ಕೊಲೆ ಪ್ರಕರಣ: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದವನಿಗೆ ಗುಂಡೇಟು

By Kannadaprabha News  |  First Published Aug 6, 2020, 9:48 AM IST

ಮಾರಕಾಸ್ತ್ರ ಜಪ್ತಿಗೆ ತೆರಳಿದ್ದಾಗ ರೌಡಿಶೀಟರ್‌ ಘಟನೆ| ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಆರೋಪಿ ಯತ್ನ| ಈ ವೇಳೆ ಪೊಲೀಸರಿಗೆ ಗಾಯ| ಆರೋಪಿ ಕಾಲಿಗೆ ಗುಂಡು ಹೊಡೆದ ಇನ್ಸ್‌ಪೆಕ್ಟರ್‌| ಗಾಯಾಳು ಆಸ್ಪತ್ರೆಗೆ ದಾಖಲು|


ಬೆಂಗಳೂರು(ಆ.06): ಕೊಲೆ ಪ್ರಕರಣದಲ್ಲಿ ಮಾರಕಾಸ್ತ್ರ ಜಪ್ತಿಗೆ ತೆರಳಿದ್ದಾಗ ತನಿಖಾ ತಂಡದ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಯೊಬ್ಬನಿಗೆ ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಗುಂಡು ಹೊಡೆದು ಬಂಧಿಸಿರುವ ಘಟನೆ ಬುಧವಾರ ನಡೆದಿದೆ.

ನಗರದ ಡಿ.ಜೆ.ಹಳ್ಳಿ ನಿವಾಸಿ ಅನೀಸ್‌ ಅಹಮ್ಮದ್‌ (32) ಎಂಬಾತನಿಗೆ ಗುಂಡೇಟು ಬಿದ್ದಿದ್ದು, ಕೆ.ಜಿ.ಹಳ್ಳಿಯ ರೋಲಿಂಗ್‌ ಮಿಲ್‌ ಸಮೀಪ ಈ ಗುಂಡಿನ ದಾಳಿ ನಡೆದಿದೆ. ಹಲವು ದಿನಗಳಿಂದ ಅನೀಸ್‌ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದು, ಆತನ ಮೇಲೆ ಕೊಲೆ, ಕೊಲೆ ಯತ್ನ, ಜೀವ ಬೆದರಿಕೆ ಸೇರಿದಂತೆ 25ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಅಪರಾಧ ಹಿನ್ನೆಲೆಯಲ್ಲಿ ಅನೀಸ್‌ ವಿರುದ್ಧ ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮೇ.30 ರಂದು ನಡೆದಿದ್ದ ಅಸ್ಗರ್‌ ಕೊಲೆ ಪ್ರಕರಣ ಸಂಬಂಧ ಅನೀಸ್‌ನನ್ನು ಬಂಧಿಸಲಾಗಿತ್ತು ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್‌.ಡಿ.ಶರಣಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.

Latest Videos

undefined

ಹುಚ್ಚು ಪ್ರೀತಿಗೆ ಹೆತ್ತ ತಾಯಿಯನ್ನೇ ಕೊಚ್ಚಿ ಕೊಂದ, ಮಂಡ್ಯದ ಮರ್ಡರ್ ಕಹಾನಿ

ಕೆ.ಜಿ.ಹಳ್ಳಿ ಹತ್ತಿರ ಹತ್ಯೆ ಕೃತ್ಯಕ್ಕೆ ಬಳಸಲಾಗಿದ್ದ ಮಾರಕಾಸ್ತ್ರ ಜಪ್ತಿ ಸಲುವಾಗಿ ಆರೋಪಿಯನ್ನು ಬುಧವಾರ ಬೆಳಗ್ಗೆ ತನಿಖಾ ತಂಡ ಕರೆದೊಯ್ದಿದಿದೆ. ಆಗ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಅನೀಸ್‌ ಯತ್ನಿಸಿದ್ದಾನೆ. ಈ ವೇಳೆ ಪಿಎಸ್‌ಐ ಶಾಜು ಅಂತೋನಿ ಹಾಗೂ ಹೆಡ್‌ ಕಾನ್‌ಸ್ಟೇಬಲ್‌ ಶ್ರೀನಿವಾಸ್‌ ಮೂರ್ತಿ ಅವರಿಗೆ ಪೆಟ್ಟಾಗಿದೆ. ಈ ಹಂತದಲ್ಲಿ ಒಂದು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗೆ ಇನ್ಸ್‌ಪೆಕ್ಟರ್‌ ಅಜಯ್‌ ಸಾರಥಿ ಸೂಚಿಸಿದ್ದಾರೆ. ಆದರೆ ಈ ಮಾತಿಗೆ ಮಣಿಯದೆ ಮತ್ತೆ ಹಲ್ಲೆಗೆ ಮುಂದಾದಾಗ ಆರೋಪಿ ಕಾಲಿಗೆ ಇನ್ಸ್‌ಪೆಕ್ಟರ್‌ ಗುಂಡು ಹೊಡೆದಿದ್ದಾರೆ. ಬಳಿಕ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
 

click me!