ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ಬಿ ರಿಪೋರ್ಟ್‌ಗೆ ಸಿದ್ಧತೆ

By Kannadaprabha News  |  First Published Feb 3, 2023, 1:30 AM IST

ಬಿ ರಿಪೋರ್ಟ್‌ನಲ್ಲಿ ಸುಳ್ಳು ದರೋಡೆ ಪ್ರಕರಣ ದಾಖಲು ಹಿಂದೆ ನಡೆದಿದ್ದ ಸಂಚಿನಲ್ಲಿ ರವಿ ಸೇರಿದಂತೆ ಇತರರ ಪಾತ್ರವನ್ನು ಉಲ್ಲೇಖಿಸಿ ಈ ಬಗ್ಗೆ ತನಿಖೆ ಅಗತ್ಯವಿದೆ ಎಂದು ಶಿಫಾರಸು ಮಾಡಲಾಗುತ್ತದೆ. ಈ ವರದಿ ಆಧರಿಸಿ ನ್ಯಾಯಾಲಯ ಅಥವಾ ಪೊಲೀಸ್‌ ಆಯುಕ್ತರು ತನಿಖೆಗೆ ಆದೇಶ ನೀಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.


ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಫೆ.03):  ಕಳಂಕಿತ ಕೆ.ಎಸ್‌.ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ಸುಳ್ಳು ದರೋಡೆ ಪ್ರಕರಣದ ಸಂಬಂಧ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್‌ ಸಲ್ಲಿಸಲು ಸಿದ್ಧತೆ ನಡೆಸಿರುವ ಸಿಸಿಬಿ, ಈ ಕೃತ್ಯದ ಸಂಚಿನ ಬಗ್ಗೆ ಸ್ಯಾಂಟ್ರೋ ರವಿ ಹಾಗೂ ಪೊಲೀಸ್‌ ಇನ್ಸ್‌ಪೆಕ್ಟರ್‌ ಸೇರಿದಂತೆ ಇತರರ ವಿರುದ್ಧ ಪ್ರತ್ಯೇಕ ತನಿಖೆಗೆ ಶಿಫಾರಸು ಮಾಡಲಿದೆ.

Tap to resize

Latest Videos

ಸುಳ್ಳು ದರೋಡೆ ಪ್ರಕರಣದಲ್ಲಿ ಸ್ಯಾಂಟ್ರೋ ರವಿ ವಿಚಾರಣೆ ನಡೆಸುವುದಿಲ್ಲ. ಇದುವರೆಗಿನ ತನಿಖೆಯಲ್ಲಿ ರವಿ ಪತ್ನಿ ಹಾಗೂ ನಾದಿನಿ ವಿರುದ್ಧ ಸುಳ್ಳು ಪ್ರಕರಣ ದಾಖಲಾಗಿರುವುದು ಖಚಿತವಾಗಿದೆ. ಈ ಮಾಹಿತಿ ಮೇರೆಗೆ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್‌ ಸಲ್ಲಿಸಿ ದರೋಡೆ ಪ್ರಕರಣವನ್ನು ಮುಕ್ತಾಯಗೊಳಿಸುತ್ತೇವೆ. ಆನಂತರ ದರೋಡೆ ಕೃತ್ಯದ ಸಂಚಿನ ಬಗ್ಗೆ ಪ್ರತ್ಯೇಕವಾಗಿ ರವಿ ಪತ್ನಿಯಿಂದ ದೂರು ಪಡೆದು ಎಫ್‌ಐಆರ್‌ ದಾಖಲಿಸಲಾಗುತ್ತದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಅಧಿಕಾರಿ ಜತೆ ಸಂಬಂಧಕ್ಕೆ ಪತ್ನಿಗೆ ಸ್ಯಾಂಟ್ರೋ ಒತ್ತಡ..!

ಬಿ ರಿಪೋರ್ಟ್‌ನಲ್ಲಿ ಸುಳ್ಳು ದರೋಡೆ ಪ್ರಕರಣ ದಾಖಲು ಹಿಂದೆ ನಡೆದಿದ್ದ ಸಂಚಿನಲ್ಲಿ ರವಿ ಸೇರಿದಂತೆ ಇತರರ ಪಾತ್ರವನ್ನು ಉಲ್ಲೇಖಿಸಿ ಈ ಬಗ್ಗೆ ತನಿಖೆ ಅಗತ್ಯವಿದೆ ಎಂದು ಶಿಫಾರಸು ಮಾಡಲಾಗುತ್ತದೆ. ಈ ವರದಿ ಆಧರಿಸಿ ನ್ಯಾಯಾಲಯ ಅಥವಾ ಪೊಲೀಸ್‌ ಆಯುಕ್ತರು ತನಿಖೆಗೆ ಆದೇಶ ನೀಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ದರೋಡೆ ಕೃತ್ಯವೇ ನಡೆಯದೆ ಸುಳ್ಳಿನ ಕತೆ:

ತನಗೆ ಐದು ಲಕ್ಷ ರು. ಸಾಲ ಕೊಡುವುದಾಗಿ 2022ರ ನವೆಂಬರ್‌ 23ರಂದು ಮೆಜೆಸ್ಟಿಕ್‌ ಸಮೀಪದ ಖೋಡೆ ಸರ್ಕಲ್‌ಗೆ ಬರುವಂತೆ ಸ್ಯಾಂಟ್ರೋ ರವಿ ಪತ್ನಿ ಸೂಚಿಸಿದ್ದರು. ಅಂತೆಯೇ ನಾನು ಅಲ್ಲಿಗೆ ಹೋದಾಗ ನನ್ನ ಮೇಲೆ ಹಲ್ಲೆ ನಡೆಸಿ 13 ಗ್ರಾಂ ಚಿನ್ನದ ಸರ ಹಾಗೂ 9 ಸಾವಿರ ರು. ಹಣ ದೋಚಿ ರವಿ ಪತ್ನಿ, ನಾದಿನಿ ಹಾಗೂ ಅವರ ಸ್ನೇಹಿತರು ಪರಾರಿಯಾಗಿದ್ದಾರೆ ಎಂದು ಆರೋಪಿಸಿ ಕಾಟನ್‌ಪೇಟೆ ಠಾಣೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಪ್ರಕಾಶ್‌ ಎಂಬುವರು ದೂರು ನೀಡಿದ್ದರು.

ಆ ದೂರಿನ ಮೇರೆಗೆ ಐಪಿಸಿ 397 (ದರೋಡೆ) ಪ್ರಕರಣ ದಾಖಲಿಸಿ ಸ್ಯಾಂಟ್ರೋ ರವಿ ಪತ್ನಿ, ನಾದಿನಿ ಹಾಗೂ ಶೇಖ್‌ ಎಂಬುವರನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದರು. ಆದರೆ ಈ ದರೋಡೆ ಕೃತ್ಯವೇ ನಡೆದಿಲ್ಲ. ಸ್ಯಾಂಟ್ರೋ ರವಿ ಸೂಚನೆ ಮೇರೆಗೆ ಆತನ ಸ್ನೇಹಿತ ಪ್ರಕಾಶ್‌ ಸುಳ್ಳು ದೂರು ನೀಡಿದ್ದ. ಇದಕ್ಕೆ ಆಗಿನ ಕಾಟನ್‌ಪೇಟೆ ಠಾಣೆ ಇನ್ಸ್‌ಪೆಕ್ಟರ್‌ ಪ್ರವೀಣ್‌ ಸಾಥ್‌ ಕೊಟ್ಟಿದ್ದಾರೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.
ಈ ಕೃತ್ಯ ನಡೆದಾಗ ರವಿ ಪತ್ನಿ ಹಾಗೂ ನಾದಿನಿ ಮೈಸೂರಿನಲ್ಲಿದ್ದರು. ಪತ್ನಿಯ ಮೊಬೈಲ್‌ ಕಳವು ಮಾಡಿ ರವಿ, ಕೃತ್ಯ ನಡೆದ ದಿನ ಆಕೆ ಬೆಂಗಳೂರಿನಲ್ಲಿರುವಂತೆ ಸಾಕ್ಷಿಯಾಗಿ ಮೊಬೈಲ್‌ ಟವರ್‌ ಲೋಕೇಷನ್‌ ಸಿಗುವಂತೆ ಪತ್ನಿಯ ಮೊಬೈಲನ್ನು ಶೇಖ್‌ಗೆ ನೀಡಿ ಖೋಡೆ ಸರ್ಕಲ್‌ಗೆ ಕಳುಹಿಸಿದ್ದ ಎಂದು ತಿಳಿದುಬಂದಿದೆ.

ಸ್ಯಾಂಟ್ರೋ ರವಿ ಪ್ರಕರಣ: ಹಿರಿಯ ಅಧಿಕಾರಿಗಳ ಹೆಸರು ಬಹಿರಂಗ

ಸ್ಯಾಂಟ್ರೋ ಹೇಳಿಕೆ ಪಡೆಯದೆ ಬಿ ರಿಪೋರ್ಟ್‌

ಸುಳ್ಳು ದರೋಡೆ ಪ್ರಕರಣದಲ್ಲಿ ಸ್ಯಾಂಟ್ರೋ ರವಿ ವಿರುದ್ಧ ಎಫ್‌ಐಆರ್‌ ದಾಖಲಾಗದ ಕಾರಣ ಕೃತ್ಯದಲ್ಲಿ ಆತ ಆರೋಪಿಯಲ್ಲ. ಇದರಿಂದ ಆತನನ್ನು ಸಾಕ್ಷಿಯಾಗಿ ಪರಿಗಣಿಸಿ ಹೇಳಿಕೆ ಪಡೆಯಬೇಕಾಗುತ್ತದೆ. ಆಗ ತನಗೂ ಸುಳ್ಳು ದರೋಡೆ ಪ್ರಕರಣಕ್ಕೂ ಸಂಬಂಧವಿಲ್ಲವೆಂದು ಹೇಳಿ ರವಿ ನುಣುಚಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಸುಳ್ಳು ದರೋಡೆ ಪ್ರಕರಣ ದಾಖಲು ಸಂಚಿನ ಸಂಬಂಧ ತನ್ನ ವಿರುದ್ಧ ಎಫ್‌ಐಆರ್‌ ದಾಖಲಾದರೆ ರವಿ, ತಾನು ಈಗಾಗಲೇ ಇದೇ ಪ್ರಕರಣದಲ್ಲಿ ಸಾಕ್ಷಿಯಾಗಿ ಹೇಳಿಕೆ ಕೊಟ್ಟಿದ್ದೇನೆ. ಈಗ ಮತ್ತೆ ತದ್ವಿರುದ್ಧ ತನಿಖೆ ನಡೆಸಿದ್ದಾರೆ ಎಂದು ಪ್ರತಿಪಾದಿಸಬಹುದು. ಆಗ ಆತನಿಗೆ ಕಾನೂನು ಹೋರಾಟದಲ್ಲಿ ಅನುಕೂಲವಾಗುವ ಸಾಧ್ಯತೆಗಳಿವೆ. ಈ ತಾಂತ್ರಿಕ ಆಡಚಣೆ ಹಿನ್ನೆಲೆಯಲ್ಲಿ ಸುಳ್ಳು ದರೋಡೆ ಪ್ರಕರಣದಲ್ಲಿ ಸ್ಯಾಂಟ್ರೋ ರವಿಯ ಹೇಳಿಕೆ ಪಡೆಯದೆ ‘ಬಿ’ ರಿಪೋರ್ಟ್‌ ಸಲ್ಲಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಸ್ಯಾಂಟ್ರೋ ಬಂಟ ಪ್ರಕಾಶ್‌, ಶೇಕ್‌ ವಿಚಾರಣೆ:

ಸುಳ್ಳು ದರೋಡೆ ಪ್ರಕರಣ ಸಂಬಂಧ ದೂರುದಾರ ಪ್ರಕಾಶ್‌ ಹಾಗೂ ಆರೋಪಿ ಶೇಖ್‌ನನ್ನು ವಿಚರಣೆ ನಡೆಸಲಾಗಿದೆ. ತಾವು ಸ್ಯಾಂಟ್ರೋ ರವಿ ಸೂಚನೆಯಂತೆ ನಡೆದುಕೊಂಡಿದ್ದಾಗಿ ಆ ಇಬ್ಬರು ಹೇಳಿಕೆ ಕೊಟ್ಟಿದ್ದಾರೆ. ಇನ್ನು ಇನ್ಸ್‌ಪೆಕ್ಟರ್‌ ಪ್ರವೀಣ್‌ ಹೇಳಿಕೆ ದಾಖಲು ಮಾತ್ರ ಬಾಕಿ ಇದೆ. ಇನ್ಸ್‌ಪೆಕ್ಟರ್‌ ವಿಚಾರಣೆ ಮುಗಿಸಿದ ಬಳಿಕ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಾಗುತ್ತದೆ. ಈಗಾಗಲೇ ಮೊಬೈಲ್‌ ಕರೆಗಳ ವಿವರ (ಸಿಡಿಆರ್‌) ಸೇರಿದಂತೆ ತಾಂತ್ರಿಕ ಮಾಹಿತಿಯನ್ನು ಸಹ ಕಲೆ ಹಾಕಲಾಗಿದೆ ಎಂದು ಮೂಲಗಳು ವಿವರಿಸಿವೆ.

click me!