ವೈದ್ಯ ಸೀಟು ಕೊಡಿಸುವುದಾಗಿ 52 ಲಕ್ಷ ವಂಚನೆ

By Kannadaprabha NewsFirst Published Jan 18, 2021, 7:21 AM IST
Highlights

ಪ್ರತಿಷ್ಠಿತ ಕಾಲೇಜುಗಳಲ್ಲಿ ವೈದ್ಯ ಸೀಟು ತೋರಿಸಿ ಧೋಖಾ|ಚೆನ್ನೈ ಮೂಲದ ಇಬ್ಬರಿಗೆ ನಾಲ್ವರಿಂದ ಲಕ್ಷಾಂತರ ರು. ಟೋಪಿ| ಮೇಸೆಜ್‌ ನೋಡಿ ಮೋಸ ಹೋದ್ರು| 

ಬೆಂಗಳೂರು(ಜ.18): ಎರಡು ಪ್ರತ್ಯೇಕ ಪ್ರಕರಣದಲ್ಲಿ ಪ್ರತಿಷ್ಠಿತ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ಪೋಷಕರಿಂದ ಒಟ್ಟು 52 ಲಕ್ಷ ಪಡೆದು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಜೀವನ್‌ ಭೀಮಾನಗರ ಠಾಣೆಯಲ್ಲಿ ಉತ್ತರ ಪ್ರದೇಶ ಮೂಲದವರು ಎನ್ನಲಾದ ತನ್ವೀರ್‌ ಅಹಮದ್‌, ಅನುರಾಗ್‌ ಪ್ರತಾಪ್‌, ಕಿಶನ್‌ ಕಶ್ಯಪ್‌, ಮನೋಜ್‌ ಕುಮಾರ್‌ ಎಂಬುವವರ ವಿರುದ್ಧ ದೂರು ದಾಖಲಾಗಿದೆ.

29 ಲಕ್ಷ ಧೋಖಾ:

ಚೆನ್ನೈ ಮೂಲದ ತಿರುಣವುಕ್ಕರಸು ಎಂಬುವರು ಪುತ್ರನನ್ನು ಮೆಡಿಕಲ್‌ ಕಾಲೇಜಿಗೆ ಸೇರಿಸಲು ಯತ್ನಿಸುತ್ತಿದ್ದರು. 2020 ಡಿ.22ರಂದು ಲೈಫ್‌ ಲಾಂಚರ್‌ ಅಡ್ವೈಸರಿ ಸವೀರ್‍ಸಸ್‌ ಹೆಸರಿನ ಕಂಪನಿಯಿಂದ ದೂರುದಾರರ ಮೊಬೈಲ್‌ಗೆ ಕಡಿಮೆ ಮೊತ್ತಕ್ಕೆ ವೈದ್ಯಕೀಯ ಸೀಟು ಕೊಡಿಸುವುದಾಗಿ ಸಂದೇಶ ಬಂದಿತ್ತು.

ಮೊದಲ ಮದುವೆ ಅಸಿಂಧು ಎಂದ ಪತಿಗೆ ಜೈಲು!

ಪಶ್ಚಿಮ ಬಂಗಾಳದ ಕೆಪಿಸಿ ಮೆಡಿಕಲ್‌ ಕಾಲೇಜು, ಕರ್ನಾಟಕದ ಈಸ್ಟ್‌ ಪಾಯಿಂಟ್‌ ಮೆಡಿಕಲ್‌ ಕಾಲೇಜು, ಆಕಾಶ್‌ ಮೆಡಿಕಲ್‌ ಕಾಲೇಜು, ವೈದೇಹಿ ಮೆಡಿಕಲ್‌ ಕಾಲೇಜು, ಕೇರಳದ ಕರುಣಾ ಮೆಡಿಕಲ್‌ ಕಾಲೇಜು ಸೇರಿ ಹಲವು ಕಾಲೇಜುಗಳಲ್ಲಿ ಸೀಟು ಕೊಡಿಸುವುದಾಗಿ ಸಂದೇಶದಲ್ಲಿ ಉಲ್ಲೇಖಿಸಲಾಗಿತ್ತು. ಎಚ್‌ಎಎಲ್‌ 2ನೇ ಹಂತದಲ್ಲಿ ನಮ್ಮ ಕಚೇರಿಗೆ ಬಂದು ಸಂಪರ್ಕಿಸುವಂತೆ ತಿಳಿಸಿದ್ದರು.

2020 ಡಿ.23ರಂದು ತಿರುಣವುಕ್ಕರಸು ಅವರು ಪುತ್ರ ಹಾಗೂ ಸ್ನೇಹಿತ ಅಮೀದ್‌ನೊಂದಿಗೆ ಎಂಬುವರ ಜತೆ ಎಚ್‌ಎಎಲ್‌ನಲ್ಲಿರುವ ಕಚೇರಿಗೆ ಭೇಟಿ ನೀಡಿ, ಆರೋಪಿಗಳಾದ ಅನುರಾಗ್‌ ಪ್ರತಾಪ್‌, ತನ್ವೀರ್‌ ಅಹಮದ್‌ನ್ನು ಭೇಟಿಯಾಗಿದ್ದರು. ಆರೋಪಿಗಳು ವೈದೇಹಿ ಮೆಡಿಕಲ್‌ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ಮುಂಗಡ ಹಣ ನೀಡುವಂತೆ ಕೇಳಿದ್ದರು. 2020 ಡಿ.24ರಂದು ದೂರುದಾರರು ತಮ್ಮ ಬ್ಯಾಂಕ್‌ ಖಾತೆಯಿಂದ 11.73 ಲಕ್ಷ ಹಣವನ್ನು ಆರೋಪಿಗಳು ಹೇಳಿದ ಬ್ಯಾಂಕ್‌ ಖಾತೆಗೆ ಜಮೆ ಮಾಡಿದ್ದರು. ಇದಾದ ಬಳಿಕ ಆರೋಪಿಗಳು ಮಗನ ದಾಖಲೆ ಕೇಳಿದಾಗ, ಡಿ.28ರಂದು ಮತ್ತೆ ಆರೋಪಿಗಳ ಕಚೇರಿಗೆ ಬಂದ ತಿರುಣವುಕ್ಕರಸು 18 ಲಕ್ಷ ಹಾಗೂ ದಾಖಲೆಗಳನ್ನು ಆರೋಪಿಗಳಿಗೆ ಕೊಟ್ಟಿದ್ದರು. 2020 ಡಿ.29ರಂದು ನಿಮ್ಮ ಮಗನಿಗೆ ಕಾಲೇಜಿಗೆ ಪ್ರವೇಶಾತಿ ಕಲ್ಪಿಸಿಕೊಡುವುದಾಗಿ ಆರೋಪಿಗಳು ನಂಬಿಸಿ ಮೊಬೈಲ್‌ ನಂಬರ್‌ ನೀಡಿದ್ದರು. ಡಿ.29ರಂದು ತಿರುಣವುಕ್ಕರಸು ಆರೋಪಿಗಳಿಗೆ ಕರೆ ಮಾಡಿದಾಗ ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಎಚ್‌ಎಎಲ್‌ನಲ್‌ನಲ್ಲಿ ಇರುವ ಕಚೇರಿಗೆ ಬಂದಾಗ ಕಚೇರಿ ಬಂದ್‌ ಮಾಡಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು.

ಮೆಸೆಜ್‌ ನೋಡಿ ಮೋಸ ಹೋದ್ರು

ಮತ್ತೊಂದು ಪ್ರಕರಣದಲ್ಲಿ ಚೆನ್ನೈ ಮೂಲದ ರವಿ ತಮ್ಮ ಮಗಳನ್ನು ವೈದ್ಯೆಯನ್ನಾಗಿ ಮಾಡುವ ಉದ್ದೇಶದಿಂದ ಮೆಡಿಕಲ್‌ ಸೀಟಿಗಾಗಿ ಹುಡುಕಾಡುತ್ತಿದ್ದರು. ಮೊಬೈಲ್‌ಗೆ ಬಂದ ಸಂದೇಶ ನೋಡಿ ಆರೋಪಿ ತನ್ವೀರ್‌ ಅಹಮದ್‌ನ್ನು ಸಂಪರ್ಕಿಸಿದ್ದರು. ನಂತರ 22.47 ಲಕ್ಷ ಹಣವನ್ನು ಆರೋಪಿಗೆ ನೀಡಿದ್ದರು. ಇದಾದ ಬಳಿಕ ಆರೋಪಿಗಳು ಸಂಪರ್ಕಕ್ಕೆ ಸಿಗದೆ ವಂಚನೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
 

click me!