
ಜನರನ್ನು ಮೋಸ ಮಾಡಲು ಹೊಸ ಹೊಸ ಮಾರ್ಗಗಳನ್ನು ಖದೀಮರು ಹುಡುಕುತ್ತಲೇ ಇರುತ್ತಾರೆ. ಸೈಬರ್ ಕ್ರೈಂಗಳಂತೂ ಲೆಕ್ಕವೇ ಇಲ್ಲ. ಆದರೆ ಈ ಅಪರಾಧಕ್ಕೆ ಸಕತ್ ತಲೆ ಓಡಿಸಬೇಕಾಗುತ್ತದೆ. ಕಳ್ಳತನದಲ್ಲಿ ಅಷ್ಟೇ ಜಾಣ್ಮೆಯೂ ಇರಬೇಕಾಗುತ್ತದೆ. ಇದರ ಹೊರತಾಗಿಯೂ ಸೈಬರ್ ಅಪರಾಧ ಎಗ್ಗಿಲ್ಲದೇ ನಡೆಯುತ್ತಿರುವ ನಡುವೆಯೇ, ಏನೂ ಸಾಹಸ ಪಡದೇ ಅತಿ ಸುಲಭದಲ್ಲಿ ಜನರನ್ನು ಮರಳು ಮಾಡುವ ದೊಡ್ಡ ದಂಧೆ ಶುರುವಾಗಿದೆ. ಅದರಲ್ಲಿಯೂ ಹೆಣ್ಣುಮಕ್ಕಳೇ ಇವರ ಟಾರ್ಗೆಟ್. ಅತಿ ಸುಲಭದಲ್ಲಿ ಹೆಂಗಸರನ್ನು ಬಲೆಗೆ ಕೆಡವುವ ದಂಧೆ ಇದಾಗಿದೆ.
ಹಣ ಕಂಡರೆ ಹೆಣವೂ ಬಾಯ್ಬಿಡತ್ತೆ ಎನ್ನುವ ಮಾತಿದೆ. ಅದರಲ್ಲಿಯೂ ರೋಡ್ನಲ್ಲಿ ಗರಿಗರಿ ನೋಟು ಸಿಕ್ಕರೆ ಯಾರಿಗೆ ಇಷ್ಟವಾಗಲ್ಲ ಹೇಳಿ. ಪುಕ್ಕಟೆ ನೂರೋ 500 ರೂಪಾಯಿ ಸಿಕ್ಕಿಬಿಟ್ಟರೆ ಆಹಾ! ಹಿದೆ ಮುಂದೆ ನೋಡದೆ ಕೈ ಅದರತ್ತ ಹೋಗಿಯೇ ಬಿಡುತ್ತದೆ. ರಸ್ತೆಯ ಮೇಲೆ ಸಿಕ್ಕ ದುಡ್ಡನ್ನು ತೆಗೆದುಕೊಳ್ಳಲೇಬಾರದು ಎನ್ನುವ ಶಾಸ್ತ್ರವೂ ಇದೆ. ಸಿಕ್ಕರೂ ದೇವರ ಹುಂಡಿಗೆ ಹಾಕಿಬಿಡಬೇಕು ಎನ್ನಲಾಗುತ್ತದೆ. ಅದು ಎಲ್ಲಿ ಹಾಕೋದು ಎಂದು ಆಮೇಲೆ ಯೋಚ್ನೆ ಮಾಡುವ, ಮೊದಲು ತೆಗೆದುಕೊಳ್ಳುವ ಎಂದು ನೀವೇನಾದ್ರೂ ಆ ದುಡ್ಡನ್ನು ತೆಗೆದುಕೊಂಡ್ರೋ ಅಲ್ಲ್ಇಗೆ ಮುಗಿಯಿತು ಕಥೆ.
ಅದರಲ್ಲಿಯೂ ಹೆಚ್ಚಾಗಿ 500 ರೂಪಾಯಿ ನೋಟುಗಳನ್ನೇ ರಸ್ತೆಯ ಮೇಲೆ ಎಸೆಯಲಾಗಿರುತ್ತದೆ. ನೀವು ಆ ನೋಟನ್ನು ಎತ್ತಿಕೊಂಡ ತಕ್ಷಣ, ಅದರಲ್ಲಿ ಉದ್ದೇಶಪೂರ್ವಕವಾಗಿ ಸಿಂಪಡಿಸಿ ಇಡಲಾಗಿದ್ದ ಕ್ಲೋರೋಫಿಲ್ ಅಥವಾ ಇನ್ನಾವುದೇ ರಾಸಾಯನಿಕ ನಿಮ್ಮ ಮೂಗಿಗೆ ನೇರವಾಗಿ ಹೋಗುತ್ತದೆ. ಇದು ನಿಮ್ಮನ್ನು ಮೂರ್ಚೆ ತಪ್ಪಿಸಲು ಮಾಡಿರುವ ಉಪಾಯವೇ ಆಗಿರುತ್ತದೆ. ನೀವು ಮೂರ್ಛೆ ತಪ್ಪುತ್ತಿದ್ದಂತೆಯೇ, ಅಲ್ಲಿಯೇ ಕಾದು ಕುಳಿತಿರುವ ಖದೀಮರು ಬಂದು ನಿಮ್ಮಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುತ್ತಾರೆ. ಆದ್ದರಿಂದ ಪುರುಷರಿಂತಲೂ ಹೆಚ್ಚಾಗಿ ಮಹಿಳೆಯರೇ ಇವರ ಟಾರ್ಗೆಟ್ ಆಗಿರುತ್ತಾರೆ. ನಿಮ್ಮ ಮೈಮೇಲೆ ಇರುವ ಆಭರಣ ಸೇರಿದಂತೆ ಎಲ್ಲವೂ ಆ ಕಳ್ಳರ ಪಾಲಾಗುತ್ತದೆ.
ಆದ್ದರಿಂದ ರಸ್ತೆಯ ಮೇಲೆ ಬಿದ್ದಿರುವ ನೋಟು ಅದರಲ್ಲಿಯೂ ಹೆಚ್ಚಾಗಿ 500 ರೂಪಾಯಿ ನೋಟನ್ನು ನೀವು ಒಂಟಿಯಾಗಿ ಹೋಗುವ ಸಮಯದಲ್ಲಂತೂ ತೆಗೆದುಕೊಳ್ಳಲೇಬೇಡಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅದರಲ್ಲಿಯೂ ಸ್ವಲ್ಪ ಕತ್ತಲಾಗಿದ್ದು, ಆ ರಸ್ತೆಯಲ್ಲಿ ಓಡಾಟ ಕಡಿಮೆ ಇದ್ದಾಗಲಂತೂ ಇಂಥ ಕೃತ್ಯಕ್ಕೆ ಕೈಹಾಕಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ