ರಾಮನಗರ: 30 ತಲೆಬುರುಡೆ, ಮೂಳೆ ಇಟ್ಟು ವಾಮಾಚಾರ..!

By Kannadaprabha News  |  First Published Mar 12, 2024, 9:21 AM IST

ತನ್ನ ಸಂಬಂಧಿಗಳಿಗೆ ಸೇರಿದ ಸುಮಾರು 4 ಎಕರೆ ಜಾಗವನ್ನು ಬಲರಾಮ ಕುಟುಂಬ ಅತಿಕ್ರಮಿಸಿಕೊಂಡಿತ್ತು. ಸ್ಮಶಾನಕಾಳಿ ಪೀಠದ ಬೋರ್ಡ್ ಅಳವಡಿಸಿ ಸಂಬಂಧಿಗಳಲ್ಲಿ ಭಯ ಹುಟ್ಟಿಸಿದ್ದ. ನಂತರದಲ್ಲಿ ಅವರು ಜಮೀನಿಗೆ ಬರುವುದನ್ನು ನಿಲ್ಲಿಸಿದ್ದರು. ಈತನ ಕೃತ್ಯದ ಹಿಂದೆ ಜಮೀನು ಕಬಳಿಸುವ ತಂತ್ರವೂ ಇರಬಹುದೆಂದು ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.


ರಾಮನಗರ(ಮಾ.12):  ತಲೆ ಬುರುಡೆ ಮತ್ತು ಕೈಕಾಲು ಮೂಳೆಗಳನ್ನು ಸಂಗ್ರಹಿಸಿಟ್ಟುಕೊಂಡು ವಾಮಾಚಾರ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ರಾಮನಗರ ತಾಲೂಕಿನ ಬಿಡದಿ ಹೋಬಳಿ ಜೋಗರದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಜಮೀನಿನ ಶೆಡ್‌ನಲ್ಲಿ 30ಕ್ಕೂ ಹೆಚ್ಚು ಮನುಷ್ಯನ ತಲೆಬುರುಡೆ ಹಾಗೂ ಕೈಕಾಲು ಮೂಳೆಗಳನ್ನು ಸಂಗ್ರಹಿಸಲಾಗಿತ್ತು. ಮಾಟಗಾರ ಬಲರಾಮ್‌ನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ವಿಧಿವಿಜ್ಞಾನ ಅಧಿಕಾರಿಗಳು ಬುರುಡೆ ಹಾಗೂ ಕೈಕಾಲುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Tap to resize

Latest Videos

ದೇವೇಗೌಡ ಕುಟುಂಬದಿಂದ ವಾಮಾಚಾರ ನಡೆತಿದ್ಯಾ? ತಮಗಾದ ಅನುಭವದ ಸತ್ಯ ಬಿಚ್ಚಿಟ್ಟ ಸಚಿವ ಕೆಎನ್ ರಾಜಣ್ಣ!

ಬಿಡದಿ ಪುರಸಭೆ 18ನೇ ವಾರ್ಡ್ ವ್ಯಾಪ್ತಿಯ ಜೋಗರದೊಡ್ಡಿ ಗ್ರಾಮದ ಬಳಿ ಜಮೀನಿನಲ್ಲಿ ಬಲರಾಮ ಶೆಡ್‌ ನಿರ್ಮಿಸಿ ‘ಶ್ರೀ ಸ್ಮಶಾನಕಾಳಿ ಪೀಠ’ ಪೂಜಾ ಕುಟೀರವನ್ನು ಸ್ಥಾಪಿಸಿಕೊಂಡಿದ್ದ. ಅಮಾವಾಸ್ಯೆ, ಹುಣ್ಣಿಮೆಯಂದು ಸ್ಮಶಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದ. ಪೂಜಾ ಕುಟೀರ ಇದ್ದ ಸ್ಥಳಕ್ಕೆ ಯಾರನ್ನೂ ಬರಲು ಬಿಡುತ್ತಿರಲಿಲ್ಲ.

ಐದಾರು ವರ್ಷಗಳಿಂದ ಜೋಗರದೊಡ್ಡಿ ಬಳಿಯಿರುವ ಸ್ಮಶಾನದಲ್ಲಿ ದೇವರ ಗೂಡು ನಿರ್ಮಿಸಿ ಒಳಗೆ ಕಾಳಿದೇವಿ ಫೋಟೋ ಮತ್ತು ಹೊರಗಡೆ ತ್ರಿಶೂಲವನ್ನಿಟ್ಟು ಪೂಜೆ ಸಲ್ಲಿಸುತ್ತಿದ್ದ. ಸ್ಥಳೀಯರು ಸ್ಮಶಾನದಲ್ಲಿ ಪೂಜೆ ಮಾಡದಂತೆ ಎಚ್ಚರಿಸಿದ್ದರು. ಆದರೂ, ಆತ ಕದ್ದುಮುಚ್ಚಿ ಪೂಜೆ ಮುಂದುವರಿಸಿದ್ದ ಎಂದು ತಿಳಿದು ಬಂದಿದೆ.

ಮಾರ್ಚ್ 10ರಂದು ಅಮಾವಾಸ್ಯೆ ದಿನ ರಾತ್ರಿ 9.30ಕ್ಕೆ ತನ್ನ ಸಹೋದರ ರವಿಯೊಂದಿಗೆ ಸ್ಮಶಾನಕ್ಕೆ ತೆರಳಿದ ಬಲರಾಮ ಪೂಜಾಕಾರ್ಯ ನಡೆಸುತ್ತಿದ್ದ. ಆತನ ಬಗ್ಗೆ ಅನುಮಾನಗೊಂಡ ಕೆಲ ಗ್ರಾಮಸ್ಥರು ಬಿಡದಿ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದರು. ಬಳಿಕ ಸ್ಮಶಾನಕಾಳಿ ಪೀಠಕ್ಕೆ ಕರೆದೊಯ್ದು ಬಾಗಿಲು ತೆರೆಸಿದಾಗ ಮನುಷ್ಯರ ಬುರುಡೆ, ಕೈಕಾಲು ಮೂಳೆಗಳ ರಾಶಿ, ಹೋಮ ಕುಂಡ, ಭದ್ರಕಾಳಿ ಚಿತ್ರ, ಮೂರ್ತಿ, ತ್ರಿಶೂಲ, ಮೂಳೆ ಮತ್ತು ಬುರುಡೆಗಳಿಂದ ನಿರ್ಮಿಸಿದ್ದ ಆಸನ(ಪೀಠ), ಪೂಜಾ ಸಾಮಗ್ರಿ ಸಿಕ್ಕಿವೆ.

ವಾಮಾಚಾರ ಮಾಡುತ್ತಿದ್ದ ದಂಪತಿ ಸಜೀವ ದಹನ, 17 ಮಂದಿಗೆ ಜೀವಾವಧಿ ಶಿಕ್ಷೆ ನೀಡಿದ ಕೋರ್ಟ್‌!

ಜಮೀನಿನ ಪಾಲಿಗಾಗಿ ಮಾಠ?

ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ ಮಾಡಿರುವ ಬಲರಾಮ, ಬಿಡದಿಯಲ್ಲಿ ಟೀ ಹೋಟೆಲ್ ಇಟ್ಟುಕೊಂಡಿದ್ದಾನೆ. ಅಲ್ಲದೆ, ಸ್ಮಶಾನದಲ್ಲಿ ಗುಂಡಿ ತೆಗೆಯುವ ಕೆಲಸ ಕೂಡಾ ಮಾಡುತ್ತಿದ್ದ. ಗುಂಡಿಯಲ್ಲಿ ಸಿಗುತ್ತಿದ್ದ ಬುರುಡೆ ಮತ್ತು ಮೂಳೆಗಳನ್ನು ಸಂಗ್ರಹಿಸಿ ತನ್ನ ಪೀಠಕ್ಕೆ ತರುತ್ತಿದ್ದಾಗಿ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ. 

ತನ್ನ ಸಂಬಂಧಿಗಳಿಗೆ ಸೇರಿದ ಸುಮಾರು 4 ಎಕರೆ ಜಾಗವನ್ನು ಬಲರಾಮ ಕುಟುಂಬ ಅತಿಕ್ರಮಿಸಿಕೊಂಡಿತ್ತು. ಸ್ಮಶಾನಕಾಳಿ ಪೀಠದ ಬೋರ್ಡ್ ಅಳವಡಿಸಿ ಸಂಬಂಧಿಗಳಲ್ಲಿ ಭಯ ಹುಟ್ಟಿಸಿದ್ದ. ನಂತರದಲ್ಲಿ ಅವರು ಜಮೀನಿಗೆ ಬರುವುದನ್ನು ನಿಲ್ಲಿಸಿದ್ದರು. ಈತನ ಕೃತ್ಯದ ಹಿಂದೆ ಜಮೀನು ಕಬಳಿಸುವ ತಂತ್ರವೂ ಇರಬಹುದೆಂದು ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

click me!