ಚಾಮರಾಜನಗರ ತಾಲೂಕಿನ ಮೇಗಲಹುಂಡಿ ಸುರೇಶ್ ಪೊಲೀಸರ ಕೈಗೆ ಸಿಕ್ಕಿಬಿದ್ದ ವಿಚಾರಣಾ ಕೈದಿ. ಪೊಲೀಸರಿಂದ ತಪ್ಪಿಸಿಕೊಂಡ 24 ತಾಸಲ್ಲೇ ಮತ್ತೆ ಖಾಕಿ ಬಲೆಗೆ ಬಿದ್ದಿದ್ದಾನೆ.
ಚಾಮರಾಜನಗರ(ಆ.06): ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದಾಗ ತಪ್ಪಿಸಿಕೊಂಡಿದ್ದ ವಿಚಾರಣಾ ಕೈದಿ ಮಹಿಳೆಯರ ಪರ್ಸ್ ಕದಿಯಲು ಹೋಗಿ ಸಿಕ್ಕಿ ಬಿದ್ದಿರುವ ಘಟನೆ ಚಾಮರಾಜನಗರ ಸಮೀಪದ ಕೌಲಂದೆ ರೈಲ್ವೆ ನಿಲ್ದಾಣದಲ್ಲಿ ಶನಿವಾರ ನಡೆದಿದೆ. ಚಾಮರಾಜನಗರ ತಾಲೂಕಿನ ಮೇಗಲಹುಂಡಿ ಸುರೇಶ್(30) ಪೊಲೀಸರ ಕೈಗೆ ಸಿಕ್ಕಿಬಿದ್ದ ವಿಚಾರಣಾ ಕೈದಿ. ಪೊಲೀಸರಿಂದ ತಪ್ಪಿಸಿಕೊಂಡ 24 ತಾಸಲ್ಲೇ ಮತ್ತೆ ಖಾಕಿ ಬಲೆಗೆ ಬಿದ್ದಿದ್ದಾನೆ.
ಏನಿದು ಘಟನೆ?
undefined
ಸುರೇಶ್ ವಿರುದ್ಧ ಕಳ್ಳತನ ಹಾಗೂ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ತಮಿಳುನಾಡಿನ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಈ ಸಂಬಂಧ ಕೆಲ ದಿನಗಳ ಹಿಂದೆ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಸುರೇಶ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸತ್ಯಮಂಗಲಂನ ನ್ಯಾಯಾಲಯಕ್ಕೆ ಶುಕ್ರವಾರ ವಿಚಾರಣೆಗೆ ಕರೆದೊಯ್ಯುವಾಗ ಆಸನೂರಿನ ಹೋಟೆಲ್ ಬಳಿ ಸುರೇಶ್ ಪೊಲೀಸರನ್ನು ನೂಕಿ ಪರಾರಿಯಾಗಿದ್ದನು. ಆ ವೇಳೆ ಪೊಲೀಸ್ ಸಿಬ್ಬಂದಿ ಶಿವಾಜಿ ಅವರ ಕಿರು ಬೆರಳು ಮುರಿದು, ಕಾಲುಗಳಿಗೆ ಗಾಯವಾಗಿತ್ತು. ವೀರಭದ್ರ ಎಂಬುವರಿಗೆ ತರಚಿದ ಗಾಯಗಳಾಗಿತ್ತು. ಪೊಲೀಸರಿಂದ ತಪ್ಪಿಸಿಕೊಂಡ ಈತ ಪೊದೆಗಳ ಒಳಕ್ಕೆ ನುಗ್ಗಿ ಕಣ್ತಪ್ಪಿಸಿಕೊಂಡಿದ್ದ. ಬಳಿಕ ಆಸನೂರು ಬಳಿ ಕಲ್ಲಿನಿಂದ ಜಜ್ಜಿಕೊಂಡು ಕೈ ಬೇಡಿಯನ್ನು ಕಳಚಿಕೊಂಡು, ವಸ್ತ್ರ ಬದಲಾಯಿಸಿ ಚಾಮರಾಜನಗರಕ್ಕೆ ಬಂದಿದ್ದಾನೆ ಎನ್ನಲಾಗಿದೆ.
Bengaluru: ಯೂಟ್ಯೂಬ್ ಚಾನಲ್ ಆರಂಭಿಸಿ ದಂಧೆ, ಮಾಂಸದಂಗಡಿಗಳಲ್ಲಿ ಹಫ್ತಾ ವಸೂಲಿ: 4 ಪತ್ರಕರ್ತರ ಸೆರೆ
ಚಾಮರಾಜನಗರದಿಂದ ನಂಜನಗೂಡಿಗೆ ಶುಕ್ರವಾರ ರಾತ್ರಿ ರೈಲಿನಲ್ಲಿ ಹೋಗಿದ್ದ ಈತ ಶನಿವಾರ ನಂಜನಗೂಡಿನಿಂದ ವಾಪಸ್ ಚಾಮರಾಜನಗರಕ್ಕೆ ಬರುವಾಗ ಮಹಿಳಾ ಬೋಗಿಯನ್ನು ಏರಿ ಪರ್ಸ್ ಕದಿಯಲು ಯತ್ನಿಸಿದ್ದಾನೆ ಎನ್ನಲಗಿದೆ. ಈ ವೇಳೆ ಅಲ್ಲೇ ಇದ್ದ ಸಹ ಪ್ರಯಾಣಿಕರು ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಚಾಮರಾಜನಗರ ಗ್ರಾಮಾಂತರ ಠಾಣಾ ಪೊಲೀಸರು ಸುರೇಶ್‌ನ ಆರೋಗ್ಯ ತಪಾಸಣೆಗೊಳಿಸಿ ಸತ್ಯಮಂಗಲಂ ನ್ಯಾಯಾಲಯ ವಶಕ್ಕೆ ಕೊಡಲು ತೆರಳಿದ್ದಾರೆ.
2 ಪೊಲೀಸರ ಅಮಾನತು
ವಿಚಾರಣಾ ಕೈದಿ ತಪ್ಪಿಸಿಕೊಂಡಿದ್ದ ಹಿನ್ನೆಲೆ ಮೀಸಲು ಪಡೆಯ ವೀರಭದ್ರ ಹಾಗೂ ಶಿವಾಜಿ ಎಂಬವರನ್ನು ಅಮಾನತುಗೊಳಿಸಿ ಚಾಮರಾಜನಗರ ಎಸ್ಪಿ ಆದೇಶ ನೀಡಿದ್ದಾರೆ. ಕರ್ತವ್ಯ ಲೋಪ ಹಿನ್ನೆಲೆ ಇಬ್ಬರ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಸೂಚಿಸಿದ್ದಾರೆ.