ಎಣ್ಣೆ ಮತ್ತಲ್ಲಿ ಸ್ನೇಹಿತರು ರಹಸ್ಯವೊಂದರನ್ನು ಬಾಯ್ಬಿಟ್ಟಿದ್ದಾರೆ. ಇದರಿಂದ 8 ತಿಂಗಳ ಬಳಿಕ ಅಜ್ಜನ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.
ತುಮಕೂರು, (ಸೆಪ್ಟೆಂಬರ್.09): ಆಸ್ತಿ ಆಸೆಗಾಗಿ ಸ್ವಂತ ತಾತನನ್ನೇ ಕೊಲೆ ಮಾಡಿದ್ದ ಮೊಮ್ಮಗನ ಕೃತ್ಯ ಎಂಟು ತಿಂಗಳ ಬಳಿಕ ಬಯಲಾಗಿದೆ.
ಹೌದು...ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮೊಮ್ಮಗನೇ ತನ್ನ ತಂದೆಯ ಅಪ್ಪ ಅಂದ್ರೆ ತಾತನನ್ನೇ ಕೊಂದಿದ್ದ. ಇದೀಗ ಕೊಲೆ ಆರೋಪಿಯ ಸ್ನೇಹಿತರು ನಶೆಯಲ್ಲಿ ಬಾಯ್ಬಿಟ್ಟಿದ್ದು, ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಗುಬ್ಬಿ ತಾಲೂಕಿನ ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.
ಇದೀಗ ಕೊಲೆಯ ವಿಚಾರ ತಿಳಿಯುತ್ತಿದ್ದಂತೆ ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ. ಗೋವಿಂದಪ್ಪ (75) ಕೊಲೆಯಾಗಿದ್ದ ದುರ್ದೈವಿ. ಮೋಹನ್, ಕೊಲೆ ಮಾಡಿದ ಪಾಪಿ ಮೊಮ್ಮಗ. ಮೋಹನ್ ಸ್ನೇಹಿತರಾದ ಪ್ರಜ್ವಲ್, ಚೇತನ್ ಜೊತೆ ಸೇರಿ ಮೂವರನ್ನು ಗುಬ್ಬಿ ತಾಲೂಕಿನ ಚೇಳೂರು ಪೊಲೀರು ಅರೆಸ್ಟ್ ಮಾಡಿದ್ದಾರೆ.
Belagavi: ತಾಯಿಗೆ ಚಿಕಿತ್ಸೆ ಕೊಡಿಸಲು ಅಡ್ಡಿ ಮಾಡಿದ ತಂದೆಯನ್ನೇ ಕೊಲೆ ಮಾಡಿದ ಮಗ
ಕೊಲೆಯಾದ ಬಳಿಕ ಮೋಹನ್ ಪ್ರತಿದಿನ ತನ್ನಿಬ್ಬರು ಸ್ನೇಹಿತರಿಗೆ ಎಣ್ಣೆ ಪಾರ್ಟಿ ಕೊಡಿಸುತ್ತಿದ್ದ. ಇತ್ತೀಚೆಗೆ ತನ್ನಿಬ್ಬರು ಸ್ನೇಹಿತರನ್ನ ದೂರವಿಟ್ಟು ಎಣ್ಣೆ ಪಾರ್ಟಿ ಕೊಡಿಸೋದನ್ನ ನಿಲ್ಲಿಸಿದ್ದ. ಇದರಿಂದ ಮೂವರಲ್ಲೇ ವೈಮನಸ್ಸು ಉಂಟಾಗಿತ್ತು. ಕಳೆದ ವಾರ ಎಣ್ಣೆ ಕುಡಿದ ಮತ್ತಲ್ಲಿ ಚೇತನ್ ಹಾಗೂ ಪ್ರಜ್ವಲ್ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾರೆ. ಕೊಲೆ ಮಾಡಿ ಹೂತಿಟ್ಟಿದ್ದ ಮೃತದೇಹವನ್ನ ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಸದ್ಯ ಚೇಳೂರು ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.
ಘಟನೆ ಹಿನ್ನೆಲೆ:
ಕೊಲೆಯಾದ ಗೋವಿಂದಪ್ಪ ನಾಲ್ಕು ಎಕರೆ ಜಮೀನು ಹೊಂದಿದ್ದ. ಗೋವಿಂದಪ್ಪನಿಗೆ ಒಬ್ಬ ಮಗ, ಓರ್ವ ಮಗಳಿದ್ದಳು.ಈ ಹಿನ್ನೆಲೆಯಲ್ಲಿ ಇಬ್ಬರಿಗೂ ಸಮಾನವಾಗಿ ಆಸ್ತಿ ಹಂಚಿಕೆ ಮಾಡ್ಬೇಕು ಅಂತ ಗೋವಿಂದಪ್ಪ ಪ್ಲಾನ್ ಮಾಡಿದ್ದ.
ತನ್ನ ತಂದೆ ಮಾತಿಗೆ ತಲೆಕೊಡಿಸಿಕೊಳ್ಳದೇ ಗೋವಿಂದಪ್ಪನ ಪುತ್ರ ವೆಂಕಟರಮಣಪ್ಪ ಸುಮ್ಮನಾಗಿದ್ದ. ಆದರೆ ಇದನ್ನ ಸಹಿಸದ ಮೊಮ್ಮಗ ಮೋಹನ್, ಎಲ್ಲಿ ತಮ್ಮ ಆಸ್ತಿಯನ್ನ ಅತ್ತೆಗೆ ನಮ್ಮ ತಾತ ಬರೀತಾನೆ ಅಂತ ಕೊಲೆ ಸ್ಕೆಚ್ ಹಾಕಿದ್ದ. ಅದರಂತೆ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಕಳೆದ ಜನವರಿ 20ರಂದು ಗೋವಿಂದಪ್ಪನನ್ನ ತೋಟದ ಬಳಿ ಕರೆದೊಯ್ದು ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಅಲ್ಲೇ ಹಾಳು ಬಿದ್ದ ಜಾಗದಲ್ಲಿ ಗುಂಡಿ ತೋಡಿ ಗೋವಿಂದಪ್ಪನ ಮೃತದೇಹವನ್ನ ಹೂತಾಕಿದ್ರು.
ಬಳಿಕ ತಮಗೆ ಏನು ತಿಳಿಯದ ಹಾಗೇ ಆರಾಮಾಗಿ ಓಡಾಡಿಕೊಂಡಿದ್ರು. ಏನು ತಿಳಿಯದ ಗೋವಿಂದಪ್ಪನ ಪುತ್ರ ವೆಂಕಟರಮಣಪ್ಪ,ತನ್ನ ತಂದೆ ಎಲ್ಲೋ ಕಾಣೆಯಾಗಿದ್ದಾರೆ ಎಂದು ಗುಬ್ಬಿ ತಾಲೂಕಿನ ಚೇಳೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದ. ಆದ್ರೆ, ಇದೀಗ ಎಣ್ಣೆ ಮತ್ತಲ್ಲಿ ಸ್ನೇಹಿತರು ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾರೆ. ಆರೋಪಿಗಳ ಮಾಹಿತಿ ಮೇರೆಗೆ ಬುಧವಾರ(ಸೆ.7) ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.