
- ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜಿಸ್, ಇತರರ ವಿರುದ್ಧ ಇ.ಡಿಯಿಂದ ಚಾರ್ಜ್‌ಶೀಟ್ ಸಲ್ಲಿಕೆ
ಬೆಂಗಳೂರು (ಮೇ.26): ಆನ್‌ಲೈನ್ ರಮ್ಮಿ ರಿಯಲ್ ಮನಿ ಗೇಮಿಂಗ್(Online Rummy Real Money Gaming) ಬಹುಕೋಟಿ ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ(PMLA) ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜಿಸ್, ರಮ್ಮಿ ಟೈಮ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮತ್ತು ಅದರ ಸಂಸ್ಥಾಪಕರು, ನಿರ್ದೇಶಕರು ಹಾಗೂ ಸಂಬಂಧಿತ ವ್ಯಕ್ತಿಗಳ ವಿರುದ್ಧ ಬೆಂಗಳೂರು ವಲಯದ ಜಾರಿ ನಿರ್ದೇಶನಾಲಯ(ಇ.ಡಿ.) ಶನಿವಾರ ನಗರದ ಇ.ಡಿ.ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದೆ.
ಈ ವಂಚನೆ ಸಂಬಂಧ ತೆಲಂಗಾಣ ರಾಜ್ಯದಲ್ಲಿ ದಾಖಲಾದ ಹಲವು ಎಫ್‌ಐಆರ್ ಆಧಾರದ ಮೇಲೆ ಇ.ಡಿ. ಪಿಎಂಎಲ್‌ಎ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿತ್ತು. ಈ ಆರೋಪಿತ ಕಂಪನಿಗಳು ರಮ್ಮಿ ಕಲ್ಚರ್, ರಮ್ಮಿ ಪ್ರೈಮ್, ಫ್ಲೇಶಿಪ್ ರಮ್ಮಿ ಮತ್ತು ರಮ್ಮಿ ಟೈಮ್ ಇತ್ಯಾದಿ ಬ್ರಾಂಡ್‌ಗಳ ಅಡಿಯಲ್ಲಿ ಆನ್‌ಲೈನ್ ರಮ್ಮಿ ಆಟಗಳನ್ನು ಆಯೋಜಿಸುತ್ತಿದ್ದವು. ಪ್ಲಾಟ್‌ಫಾರ್ಮ್ ಆಪರೇಟರ್‌ಗಳಾಗಿ ಆಟಗಾರರಿಗೆ ಶೇ.10ರಿಂದ ಶೇ.15ರಷ್ಟು ಪ್ಲಾಟ್‌ಫಾರ್ಮ್ ಶುಲ್ಕ ವಿಧಿಸಿವೆ. ಬಳಿಕ ಮೋಸದಿಂದ ಸ್ವಯಂ ಚಾಲಿತ ಬಾಟ್‌ಗಳನ್ನು(ಎಐ ಆಟಗಾರರು) ಬಳಸಿಕೊಂಡು ರಮ್ಮಿ ಆಟದಲ್ಲಿ ನೈಜ ಆಟಗಾರರನ್ನು ಸೋಲಿಸಿ ಅಕ್ರಮವಾಗಿ ಹಣ ಗಳಿಸಿರುವುದು ಇ.ಡಿ.ತನಿಖೆಯಲ್ಲಿ ಬಯಲಾಗಿದೆ.
ಈ ಕಂಪನಿಗಳು ಆನ್‌ಲೈನ್ ರಮ್ಮಿ ಆಟಕ್ಕೆ ಆಟಗಾರರನ್ನು ಸೆಳೆಯಲು ಬಹುಮಾನ, ಇನ್‌ಸ್ಟಂಟ್ ಕ್ಯಾಶ್ ಇತ್ಯಾದಿ ಆಮಿಷಗಳನ್ನು ಒಡ್ಡಿದ್ದವು. ಮೋಸದ ಪ್ರಚೋದನೆಗಳ ಮೂಲಕ ಆಟಗಾರರನ್ನು ವ್ಯಸನಿಗಳಾಗಿ ರೂಪಿಸಿದ್ದವು. ಈ ಕಂಪನಿಗಳು 2017-18ರಿಂದ 2025-26 ರವರೆಗೆ ಕಮಿಷನ್ ರೂಪದಲ್ಲಿ ಸುಮಾರು 19,984 ಕೋಟಿ ರು. ಅಕ್ರಮ ಆದಾಯ ಗಳಿಸಿರುವುದು ಇ.ಡಿ.ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಅಕ್ರಮ ಆದಾಯವನ್ನು ಮ್ಯೂಚುವಲ್ ಫಂಡ್, ಬಾಂಡ್‌ಗಳು, ಈಕ್ವಿಟಿ ಷೇರುಗಳು, ಕುಟುಂಬದ ಟ್ರಸ್ಟ್‌ಗಳು, ಸಂಬಂಧಿತ ಘಟಕಗಳಲ್ಲಿ ಚರ ಮತ್ತು ಸ್ಥಿರಾಸ್ತಿಗಳ ರೂಪದಲ್ಲಿ ಹೂಡಿಕೆ ಮಾಡಿವೆ. ಈ ಪ್ರಕರಣದಲ್ಲಿ ಈವರೆಗೆ ಈ ಆರೋಪಿತ ಕಂಪನಿಗಳು ಹಾಗೂ ಸಂಬಂಧಿತರಿಂದ ಸುಮಾರು 2,401 ಕೋಟಿ ರು. ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಇ.ಡಿ.ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.
ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜಿಸ್, ರಮ್ಮಿ ಟೈಮ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳ ಸಂಸ್ಥಾಪಕರು/ನಿರ್ದೇಶಕರಾದ ವಿಕಾಸ್ ತನೇಜಾ, ಪೃಥ್ವಿ ರಾಜ್‌ಸಿಂಗ್, ದೀಪಕ್ ಸಿಂಗ್ ಅಹ್ಲಾವತ್ ಮತ್ತು ಸಂಬಂಧಿತ ವ್ಯಕ್ತಿಗಳ ವಿರುದ್ಧ ಇ.ಡಿ. ದೋಷಾರೋಪಪಟ್ಟಿ ಸಲ್ಲಿಸಿದೆ.
ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಇ.ಡಿ. ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ