
ಬೆಂಗಳೂರು(ನ.28): ತನ್ನ ಗೆಳೆತಿ ಜತೆ ಪ್ರವಾಸಕ್ಕೆ ಹೋಗಿದ್ದ ಎಂಬ ಕಾರಣಕ್ಕೆ ಕೋಪಗೊಂಡು ಟೆಂಪೋ ಟ್ರಾವೆಲರ್ (ಟಿಟಿ) ಚಾಲಕನೊಬ್ಬನನ್ನು ಆತನ ಸ್ನೇಹಿತ ಹಾಗೂ ಸಹಚರರು ಅಪಹರಿಸಿ ಕೊಂದಿರುವ ಘಟನೆ ಬೈಯಪ್ಪನಹಳ್ಳಿ ಸಮೀಪ ತಡವಾಗಿ ಬೆಳಕಿಗೆ ಬಂದಿದೆ.
ನೆಲಮಂಗಲ ಸಮೀಪದ ನರಸಿಂಹಯ್ಯ ಲೇಔಟ್ ನಿವಾಸಿ ರವಿಕುಮಾರ್(30) ಹತ್ಯೆಗೀಡಾದ ದುರ್ದೈವಿ. ಈ ಪ್ರಕರಣ ಸಂಬಂಧ ಮೃತನ ಗೆಳೆಯ ಪೀಣ್ಯದ ಲೋಕೇಶ್, ರಂಜಿತ್ ಮತ್ತು ಸಚಿನ್‌ನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲವು ದಿನಗಳ ಹಿಂದೆ ಹಳೆಯ ಮದ್ರಾಸ್ ರಸ್ತೆಯಿಂದ ರವಿಕುಮಾರ್ ನಿಗೂಢವಾಗಿ ನಾಪತ್ತೆಯಾಗಿದ್ದ. ಈ ಬಗ್ಗೆ ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಅನುಮಾನದ ಮೇರೆಗೆ ಲೋಕೇಶ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ರಹಸ್ಯ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚಿಕ್ಕಮಗಳೂರು ಪ್ರವಾಸ ತಂದ ಆಪತ್ತು:
ನೆಲಮಂಗಲದಲ್ಲಿ ತನ್ನ ಪತ್ನಿ ಮತ್ತು ಮಗನ ಜತೆ ನೆಲೆಸಿದ್ದ ಮೃತ ರವಿಕುಮಾರ್, ಮಹದೇವಪುರ ಹತ್ತಿರದ ಸಾಫ್ಟ್‌ವೇರ್ ಕಂಪನಿಗೆ ತಮ್ಮ ಟಿಟಿ ವಾಹನವನ್ನು ಬಾಡಿಗೆ ಓಡಿಸುತ್ತಿದ್ದರು. ಚನ್ನರಾಯಪಟ್ಟಣ ತಾಲೂಕಿನ ಲೋಕೇಶ್ ಸಹ ಟಿಟಿ ಚಾಲಕನಾಗಿದ್ದ. ಹೀಗಾಗಿ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಇದೇ ಗೆಳೆತನದಲ್ಲಿ ಲೋಕೇಶ್ ಪ್ರೀತಿಸುತ್ತಿದ್ದ ಯುವತಿ ರವಿಕುಮಾರ್‌ಗೆ ಪರಿಚಯವಾಗಿದ್ದಳು. ಕೆಲ ದಿನಗಳ ಹಿಂದೆ ಲೋಕೇಶ್ ಸ್ನೇಹಿತೆ ಜತೆ ಚಿಕ್ಕಮಗಳೂರಿಗೆ ಆತ ಪ್ರವಾಸಕ್ಕೆ ಹೋಗಿದ್ದು ದುರಂತಕ್ಕೆ ಕಾರಣವಾಗಿದೆ.
ಐದು ಮಕ್ಕಳಿದ್ರೂ ಪರ ಪುರುಷನ ಸಂಗ ಬಿಡದ ಮಹಿಳೆ: ಶಿಕ್ಷಕಿಯ ಕೊಂದ ಪ್ರೇಮಿ
ತನ್ನ ಇಬ್ಬರು ಸ್ನೇಹಿತರ ಜೊತೆ ಕಾರಿನಲ್ಲಿ ಚಿಕ್ಕಮಗಳೂರಿಗೆ ಲೋಕೇಶ್ ಗೆಳತಿ ಪ್ರವಾಸಕ್ಕೆ ತೆರಳಿದ್ದಳು. ಆಗ ಆ ವಾಹನದ ಚಾಲಕನಾಗಿ ರವಿಕುಮಾರ್ ಹೋಗಿದ್ದ. ಈ ಪ್ರವಾಸದ ವಿಚಾರ ತಿಳಿದು ಕೆರಳಿದ ಲೋಕೇಶ್, ರವಿಕುಮಾರ್‌ನೊಂದಿಗೆ ಗಲಾಟೆ ಮಾಡಿದ್ದಾನೆ.
ನಂತರ ನ.19ರ ತಡರಾತ್ರಿ 12.30ರಲ್ಲಿ ಹಳೇ ಮದ್ರಾಸ್ ರಸ್ತೆಯಲ್ಲಿ ರವಿಕುಮಾರ್ ಟಿಟಿಯನ್ನು ಅಡ್ಡಗಟ್ಟಿದ ಆರೋಪಿಗಳು, ಬಳಿಕ ಆತನನ್ನು ಮತ್ತೊಂದು ವಾಹನಕ್ಕೆ ಹತ್ತಿಸಿ ಅಪಹರಿಸಿದ್ದರು. ಕೆಲಸಕ್ಕೆ ತೆರಳಿದ ಪತಿ ಮನೆಗೆ ಬಾರದೆ ಹೋದಾಗ ಆತಂಕಗೊಂಡ ಮೃತನ ಪತ್ನಿ ಶೃತಿ, ಮರು ದಿನ ಪತಿಯ ಸ್ನೇಹಿತ ರಂಜಿತ್‌ಗೆ ಕರೆ ಮಾಡಿ ವಿಚಾರಿಸಿದ್ದರು. ಆಗ ನನಗೆ ಗೊತ್ತಿಲ್ಲ ಎಂದಿದ್ದ. ಕಂಪನಿಯ ಟ್ರಾವೆಲ್ಸ್ ವಿಭಾಗದ ಮುಖ್ಯಸ್ಥ ನಿರ್ಮಲ್ ಜೊತೆ ಫೋನ್‌ನಲ್ಲಿ ಮಾತನಾಡಿದಾಗ ರವಿಕುಮಾರ್ ಅಪಹರಣ ವಿಷಯ ತಿಳಿಸಿದ್ದಾನೆ. ಶೃತಿ, ಬೈಯಪ್ಪನಹಳ್ಳಿ ಠಾಣೆಗೆ ದೂರು ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ