ಶ್ರೀ ದತ್ತಾತ್ರೇಯ ದೇವಾಲಯದ ಹೆಸರಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ ಪೂಜಾರಿಗಳಿಂದಲೇ ಸರಕಾರಕ್ಕೆ ಕೋಟ್ಯಾಂತರ ರೂಪಾಯಿ ವಂಚನೆಯಾಗಿರುವ ಆರೋಪ ಕೇಳಿಬಂದಿದೆ.
ಕಲಬುರಗಿ (ಜೂ. 23): ಶ್ರೀ ದತ್ತಾತ್ರೇಯ ದೇವಾಲಯದ ಹೆಸರಲ್ಲಿ ನಕಲಿ ವೆಬ್‌ಸೈಟ್ (Fake Website)ಸೃಷ್ಟಿಸಿ ಪೂಜಾರಿಗಳಿಂದಲೇ ಸರಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆಯಾಗಿರುವ ಆರೋಪ ಕೇಳಿಬಂದಿದೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ದೇವಲಗಾಣಗಾಪುರದಲ್ಲಿನ ಶ್ರೀ ದತ್ತಾತ್ರೇಯ ದೇವಸ್ಥಾನದ ಹೆಸರಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ ಕೆಲ ಅರ್ಚಕರು ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.ದೇಗುಲಕ್ಕೆ ಜಿಲ್ಲಾಧಿಕಾರಿ ಯಶವಂತ ಗುರುಕರ್ ಭೇಟಿ ನೀಡಿದ್ದಾಗ ಮಹಾವಂಚನೆ ಬಯಲಿಗೆ ಬಂದಿದೆ.
ದೇವಸ್ಥಾನದ ಅಧಿಕೃತ ವೆಬ್‌ಸೈಟ್ www.devalgangapur.com (Shri dattatreya temple.ghanagapur) ಆಗಿದ್ದು, ಅಧಿಕೃತ ವೆಬ್‌ಸೈಟ್ ಹೊರತುಪಡಿಸಿ ಅರ್ಚಕರಿಂದ ಏಳೆಂಟು ನಕಲಿ ವೆಬ್‌ಸೈಟ್ ಸೃಷ್ಟಿಯಾಗಿವೆ ಎನ್ನಲಾಗಿದೆ. ನಕಲಿ ವೆಬ್‌ಸೈಟ್ ಮೂಲಕ ಭಕ್ತರಿಂದ ಕೋಟ್ಯಾಂತರ ರೂ ಸಂಗ್ರಹವಾಗಿದ್ದು, ಮುಜರಾಯಿ ಹುಂಡಿಗೆ ಸೇರಬೇಕಿದ್ದ ಹಣ ಅರ್ಚಕರ ಖಾತೆಗಳಿಗೆ ಸೇರಿದೆ.
ಈ ಸಂಬಂಧ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನಾಮದೇವ ಎಸ್ಪಿಗೆ ದೂರು ನೀಡಿದ್ದು, ಗಾಣಗಾಪೂರ ಪೊಲೀಸ್ ಠಾಣೆಯಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿದ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಲ್ಲದೇ ಈ ವಂಚನೆಯಲ್ಲಿ ಅರ್ಚಕರ ಜೊತೆ ಸ್ಥಳಿಯ ಮುಖಂಡರು ಹಾಗೂ ರಾಜಕೀಯ ನಾಯಕರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಒಟ್ಟು 50 ಕೋಟಿಗೂ ಹೆಚ್ಚು ವಂಚನೆ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರಲ್ಲಿ ಹಲವರಿಗೆ ವಂಚನೆ: ತನಿಖೆ ಆರಂಭ
ದೇವಸ್ಥಾನದ ನಕಲಿ ವೆಬ್ ಸೈಟ್ ಬೆಳಕಿಗೆ ಬಂದಿದ್ದು ಹೇಗೆ?: ನಕಲಿ ವೆಬ್ ಸೈಟ್ ನೋಡಿ ಸ್ವತಃ ಕಲಬುರಗಿ ಡಿಸಿ ಯಶವಂತ ಗುರುಕರ್ ದಂಗಾಗಿದ್ದಾರೆ. ಗಾಣಗಾಪೂರ ದತ್ತಾತ್ರೆಯ ದೇವಸ್ಥಾನದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಭೆ ನಡೆಸುತ್ತಿದ್ದ ಡಿಸಿ ಜನರನ್ನು ದೇವಸ್ಥಾನದತ್ತ ಸೆಳೆಯಲು ಆನ್‌ಲೈನ್ ಪರಿಕರಗಳನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದ್ದು, ಈ ವೇಳೆ ವೆಬ್ಸೈಟ್ ಇದೆ ಸರ್ ಎಂದು ಆಡಳಿತಾಧಿಕಾರಿ ತೋರಿಸಿದ್ದಾರೆ.
ವೆಬ್ಸೈಟ್ ಸರ್ಚ್ ಮಾಡುವಾಗ ಅದೇ ಹೆಸರಿನ ಇನ್ನಷ್ಟು ವೆಬ್ ಸೈಟ್ ಪತ್ತೆಯಾಗಿವೆ. ಆ ನಕಲಿ ವೆಬ್ ಸೈಟಿನಲ್ಲೂ ಬೇರೆ ಬೇರೆ ಪೂಜೆಗೆ 11 ಸಾವಿರ ರೂಪಾಯಿಯಿಂದ 51 ಸಾವಿರ ರೂಪಾಯಿವರೆಗೆ ಚಾರ್ಜ್ ಮಾಡಲಾಗಿದೆ. ಅಲ್ಲದೇ ಬ್ಯಾಂಕ್ ಅಕೌಂಟ್ ನಂಬರ್, ಮೊಬೈಲ್ ನಂಬರ್ ಸಹ ದಾಖಲಾಗಿದೆ. ಇದು 6- 7 ವರ್ಷಗಳಿಂದ ನಡೆಯುತ್ತಿದೆ ಎನ್ನುವುದು ತಿಳಿದು ಡಿಸಿ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಸೈಬರ್ ವಂಚನೆಗಳಿಗೆ ಪರಿಹಾರದ ಅಗತ್ಯವಿದೆ : ಅಶ್ವತ್ಥ್ ನಾರಾಯಣ
ದೂರಿನ ಬಳಿಕ ನಕಲಿ ವೆಬ್‌ಸೈಟ್ ಮಾಯ: ನಕಲಿ ವೆಬ್‌ಸೈಟ್‌ಗಳಲ್ಲಿ ಕೆಲವು ಅರ್ಚಕರ ಹೆಸರುಗಳಿದ್ದು, ದೇವರಿಗೇ ಪಂಗನಾಮ ಹಾಕುತ್ತಿರುವುದರ ಬಗ್ಗೆ ಆಡಳಿತಾಧಿಕಾರಿಗೆ ದೂರು ನೀಡುವಂತೆ ಡಿಸಿ ಸೂಚಿಸಿದ್ದಾರೆ. ಡಿಸಿ ಸೂಚನೆ ಮೇರೆಗೆ ಎಸ್ಪಿಗೆ ಆಡಳಿತಾಧಿಕಾರಿ ಲಿಖಿತ ದೂರು ನೀಡಿದ್ದಾರೆ. ಡಿಸಿ ಎಚ್ಚರಿಕೆ ನೀಡಿದ ಎರಡೇ ಗಂಟೆಯಲ್ಲಿ ಎಲ್ಲಾ ನಕಲಿ ವೆಬ್ ಸೈಟ್‌ಗಳು ಮಾಯವಾಗಿವೆ. ಆದರೂ ಈ ಹಿಂದೆ ನಡೆದ ವಂಚನೆಯ ತನಿಖೆಯನ್ನು ಪೊಲೀಸರು ಆರಂಭಿಸಿದ್ದಾರೆ. ಅಲ್ಲದೇ ಐವರು ಅರ್ಚಕರ ವಿರುದ್ಧ ಗಾಣಗಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ ಡಿಸಿ ಯಶವಂತ ಗುರುಕರ್ ಪ್ರತಿಕ್ರಿಯೆ: ಇಡೀ ಪ್ರಕರಣದ ಬಗ್ಗೆ ಮಾತನಾಡಿದ ಡಿಸಿ ಯಶವಂತ ಗುರುಕರ್ "ಇದು ಆರ್ಥಿಕ ಅಪರಾಧ.. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತೆವೆ, 7-8 ನಕಲಿ ವೆಬ್ ಸೈಟ್ ಪತ್ತೆಯಾಗಿವೆ, ಇದರಿಂದ ಸಾಕಷ್ಟು ವಂಚನೆ ನಡೆದಿದೆ, ಇದರಲ್ಲಿ ಕೆಲವರು ಅರ್ಚಕರೇ ಎನ್ನುವುದೂ ಗೊತ್ತಾಗಿದೆ, ಆದ್ರೆ ಅದು ಇನ್ನೂ ತನಿಖೆಯಿಂದ ದೃಢವಾಗಬೇಕು. ದೂರು ದಾಖಲಿಸಲು ಆಡಳಿತಾಧಿಕಾರಿಗೇ ಸೂಚಿಸಿದ್ದೇನೆ" ಎಂದಿದ್ದಾರೆ.