
ಬೆಂಗಳೂರು(ಆ.10): ಶುಕ್ರವಾರ ರಾತ್ರಿ ಬಸವನಗುಡಿಯಲ್ಲಿ ಲಾರಿ ಕ್ಲೀನರ್ ಸಿದ್ದರಾಜು ಎಂಬಾತನನ್ನು ಹತ್ಯೆಗೈದಿದ್ದ ಮೂವರು ಆರೋಪಿಗಳನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮಣ್ ಅಲಿಯಾಸ್ ಲಚ್ಚಿ (34), ಪಿ.ಪ್ರತಾಪ್ (31) ಹಾಗೂ ಚೇತನ್ (35) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾರಾಕಸ್ತ್ರಗಳನ್ನು ಜಪ್ತಿ ಮಾಡಿ, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಸಿದ್ದರಾಜು ಚಾಮರಾಜನಗರದ ಕೊಳ್ಳೇಗಾಲದವನಾಗಿದ್ದು, ಲತಾ ಎಂಬುವರನ್ನು ವಿವಾಹವಾಗಿದ್ದ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಲತಾ ಮತ್ತು ಸಿದ್ದರಾಜು ಪ್ರತ್ಯೇಕವಾಗಿದ್ದರು. ವಿಚ್ಛೇದನ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಈ ನಡುವೆ ಲತಾ ಹೂವಿನ ವ್ಯಾಪಾರಿ ಮಾಡುತ್ತಿದ್ದ ಲಕ್ಷ್ಮಣ್‌ನನ್ನು ಎರಡನೇ ವಿವಾಹವಾಗಿದ್ದರು. ಪತ್ನಿ ಇನ್ನೊಬ್ಬನನ್ನು ವಿವಾಹವಾಗಿದ್ದ ವಿಚಾರ ತಿಳಿದ ಸಿದ್ದರಾಜು ಬಸವನಗುಡಿ ಹತ್ತಿರದಲ್ಲಿರುವ ಪತ್ನಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ. ಎರಡು ದಿನಗಳ ಹಿಂದೆ ಸಹ ಜಗಳವಾಗಿತ್ತು. ಈ ಗಲಾಟೆ ವಿಚಾರ ಗೊತ್ತಾಗಿ ಕೋಪಗೊಂಡಿದ್ದ ಲಕ್ಷ್ಮಣ, ಸಿದ್ದರಾಜು ಹತ್ಯೆಗೆ ಸಂಚು ರೂಪಿಸಿದ್ದನು.
ಪತ್ನಿಯ ಮೊದಲ ಪತಿಗೆ ಚಾಕು ಇರಿದು ಕೊಂದ ಎರಡನೇ ಪತಿ..!
ಶುಕ್ರವಾರ ಸಂಜೆ ಲಕ್ಷ್ಮಣ್, ಚೇತನ್, ಪ್ರತಾಪ್ ಮದ್ಯ ಸೇವಿಸಲು ಬಾರ್‌ಗೆ ಹೋಗಿದ್ದಾಗ ಸಿದ್ದರಾಜು ಕಣ್ಣಿಗೆ ಬಿದ್ದಿದ್ದ. ಬಳಿಕ ಸಿದ್ದರಾಜು ಕಾವಲಿಗೆ ಪ್ರತಾಪ್‌ನನ್ನು ಬಾರ್‌ನಲ್ಲಿ ಬಿಟ್ಟು ಹೋಗಿದ್ದರು. ಸುಬ್ಬಣ್ಣ ಚೆಟ್ಟಿರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಿದ್ದರಾಜು ಜೊತೆ ಗಲಾಟೆ ತೆಗೆದು ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದರು.
ಕೃತ್ಯ ನಡೆದ ಸ್ಥಳದಲ್ಲಿನ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ ಲಕ್ಷ್ಮಣನ ಕೃತ್ಯ ಎಂಬುದು ಖಚಿತವಾಗಿತ್ತು. ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಹಿಡಿದು ತನಿಖೆ ಮುಂದುವರಿಸಿದಾಗ, ಆರೋಪಿಗಳು ಹೊಸಕೆರೆ ಹಳ್ಳಿ ಬಸ್ ನಿಲ್ದಾಣದ ಬಳಿ ಇರುವ ಸುಳಿವು ಸಿಕ್ಕಿತ್ತು. ಕೂಡಲೇ ಅಲ್ಲಿಗೆ ತೆರಳಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ