ಅಕ್ರಮ ಮದ್ಯ ಮಾರಾಟ ತಡೆಯಬೇಕಾದ ಪೊಲೀಸ್ ಪೇದೆಯೇ ಗೋವಾದಿಂದ ಕಾರಿನಲ್ಲಿ ಅಕ್ರಮ ಮದ್ಯ ಸಾಗಾಟ ಮಾಡಿ ಗೋಕರ್ಣ ಬೀಚಿನಲ್ಲಿ ಮಾರಾಟ ಮಾಡುತ್ತಿದ್ದ ಘಟನೆ ನಡೆದಿದ್ದು, ಆರೋಪಿ ಪೊಲೀಸಪ್ಪನನ್ನು ಗೋಕರ್ಣ ಪೊಲೀಸರು ಬಂಧಿಸಿದ್ದಾರೆ
ಕಾರವಾರ, ಉತ್ತರಕನ್ನಡ (ಜೂ.12): ನೆರೆಯ ರಾಜ್ಯ ಗೋವಾದಿಂದ ರಾಜ್ಯಕ್ಕೆ ಅಕ್ರಮವಾಗಿ ಮದ್ಯ ಸಾಗಾಟ ಎಗ್ಗಿಲ್ಲದೇ ನಡೆಯುತ್ತಿದೆ. ಪೊಲೀಸರು ಎಷ್ಟೇ ಬಿಗಿ ಕ್ರಮ ಕೈಗೊಂಡು ವಾಹನಗಳ ತಪಾಸಣೆ ನಡೆಸಿದರೂ ಅಕ್ರಮ ಸಾಗಾಟ ನಿಲ್ಲಿಸಲಾಗುತ್ತಿಲ್ಲ. ಅದಕ್ಕೆ ಕಾರಣ ಕೆಲವು ಪೊಲೀಸ್ ಅಧಿಕಾರಿಗಳು ಹಾಗೂ ಪೇದೆಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾ ಬಂದಿದ್ದಾರೆ. ಅದೀಗ ನಿಜವಾಗಿದೆ ನೋಡಿ, ಅಕ್ರಮ ಮದ್ಯ ಸಾಗಾಟ ತಡೆಯಬೇಕಿದ್ದ ಪೊಲೀಸಪ್ಪನೇ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಓಂ ಬೀಚ್‌ನಲ್ಲಿ ನಡೆದಿದೆ.
ಕಾರವಾರ ತಾಲೂಕಿನ ಕದ್ರಾ ಠಾಣೆಯ ಕಾನ್ಸ್ ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿರುವ ಸಂತೋಷ್ ಲಮಾಣಿ ಕಾರಿನಲ್ಲಿ ತಂದು ಓಂ ಬೀಚ್‌ನಲ್ಲಿ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದು ಗೋಕರ್ಣ ಪೊಲೀಸರು ಆರೋಪಿಯನ್ನ ಮದ್ಯ ಮಾರಾಟ ಮಾಡುವಾಗಲೇ ದಾಳಿ ನಡೆಸಿ ಬಂಧಿಸಿದ್ದಾರೆ.
undefined
ಉತ್ತರ ಕನ್ನಡದಲ್ಲಿ ಭಾರೀ ಮಳೆ: ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ನುಗ್ಗಿದ ಕೊಳಚೆ ನೀರು
ಬಂಧಿತನಿಂದ 50 ಸಾವಿರಕ್ಕೂ ಅಧಿಕ ಮೌಲ್ಯದ ಗೋವಾ ಮದ್ಯ ಹಾಗೂ ಕಾರು ವಶಕ್ಕೆ ಪಡೆದಿರುವ ಪೊಲೀಸರು. ಪೊಲೀಸ್ ಆಗಿರುವುದರಿಂದ ಯಾರೂ ತಪಾಸಣೆ ಮಾಡೊಲ್ಲವೆಂಬ ದುರ್ಬುದ್ಧಿಯಿಂದ ಗೋವಾದಿಂದ ಅಕ್ರಮ ಮದ್ಯ ತಂದು ಬೀಚ್‌ನಲ್ಲಿ ಮಾರುತ್ತಿದ್ದ ಆರೋಪಿ. ಎಷ್ಟು ದಿನಗಳಿಂದ ಹೀಗೆ ಮಾಡುತ್ತಿದ್ದ? ಇದುವರೆಗೆ ಅಕ್ರಮ ಮದ್ಯ ಸಾಗಾಟ ಪ್ರಕರಣದಲ್ಲಿ ಕಾನ್‌ಸ್ಟೇಬಲ್ ಪಾತ್ರವಿದೆಯೇ ಎಲ್ಲ ಆಯಾಮಗಳಲ್ಲಿ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಸದ್ಯ ಪ್ರಕರಣ ಸಂಬಂಧ ಗೋಕರ್ಣ ಠಾಣೆಯಲ್ಲಿ ಪೊಲೀಸಪ್ಪನ ವಿರುದ್ಧ ಪ್ರಕರಣ ದಾಖಲಾಗಿದೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.