
ಬೆಂಗಳೂರು(ನ.27): ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ತನ್ನ ಗುರು ಬಿಡುಗಡೆ ಸಲುವಾಗಿ ಜಾಮೀನು ಹಣಕ್ಕಾಗಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ಬೆದರಿಸಿ ಹಫ್ತಾ ವಸೂಲಿಗಿಳಿದಿದ್ದ ಕಿಡಿಗೇಡಿಯೊಬ್ಬನಿಗೆ ಬಾಗಲೂರು ಠಾಣೆ ಪೊಲೀಸರು ಗುರುವಾರ ಗುಂಡು ಹೊಡೆದು ಬಂಧಿಸಿದ್ದಾರೆ.
ಚೆನ್ನೈ ಮೂಲದ ದಿನೇಶ್ ಅಲಿಯಾಸ್ ದಿನಿಗೆ ಗುಂಡು ಬಿದ್ದಿದ್ದು, ಕೊಲೆ ಯತ್ನ ಪ್ರಕರಣದಲ್ಲಿ ಸಂಪಿಗೆಹಳ್ಳಿ ಸಮೀಪ ಈತನನ್ನು ಬೆಳಗ್ಗೆ 7 ಗಂಟೆಗೆ ಸುಮಾರಿಗೆ ಮಹಜರ್‌ಗೆ ಕರೆದೊಯ್ದರು. ಆ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆರೋಪಿ ಮೇಲೆ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಬಾಗಲೂರು ಪಿಎಸ್‌ಐ ವಿಂಧ್ಯಾ ರಾಥೋಡ್ ಹಾಗೂ ಕಾನ್‌ಸ್ಟೇಬಲ್ ಸುಮಂತ್ ಸಹ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗ್ಳೂರಲ್ಲಿ ಒಂದೇ ದಿನ ಡಬಲ್ ಶೂಟೌಟ್..!
ಹಣ ಕೊಡದವರಿಗೆ ಚಾಕು ಇರಿದ
ನಾಲ್ಕು ತಿಂಗಳ ಹಿಂದೆ ಯಲಹಂಕ ಸಮೀಪ ನಡೆದಿದ್ದ ಪಾಲನಹಳ್ಳಿ ಚನ್ನಕೇಶವ ಕೊಲೆ ಪ್ರಕರಣ ಸಂಬಂಧ ಮುನಿರಾಜು ಹಾಗೂ ಈತನ ಸಹಚರರನ್ನು ಯಲಹಂಕ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಮುನಿರಾಜು ಸೋದರ ಪವನ ಕಲ್ಯಾಣ್ ಅಲಿಯಾಸ್ ಪಾಪ್ಪಚಿ, ತನ್ನಣ್ಣನ ಬಿಡುಗಡೆಗೆ ಕಾನೂನು ಹೋರಾಟ ನಡೆಸಿದ್ದ. ಇದಕ್ಕೆ ತಗಲುವ ವೆಚ್ಚ ಭರಿಸಲು ಆತ, ದಿನೇಶ್, ನವೀನ್ ಅಲಿಯಾಸ್ ನಲ್ಲ ಸೇರಿದಂತೆ ಐವರ ತಂಡ ಕಟ್ಟಿಕೊಂಡು ಯಲಹಂಕ ವ್ಯಾಪ್ತಿಯಲ್ಲಿ ಸುಲಿಗೆಗೆ ಇಳಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಂತೆಯೇ ಹತ್ತು ದಿನಗಳ ಹಿಂದೆ ಯಲಹಂಕ ಹತ್ತಿರ ಹಫ್ತಾ ನೀಡಲು ನಿರಾಕರಿಸಿದ ಚಿನ್ನದ ವ್ಯಾಪಾರಿಗೆ ಚಾಕುವಿನಿಂದ ಇರಿದು ಆರೋಪಿಗಳು ದಾದಾಗಿರಿ ಮಾಡಿದ್ದರು. ನಂತರ ನ.24ರಂದು ದ್ವಾರಕನಗರದಲ್ಲಿ ಛಾಯಾಗ್ರಾಹಕ ಮ್ಯಾಥೂಸ್ ಅವರನ್ನು ಅಡ್ಡಗಟ್ಟಿದ ಪಾಪ್ಪಚಿ ಗ್ಯಾಂಗ್, 3 ಲಕ್ಷ ಮೌಲ್ಯದ ಕ್ಯಾಮೆರಾ ಹಾಗೂ ಮೊಬೈಲ್‌ಗೆ ಕಸಿದುಕೊಂಡು ಮ್ಯಾಥ್ಯೂಗೆ ಚಾಕುವಿನಿಂದ ಇರಿದಿದ್ದ.
ಈ ಬಗ್ಗೆ ಸಂತ್ರಸ್ತ ಛಾಯಾಗ್ರಾಹಕ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಇನ್ಸ್‌ಪೆಕ್ಟರ್ ಪ್ರಶಾಂತ್ ವರ್ಣಿ ನೇತೃತ್ವದ ತಂಡ, ಸಿಸಿಟಿವಿ ಕ್ಯಾಮರಾ ಹಾಗೂ ಮೊಬೈಲ್ ಕರೆಗಳ ಆಧರಿಸಿ ಪಪ್ಪಾಚಿ ಗ್ಯಾಂಗ್ ಕೃತ್ಯ ಎಂಬುದು ಪತ್ತೆ ಹಚ್ಚಿತು. ಕೊನೆಗೆ ಕಟ್ಟಿಗೇನಹಳ್ಳಿಯಲ್ಲಿ ಬುಧವಾರ ಸಂಜೆ ಪಪ್ಪಾಚಿ ಹಾಗೂ ಆತನ ಸಹಚರರಾದ ಲಲ್ಲು, ಅರುಣ್ ಹಾಗೂ ದಿನೇಶ್‌ನನ್ನು ತನಿಖಾ ತಂಡವು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ