ಬಂಧಿತನಿಂದ 500, 200 ಮತ್ತು 100 ರೂಪಾಯಿ ಮುಖಬೆಲೆಯ 4.22 ಲಕ್ಷ ನಕಲಿ ನೋಟು ಮತ್ತು ಒಂದು ಬೈಕ್ ಹಾಗೂ ಮೊಬೈಲ್ ಜಪ್ತಿ| ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ಚಿಂಚೋಳಿ ಪಟ್ಟಣದಲ್ಲಿ ನಡೆದ ಘಟನೆ| ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ಕಲಬುರಗಿ(ಜ.17): ಜಿಲ್ಲೆಯ ಸೇಡಂ ಪಟ್ಟಣದ ಚಿಂಚೋಳಿ ರಸ್ತೆಯಲ್ಲಿ ನಕಲಿ ನೋಟಿನ ಬ್ಯಾಗ್ ಹೊಂದಿದ್ದ ವ್ಯಕ್ತಿಯನ್ನ ಬಂಧಿಸಲಾಗಿದೆ. ಪಟ್ಟಣದ ಆಶ್ರಯ ಕಾಲೋನಿ ನಿವಾಸಿ ಅಲ್ಲಾವುದ್ದಿನ್ ಮಳಗಿ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ಬಂಧಿತನ ಬ್ಯಾಗ್‌ನಲ್ಲಿ 4.22 ಲಕ್ಷ ರೂ. ಮೌಲ್ಯದ ಖೋಟಾ ನೋಟುಗಳು ಪತ್ತೆಯಾಗಿವೆ. ಬ್ಯಾಗ್‌ನಲ್ಲಿಟ್ಟುಕೊಂಡು ಬೇರೆಡೆ ಸಾಗಿಸಲು ಯತ್ನ ನಡೆಸಿದ್ದ ವೇಳೆ ಡಿಸಿಐಬಿ ಪೊಲೀಸ್ ಕಾರ್ಯಾಚರಣೆ ನಡೆಸಿ ಅರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಸ್ಕ್ ಧರಿಸದೇ ಸಿಕ್ಕಿಬಿದ್ದ ನಕಲಿ ನೋಟು ದಂಧೆಕೋರರು..!
ಕಲಬುರಗಿಯ ಡಿಸಿಐಬಿ ಪಿಎಸ್ಐ ಪರಶುರಾಮ ವನಂಜಕರ ತಂಡದ ಮಿಂಚಿನ ಕಾರ್ಯಾಚಣೆ ನಡೆಸುವ ಮೂಲಕ ಖದೀಮನ ಹೆಡೆಮುರಿ ಕಟ್ಟಿದ್ದಾರೆ. ಬಂಧಿತನಿಂದ 500, 200 ಮತ್ತು 100 ರೂಪಾಯಿ ಮುಖಬೆಲೆಯ 4.22 ಲಕ್ಷ ನಕಲಿ ನೋಟುಗಳು ಮತ್ತು ಒಂದು ಬೈಕ್ ಹಾಗೂ ಮೊಬೈಲ್‌ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಈ ಖೋಟಾ ನೋಟು ಎಲ್ಲಿ ಪ್ರಿಂಟ್ ಆಗಿದ್ದು ? ಎಲ್ಲಿಂದ ತಂದಿದ್ದ ? ಎಲ್ಲಿಗೆ ಸಾಗಿಸುತ್ತಿದ್ದ ? ಜಾಲದ ರೂವಾರಿ ಯಾರು ? ಎನ್ನುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಮೀಷನ್ ಆಧಾರದ ಮೇಲೆ ಬಂಧಿತ ಆರೋಪಿ ಅಲಾವುದ್ದಿನ್ ಮಳಗಿಖೋಟು ನೋಟು ಚಲಾವಣೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಹಿಂದೆಯೂ ಒಂದು ಬಾರಿ ನಕಲಿ ನೋಟು ಚಲಾವಣೆ ಆರೋಪದಡಿ ಅಲಾವುದ್ದಿನ್ ಬಂಧಿತನಾಗಿದ್ದ. ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.