಕಂಟೇನರ್ ದರೋಡೆ
ಮಹಾರಾಷ್ಟ್ರ, ಕರ್ನಾಟಕ, ಗೋವಾ ಸಮೀಪದ ಚೋರ್ಲಾ ಘಾಟ್ ಬಳಿ ಘಟನೆ
ಹಣ ಮಹಾರಾಷ್ಟ್ರ ಉದ್ಯಮಿ ಕಿಶೋರ್‌ಸೇಟ್ ಎಂಬುವವರಿಗೆ ಸೇರಿದ್ದೆಂಬ ಶಂಕೆ
ದರೋಡೆಯಲ್ಲಿ ಕೈವಾಡ ಶಂಕಿಸಿ ಸಂದೀಪ್ ಪಾಟೀಲ್ ಎಂಬಾತನ ಕಿಡ್ನಾಪ್
ಒಂದು ತಿಂಗಳ ಸೆರೆ ಬಳಿಕ ತಪ್ಪಿಸಿಕೊಂಡ ಸಂದೀಪ್‌ನಿಂದ ಕಿಡ್ನಾಪ್ ದೂರು
ಈ ವೇಳೆ ಹಣ ದರೋಡೆ ಪ್ರಕರಣ ಬೆಳಕಿಗೆ. ಬಳಿಕ ಮಹಾ ಪೊಲೀಸರಿಂದ ಕೇಸು
ಇದುವರೆಗೂ 400 ಕೋಟಿ ರು. ಹಣ ಎಲ್ಲೋಯ್ತು ಎಂಬ ಮಾಹಿತಿ ಪತ್ತೆ ಇಲ್ಲ
ಪ್ರಕರಣ ಸಂಬಂಧ ಆರು ಜನರ ಬಂಧನ. ಹೇಳಿಕೆ ಆಧರಿಸಿ ಹಣ ಪತ್ತೆಗೆ ಕ್ರಮ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ