ಪೊಲೀಸರ ಮೇಲೆ ಹಲ್ಲೆ: ರೌಡಿ ಮೇಲೆ ಫೈರಿಂಗ್‌

By Kannadaprabha NewsFirst Published Mar 8, 2021, 7:26 AM IST
Highlights

ಚಡ್ಡಿ ಕಿರಣ್‌ ಕಾಲಿಗೆ ನಂದಿನಿ ಲೇಔಟ್‌ ಪೊಲೀಸರ ಗುಂಡು| ರೌಡಿ ವಿರುದ್ಧ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 10ಕ್ಕೂ ಅಧಿಕ ಗಂಭೀರ ಅಪರಾಧ ಪ್ರಕರಣಗಳು ದಾಖಲು| ನಂದಿನಿ ಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ| 

ಬೆಂಗಳೂರು(ಮಾ.08):  ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿಶೀಟರ್‌ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ನಂದಿನಿ ಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಲಗ್ಗೆರೆ ನಿವಾಸಿ ರೌಡಿಶೀಟರ್‌ ಕಿರಣ್‌ ಅಲಿಯಾಸ್‌ ಚಡ್ಡಿ ಕಿರಣ್‌(25) ಗುಂಡೇಟು ತಿಂದ ಆರೋಪಿ. ಘಟನೆಯಲ್ಲಿ ನಂದಿನಿ ಲೇಔಟ್‌ ಪೊಲೀಸ್‌ ಕಾನ್‌ಸ್ಟೇಬಲ್‌ ಬಸವಣ್ಣ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಯುವತಿಯ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದವನಿಗೆ ಗುಂಡೇಟು

ಕಿರಣ್‌ ರಾಜಗೋಪಾಲನಗರ ಹಾಗೂ ನಂದಿನಿ ಲೇಔಟ್‌ ಪೊಲೀಸ್‌ ಠಾಣೆಯ ರೌಡಿಶೀಟರ್‌ ಆಗಿದ್ದಾನೆ. ಕಿರಣ್‌ ವಿರುದ್ಧ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 10ಕ್ಕೂ ಅಧಿಕ ಗಂಭೀರ ಅಪರಾಧ ಪ್ರಕರಣಗಳಿವೆ. ಫೆ.3ರಂದು ಜೈಲಿನಿಂದ ಬಿಡುಗಡೆ ಆಗಿದ್ದ ಕಿರಣ್‌, ತನ್ನ ಸಹಚರ ಜತೆ ಮಾ.2ರಂದು ವಿನೋದ್‌ ಮತ್ತು ಆತನ ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ನಂದಿನಿ ಲೇಔಟ್‌ ಪೊಲೀಸರು ಕಿರಣ್‌ಗಾಗಿ ಶೋಧ ನಡೆಸುತ್ತಿದ್ದರು. ಭಾನುವಾರ ಬೆಳಗಿನ ಜಾವ 4.15ರ ಸುಮಾರಿಗೆ ಕಿರಣ್‌ ಹಾಗೂ ಆತನ ಸಹಚರ ದಾಸ ಲಗ್ಗೆರೆ ಬಳಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ವೇಳೆ ಇನ್ಸ್‌ಪೆಕ್ಟರ್‌ ನವೀದ್‌ ತಂಡ ಬಂಧಿಸಲು ಹೋಗಿದ್ದಾಗ, ಅವರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ್ದ. ಆಗ ಆತನ ಕಾಲಿಗೆ ಗುಂಡಿಕ್ಕಿ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!