ಸಮಾರಂಭದಲ್ಲಿ ಫೋಟೋ ತೆಗೆಯುತ್ತಿದ್ದ ವೇಳೆ ಹೃದಯಾಘಾತದಿಂದ ಫೋಟೋಗ್ರಾಫರ್ ಸಾವನಪ್ಪಿದ ಘಟನೆ ಸಾಗರ ತಾಲೂಕಿನ ಹೆಗ್ಗೋಡು ಸಮೀಪದ ಹೆಬ್ಬೆಲಿನ ಸೋಮೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ಶಿವಮೊಗ್ಗ (ಡಿ.12): ಸಮಾರಂಭದಲ್ಲಿ ಫೋಟೋ ತೆಗೆಯುತ್ತಿದ್ದ ವೇಳೆ ಹೃದಯಾಘಾತದಿಂದ ಫೋಟೋಗ್ರಾಫರ್ ಸಾವನಪ್ಪಿದ ಘಟನೆ ಸಾಗರ ತಾಲೂಕಿನ ಹೆಗ್ಗೋಡು ಸಮೀಪದ ಹೆಬ್ಬೆಲಿನ ಸೋಮೇಶ್ವರ ದೇವಸ್ಥಾನದಲ್ಲಿ ನಡೆದಿದೆ. ಸಾಗರ ಪಟ್ಟಣದ ರಾಮನಗರದ ಚಂದ್ರು (42) ಮೃತ ದುರ್ದೈವಿ. ಕಾರ್ಯಕ್ರಮದಲ್ಲಿ ಫೋಟೊ ತೆಗೆಯುವ ವೇಳೆ ಚಂದ್ರು ಕುಸಿದು ಬಿದ್ದರು. ತಕ್ಷಣ ಅವರನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಯಿತಾದರೂ ಆ ವೇಳೆಗೆ ಕೊನೆಯುಸಿರೆಳೆದಿದ್ದರು. ಇನ್ನು ಸಾಗರದ ಶಿಲ್ಪ ಸ್ಟುಡಿಯೋ ಮಾಲೀಕರಾಗಿದ್ದ ಚಂದ್ರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಗೌರ್ನರ್ ಕಾರು ಚಾಲಕ ನಿಧನ: ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರ ಕಾರು ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಧಾರವಾಡ ಮೂಲದ ರವಿ ಕುಮಾರ್ ಎಸ್. ಕಾಳೆ (46) ಮೃತ ಕಾರು ಚಾಲಕ. ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಶನಿವಾರ ಹುಬ್ಬಳ್ಳಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದರು.
2ಎ ಮೀಸಲಾತಿ ಘೋಷಿಸದಿದ್ರೆ ಸುವರ್ಣಸೌಧಕ್ಕೆ ಮುತ್ತಿಗೆ: ಜಯಮೃತ್ಯುಂಜಯ ಶ್ರೀ
ಹೀಗಾಗಿ ರವಿಕುಮಾರ್ ರಾತ್ರಿ ರಾಜ್ಯಪಾಲರನ್ನು ಕರೆತರಲು ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲೇ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ರವಿಕುಮಾರ್ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ದೇವನಹಳ್ಳಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಮಾರ್ಗ ಮಧ್ಯೆಯೇ ರವಿಕುಮಾರ್ ಮೃತಪಟ್ಟಿದ್ದಾರೆ. ಥಾವರ್ ಚಂದ್ ಗೆಹಲೋತ್ ಕರ್ನಾಟಕಕ್ಕೆ ರಾಜ್ಯಪಾಲರಾಗಿ ಬಂದಾಗಿನಿಂದ ರವಿಕುಮಾರ್ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಕಂಬಿನಿ ಮಿಡಿದ ರಾಜ್ಯಪಾಲ: ಹೃದಯಾಘಾತದಿಂದ ಮೃತಪಟ್ಟಕಾರು ಚಾಲಕ ರವಿಕುಮಾರ್ ಅವರ ಪಾರ್ಥಿವ ಶರೀರವನ್ನು ಭಾನುವಾರ ರಾಜಭವನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಗೆಹಲೋತ್ ಅವರು ಚಾಲಕನ ಮೃತದೇಹದ ಅಂತಿಮ ದರ್ಶನ ಪಡೆದು ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ ರಾಜಭವನದ ಅಧಿಕಾರಿಗಳು, ಸಿಬ್ಬಂದಿಗಳು ಚಾಲಕ ರವಿಕುಮಾರ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಪ್ರವಾಸದ ವೇಳೆ ಕಾಲು ಜಾರಿ ಬಿದ್ದು ವಿದ್ಯಾರ್ಥಿ ಸಾವು: ಸಿರುಗುಪ್ಪ ತಾಲೂಕಿನ ಕೆ. ಬೆಳಗಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ನಾಗಲಕ್ಷ್ಮೇ (16) ಶಾಲಾ ಪ್ರವಾಸಕ್ಕೆ ತೆರಳಿದ್ದ ವೇಳೆ ಮೃತಪಟ್ಟಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗುರ್ರಪ್ಪ ತಿಳಿಸಿದ್ದಾರೆ. ಶಾಲೆಯ ಮುಖ್ಯಗುರು ರಸೂಲ್‌ಸಾಬ್ ಸುದ್ದಿಗಾರರಿಗೆ ಘಟನೆ ವಿವರ ನೀಡಿದ್ದಾರೆ. 11 ಶಿಕ್ಷಕರು, 53 ಬಾಲಕರು, 33 ಬಾಲಕಿಯರು ಸೇರಿ ಒಟ್ಟು 86 ವಿದ್ಯಾರ್ಥಿಗಳೊಂದಿಗೆ ಪ್ರವಾಸ ಹೋಗಿದ್ದೆವು. ಶ್ರವಣಬೆಳಗೊಳದ ಗೊಮ್ಮಟೇಶ್ವರನ ವೀಕ್ಷಣೆ ಮಾಡಿ ಮೆಟ್ಟಿಲಿನಿಂದ ಕೆಳಗಿಳಿಯುವಾಗ ಕಾಲು ಜಾರಿ ಬಿದ್ದು ನಾಗಲಕ್ಷ್ಮೇ ತಲೆಗೆ ಪೆಟ್ಟಾಗಿತ್ತು. ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದೊಯ್ದೆವು.
ಸರ್ಕಾರದಿಂದ 10 ಕೋಟಿ ಬಂದಿದ್ದು ಮಠದ ಅಭಿವೃದ್ಧಿಗೆ: ವಚನಾನಂದ ಶ್ರೀ
ಅಲ್ಲಿನ ವೈದ್ಯರು ಚೆನ್ನರಾಯನಪಟ್ಟಣದ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು. ಅದರಂತೆ ಅಲ್ಲಿ ತೆರಳಿದರೆ ಅಲ್ಲಿಯ ವೈದ್ಯರು ಹಾಸನ ಜಿಲ್ಲಾಸ್ಪತ್ರೆಗೆ ತೆರಳುವಂತೆ ಸೂಚಿಸಿದರು. ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸಿಲ್ಲ ಎಂದು ಹೇಳಿದರು. ಮೃತಪಟ್ಟವಿದ್ಯಾರ್ಥಿನಿ ಮನೆಗೆ ಶಾಸಕ ಎಂ.ಎಸ್. ಸೋಮಲಿಂಗಪ್ಪ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು. ವೈಯಕ್ತಿಕ ಪರಿಹಾರ ನೀಡಿದರು. ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ತಮ್ಮನಗೌಡ ಪಾಟೀಲ್, ಸಿಆರ್‌ಪಿ ಪದ್ಮಾವತಿ, ಬಿಜೆಪಿ ಹಿರಿಯ ಮುಖಂಡ ದಮ್ಮೂರು ಸೋಮಪ್ಪ ಇದ್ದರು.