ಪಿಟ್ಬುಲ್ ಶ್ವಾನವೊಂದು ಪಂಜಾಬ್‌ನಲ್ಲಿ ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡಿದ್ದು, 10 ಕ್ಕೂಹೆಚ್ಚು ಜನರನ್ನು ಗಾಯಗೊಳಿಸಿದೆ. ಬಳಿಕ, ಆತ್ಮ ರಕ್ಷಣೆಗಾಗಿ ಪಿಟ್‌ಬುಲ್ ಶ್ವಾನವನ್ನು ನಿವೃತ್ತ ಸೈನಿಕರೊಬ್ಬರು ಗ್ರಾಮಸ್ಥರ ಸಹಕಾರದಿಂದ ಕೊಂದು ಹಾಕಿದ್ದಾರೆ.
ಪಿಟ್‌ಬುಲ್ ನಾಯಿ (Pitbull Dog) ತನ್ನ ಮಾಲೀಕರು ಸೇರಿ ಅನೇಕರ ಮೇಲೆ ದಾಳಿ ಮಾಡುತ್ತದೆ, ಹಲವರನ್ನು ಕೊಂದು ಹಾಕಿದೆ ಎಂಬ ಪ್ರಕರಣಗಳನ್ನು ಆಗಾಗ್ಗೆ ವರದಿಯಾಗುತ್ತಿರುತ್ತದೆ. ಇದೇ ರೀತಿ, ಪಂಜಾಬ್‌ನ ಗುರುದಾಸ್‌ಪುರದ (Gurudaspur) 5 ಗ್ರಾಮಗಳಲ್ಲಿ 12 ಜನರ ಮೇಲೆ ಪಿಟ್‌ಬುಲ್ ದಾಳಿ ಮಾಡಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಟ್ಯಾಂಗೋ ಶಾ ಗ್ರಾಮದಿಂದ ಚುಹಾನ್ ಗ್ರಾಮದವರೆಗೆ ಸುಮಾರು 15 ಕಿ.ಮೀ.ನಷ್ಟು ದೂರ ಹಾದುಹೋದ ನಾಯಿ, ದಾರಿಯಲ್ಲಿ ಸಿಕ್ಕಸಿಕ್ಕ ಜನರ ಮೇಲೆ ದಾಳಿ ಮಾಡಿತು. ಕೊನೆಯಲ್ಲಿ, ನಿವೃತ್ತ ಸೈನಿಕರೊಬ್ಬರು ತಮ್ಮ ಆತ್ಮರಕ್ಷಣೆಗಾಗಿ (Self Defence) ಪಿಟ್‌ಬುಲ್ ನಾಯಿಯನ್ನು ಕೊಂದಿದ್ದಾರೆ ಎಂದೂ ತಿಳಿದುಬಂದಿದೆ.
ಟ್ಯಾಂಗೋ ಶಾ ಗ್ರಾಮದ (Village) ಬಳಿ ಪಿಟ್‌ಬುಲ್ ಶ್ವಾನ ಮೊದಲು ಇಬ್ಬರು ಕಾರ್ಮಿಕರಿಗೆ (Labourers) ಕಚ್ಚಿದೆ. ನಂತರ, ಅದರ ಕೊರಳಿಗೆ ಚೈನ್ ಎಸೆದು ಆ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ನಾಯಿ ತಪ್ಪಿಸಿಕೊಂಡು ಗ್ರಾಮದೊಳಗೆ ನುಗ್ಗಿತು.
ಇದನ್ನು ಓದಿ: ನಾಯಿ ದಾಳಿಯ ಮತ್ತೊಂದು ಭಯಾನಕ ವಿಡಿಯೋ ವೈರಲ್: ಹಸುವನ್ನು ಕಚ್ಚಿ ಎಳೆದಾಡಿದ ಪಿಟ್ಬುಲ್ ಶ್ವಾನ
ಬಳಿಕ, ತನ್ನ ನಿವಾಸದಲ್ಲಿ ಕುಳಿತಿದ್ದ 60 ವರ್ಷದ ದಿಲೀಪ್ ಕುಮಾರ್ ಎಂಬುವರ ಮೇಲೂ ಈ ಶ್ವಾನ ದಾಳಿ ನಡೆಸಿದೆ. ದಿಲೀಪ್ ಕುಮಾರ್ ನಾಯಿಯ ಕುತ್ತಿಗೆಯನ್ನು ಹಿಡಿದು ನಿಲ್ಲಿಸಲು ಪ್ರಯತ್ನಿಸಿದರು, ಆದರೆ ಪಿಟ್‌ಬುಲ್ ನಾಯಿ ಅವರನ್ನು ಕೆಲವು ಮೀಟರ್‌ಗಳಷ್ಟು ದೂರ ಎಳೆದೊಯ್ದಿತು, ಇದರಿಂದ ದಿಲೀಪ್ ಕುಮಾರ್‌ಗೆ ತೀವ್ರ ರಕ್ತಸ್ರಾವವಾಯಿತು. ಅದೃಷ್ಟವಶಾತ್, ದಿಲೀಪ್ ಕುಮಾರ್ ಅವರ ಸಹೋದರ ಅವರನ್ನು ರಸ್ತೆಯಿಂದ ಗೇಟ್ ಒಳಗೆ ಎಳೆದುಕೊಂಡು ಹೋಗಿ ಅವರ ಪ್ರಾಣ ಉಳಿಸಿದ್ದಾರೆ ಎಂದು ತಿಳಿದುಬಂದಿದೆ.
ಇಷ್ಟಕ್ಕೂ ಸುಮ್ಮನಾಗದ ಪಿಟ್‌ಬುಲ್ ಶ್ವಾನ, ನಂತರ ಬಲದೇವ್ ರಾಜ್ ಎಂಬುವರ ಮೇಲೆ ದಾಳಿ ಮಾಡಿ ಅವರ ಕಾಲಿಗೆ ಗಾಯಗೊಳಿಸಿದೆ. ಅಲ್ಲಿಂದ ಘರೋಟಾ ರಸ್ತೆಯ ಕಡೆಗೆ ಓಡಿದ ಪಿಟ್‌ಬುಲ್, ದಾರಿಯಲ್ಲಿ ಅನೇಕ ಪ್ರಾಣಿಗಳನ್ನು ಕೊಂದು ಇಟ್ಟಿಗೆ ಫ್ಯಾಕ್ಟರಿಗೆ (Brick Kiln) ಹೋಗಿದೆ.
ನಂತರ ಆ ಶ್ವಾನ ಆ ಇಟ್ಟಿಗೆ ಫ್ಯಾಕ್ಟರಿಯಲ್ಲಿದ್ದ ನೇಪಾಳಿ ವಾಚ್‌ಮನ್ (Watch Man) ರಾಮನಾಥ್ ಅವರ ಮೇಲೆ ದಾಳಿ ಮಾಡಿದೆ. ಆದರೆ, ರಾಮನಾಥ್ ಅವರನ್ನು ಎರಡು 2 ಬೀದಿ ನಾಯಿಗಳು ರಕ್ಷಿಸಿವೆ. ಅಲ್ಲಿಂದ ಛಾನಿ ಗ್ರಾಮಕ್ಕೆ ಓಡಿದ ಪಿಟ್‌ಬುಲ್ ಅಲ್ಲಿ ಮಲಗಿದ್ದ ಮಂಗಲ್ ಸಿಂಗ್‌ಗೆ ಕಚ್ಚಿದೆ. ಬಳಿಕ, ಮುಂಜಾನೆ 5 ಗಂಟೆಗೆ, ಪಿಟ್‌ಬುಲ್ ಮತ್ತೊಂದು ಗ್ರಾಮವನ್ನು ತಲುಪಿತು ಮತ್ತು ಬೆಳಗಿನ ವಾಕಿಂಗ್ ಮಾಡುವವರ ಮೇಲೆ ದಾಳಿ ಮಾಡಿ ಗಾಯಗೊಳಿಸಿತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪಿಟ್‌ಬುಲ್ ನಾಯಿಗಳು ಎಷ್ಟು ಅಪಾಯಕಾರಿ? ಇವುಗಳ ಮೇಲೆ ನಿಷೇಧ ಹೇರಬೇಕಾ?
ಪಿಟ್‌ಬುಲ್ ನಂತರ ಚುಹಾನ್ ಗ್ರಾಮದ ಕಡೆಗೆ ಓಡಿಹೋಗಿ ಮೈದಾನದಲ್ಲಿ ನಡೆಯುತ್ತಿದ್ದ ಕ್ಯಾಪ್ಟನ್ ಶಕ್ತಿ ಸಿಂಗ್ ಎಂಬ ನಿವೃತ್ತ ಸೇನಾಧಿಕಾರಿಯ ಮೇಲೆ ದಾಳಿ ಮಾಡಿ ಅವರ ಕೈಗೆ ತೀವ್ರವಾಗಿ ಗಾಯಗೊಳಿಸಿದೆ. ಶಕ್ತಿ ಸಿಂಗ್ ನಾಯಿಯನ್ನು ಅದರ ಎರಡೂ ಕಿವಿಗಳಿಂದ ಹಿಡಿದಿದ್ದರು. ನಂತರ ಗ್ರಾಮಸ್ಥರು ಅವರ ರಕ್ಷಣೆಗೆ ಬಂದರು ಮತ್ತು ಆ ವೇಳೆ ಶಕ್ತಿ ಸಿಂಗ್ ಇತರರೊಂದಿಗೆ ಸೇರಿಕೊಂಡು ಪಿಟ್‌ಬುಲ್ ನಾಯಿಯನ್ನು ಕೊಂದರು.
ಇನ್ನು, ಗಾಯಾಳುಗಳನ್ನು ದೀನಾನಗರ ಮತ್ತು ಗುರುದಾಸ್‌ಪುರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ರಕ್ಕಸನಾದ ಸಾಕು ಪಿಟ್‌ಬುಲ್ ನಾಯಿ, ಒಡತಿಯನ್ನೇ ಕಚ್ಚಿ ಎಳೆದಾಡಿ ಸಾಯಿಸಿತು!