ಕಲಬುರಗಿ: ಪೊಲೀಸರ ಮೇಲೆಯೇ ಮಾರಕಾಸ್ತ್ರದಿಂದ ದಾಳಿ, ಕೊಲೆ ಆರೋಪಿ ಕಾಲಿಗೆ ಗುಂಡೇಟು

By Kannadaprabha NewsFirst Published Jan 7, 2023, 9:00 PM IST
Highlights

ಪೊಲೀಸರ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಕೊಲೆ ಪ್ರಕರಣ ಆರೋಪಿತನ ಮೇಲೆ ಪೊಲೀಸರು ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ. 

ಕಲಬುರಗಿ(ಜ.07):  ನಗರದ ರಿಂಗ್‌ ರೋಡ್‌ ಆಳಂದ ಚೆಕ್‌ಪೋಸ್ವ್‌ ಬಳಿಯಿರುವ ಯೂನಾನಿ ಆಸ್ಪತ್ರೆಯ ಹತ್ತಿರದಲ್ಲಿ ಪೊಲೀಸರ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಕೊಲೆ ಪ್ರಕರಣ ಆರೋಪಿತನ ಮೇಲೆ ಪೊಲೀಸರು ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ. ಗುರುವಾರ ಸಂಜೆ ಹೊತ್ತಲ್ಲಿ ಈ ಘಟನೆ ನಡೆದಿದೆ. ಚನ್ನವೀರ ನಗರದ ನಿವಾಸಿಯಾಗಿರುವ ಮಂಜುನಾಥ ಸ್ವಾಮಿ (29) ಪೊಲೀಸರ ಗುಂಡೇಟು ತಿಂದ ವ್ಯಕ್ತಿ. ರ್ಕಾ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತ ದಾಳಿ ನಡೆಸಿದ್ದರಿಂದ ಚೌಕ್‌ ಠಾಣೆಯ ಮುಖ್ಯಪೇದೆ ಸಿದ್ದರಾಮೇಶಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಯುನೈಟೆಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಿಂಗ್‌ರೋಡ್‌ನಲ್ಲಿರುವ ಭವಾನಿ ನಗರದಲ್ಲಿ ಬುಧವಾರ ಮಧ್ಯಾಹ್ನ ಚನ್ನವೀರನಗರದ ನಿವಾಸಿಯಾಗಿದ್ದ ಪ್ರಶಾಂತ ಕುಂಬಾರ (30) ಎಂಬಾತನ ಮೇಲೆ ದಾಳಿ ನಡೆಸಿ ಕಲ್ಲಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಅನೈತಿಕ ಸಂಬಂಧ ಕೊಲೆ ನಡೆದಿದ್ದು.

KALABURAGI: ಹಾಡಹಗಲೇ ಬರ್ಬರ ಹತ್ಯೆ: ದೃಶ್ಯ ನೋಡಿದರೆ ಎದೆ ಝಲ್‌ ಎನ್ನುತ್ತೆ..!

ತಲೆ ಮರೆಸಿಕೊಂಡಿದ್ದ ಮಂಜುನಾಥಸ್ವಾಮಿ ಸುಳಿವಿನ ಖಚಿತ ಮಾಹಿತಿಯಂತೆ ಪೊಲೀಸ ಕಮಿಷನರ್‌ ಡಾ.ರವಿಕುಮಾರ ವೈ.ಎಸ್‌., ಡಿಸಿಪಿ ಅಡ್ಡೂರು ಶ್ರೀನಿವಾಸುಲು, ಹಿರಿಯ ಎಸಿಪಿ ದೀಪನ್‌ ಎಂ.ಎನ…. ಮಾರ್ಗದರ್ಶನದಲ್ಲಿ ಚೌಕ್‌ ಠಾಣೆಯ ಇನ್ಸ್‌ಪೆಕ್ಟರ್‌ ರಾಜಶೇಖರ ಹಳಿಗೋಧಿ ಮತ್ತು ಪೊಲೀಸ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕೊಲೆ ಪ್ರಕರಣದ ಆರೋಪಿತನಾಗಿದ್ದ ಮಂಜುನಾಥ ಸ್ವಾಮಿ ಗುರುವಾರ ಬೆಳಗ್ಗೆ ಬಂಧಿಸಿದ್ದರು.

ಬಳಿಕ ಆತನನ್ನು ಕೊಲೆ ನಡೆದ ಭವಾನಿ ನಗರದ ಸ್ಥಳಕ್ಕೆ ಕರೆದುಕೊಂಡು ಹೋಗಿ ಪಂಚನಾಮೆ ಮಾಡಿದ್ದರು. ನಂತರ ಕೊಲೆ ಮಾಡಲು ಬಳಸಿದ ಆಯುಧ ಹಾಗೂ ಬಟ್ಟೆಗಳನ್ನು ಬಚ್ಚಿಟ್ಟಿರುವ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಯೂನಾನಿ ಆಸ್ಪತ್ರೆ ಬಳಿಯಿರುವ ಜಾಗದಲ್ಲಿ ಮುಚ್ಚಿಟ್ಟಿರುವುದಾಗಿ ಹೇಳಿದ್ದ. ಅಲ್ಲಿಗೆ ಹೋದಾಗ, ಅಲ್ಲಿ ಆತನೇ ಇಟ್ಟಿದ್ದ ಮಾರಕಾಸ್ತ್ರದಿಂದ ಪೊಲೀಸ ಸಿಬ್ಭಂದಿ ಮೇಲೆ ದಾಳಿ ಮಾಡಿದ. ಇದರಿಂದಾಗಿ ಸಿದ್ದರಾಮೇಶ ಗಾಯಗೊಂಡರು.

ಕೂಡಲೇ ಅಲರ್ಟ್‌ ಆದ ಇನ್ಸ್‌ಪೆಕ್ಟರ್‌ ಹಳಿಗೋಧಿ ಮತ್ತು ಸಿಬ್ಬಂದಿ ಆತನಿಗೆ ಹಾಗೆ ಮಾಡದಂತೆ ಸೂಚನೆ ನೀಡಿದರು. ಆಷ್ಟಿದ್ದರೂ ಮಾರಕಾಸ್ತ್ರದಿಂದ ಉಳಿದವರ ಮೇಲೆ ದಾಳಿ ಮಾಡಲು ಬರುತ್ತಿದ್ದಾಗ ಇನ್ಸ್‌ಪೆಕ್ಟರ್‌ ಹಳಿಗೋಧಿ ಎರಡ್ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ, ಶರಣಾಗದೆ ದಾಳಿಗೆ ಮುಂದಾದ, ಆ ವೇಳೆಯಲ್ಲಿ ಆತನ ಕಡೆಗೆ ಸರ್ವಿಸ್‌ ರಿವಾಲ್ವಾನಿರ್‌ನಿಂದ ಫೈರ್‌ ಮಾಡಿದಾಗ ಆತನ ಕಾಲಿಗೆ ಗುಂಡು ಹೊಕ್ಕಿದೆ.

ಕಲಬುರಗಿ: ಕೊಲೆ ಆರೋಪಿ ಕಾಲಿಗೆ ಪೊಲೀಸರ ಗುಂಡೇಟು..!

ಗುಂಡು ಹಾರಿಸಿದ ಬಳಿಕವೂ ಓಡಿಹೋಗಲು ಯತ್ನಿಸಿದ, ಪೊಲೀಸರು ಬೆನ್ನಟ್ಟಿದಾಗ ಕುಸಿದು ನೆಲಕ್ಕೆ ಬಿದ ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಕೂಡಲೇ ಪೊಲೀಸ ವಾಹನದಲ್ಲಿ ಕುಳ್ಳಿರಿಸಿಕೊಂಡು ಜಿಮ್ಸ್‌ ಆಸ್ಪತ್ರೆ ತಂದು ದಾಖಲಿಸಿದರು. ವೈದ್ಯರು ತುರ್ತು ಶಸ್ತ್ರ ಚಿಕಿತ್ಸೆ ನಡೆಸಿ, ಚಿಕಿತ್ಸೆ ನೀಡಿದ್ದಾರೆ. ಈಗ ಚೇತರಿಸಿಕೊಂಡಿದ್ದು ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಸುದ್ದಿ ಅರಿಯುತ್ತಲೇ ಪೊಲೀಸ ಆಯುಕ್ತರು, ಡಿಸಿಪಿ, ಎಸಿಪಿ ಅವರು ಸ್ಥಳಕ್ಕೆ ಭೇಟಿ ನೀಡಿದರು. ಯುನೈಟೆಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮೇಶ ಆರೋಗ್ಯ ವಿಚಾರಿಸಿದರು. ಜಿಮ್ಸ್‌ ಆಸ್ಪತ್ರೆಗೂ ಭೇಟಿ ನೀಡಿದರು. ಘಟನೆ ಕುರಿತು ಮಾಹಿತಿ ಪಡೆದುಕೊಂಡರು. ಈ ಕುರಿತು ಚೌಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!