ಇನ್‌ಸ್ಟಾಗ್ರಾಮ್ ಮೂಲಕ ಅಶ್ಲೀಲ ವಿಡಿಯೋ ಲಿಂಕ್ ಗಳಿಸಿ ಹಣ ಗಳಿಕೆ| ಸೆಂಟ್ರಲ್ ಕ್ರೈಂ ಬ್ಯೂರೋದಿಂದ ಮಾಹಿತಿ ವ್ಯವಸ್ಥಿತ ಜಾಲದ ಮೂಲಕ ದೇಶವ್ಯಾಪಿ ಕೃತ್ಯ| ಈತನೊಂದಿಗೆ ಇತರ ಇತರ ರಾಜ್ಯದ 10 ದಂಧೆಕೋರರು ಭಾಗಿ|
ಬೆಂಗಳೂರು(ಜು.29): ಮಕ್ಕಳ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದ ಅಂತಾರಾಜ್ಯ ಮಟ್ಟದ ದಂಧೆಕೋರರನೊಬ್ಬನನ್ನು ಸಿಐಡಿ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಮೂಲದ ಸೌರವ್ ಶೆಟ್ಟಿ(21) ಬಂಧಿತ. ಆರೋಪಿಯಿಂದ ಅಶ್ಲೀಲ ವಿಡಿಯೋ ಸೇರಿದಂತೆ ಕೆಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಎಂಬಿಎ ಪದವೀಧರನಾಗಿದ್ದು, ಇತ್ತೀಚೆಗಷ್ಟೇ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ. ಕಳೆದ ಮೂರು ವರ್ಷಗಳಿಂದ ಈ ದಂಧೆಯಲ್ಲಿ ತೊಡಗಿದ್ದ. ಆರೋಪಿ ಮಕ್ಕಳ ಲೈಂಗಿಕ (ನಿರ್ಬಂಧಿತ) ವಿಡಿಯೋಗಳನ್ನು ಸಾಮಾಜಿಕ ಜಾಲತಾಣ ‘ಇನ್‌ಸ್ಟಾಗ್ರಾಮ್’ ಮೂಲಕ ಆಸಕ್ತರಿಗೆ ವಿಡಿಯೋ ಲಿಂಕ್ ಕಳುಹಿಸುತ್ತಿದ್ದ. ಈ ಮೂಲಕ ಹಣ ಸಂಪಾದನೆ ಮಾಡುತ್ತಿದ್ದ ಎನ್ನಲಾಗಿದೆ.
ಹೈಟೆಕ್ ವೇಶ್ಯವಾಟಿಕೆ ದಂಧೆ: ಮೂವರು ಆರೋಪಿಗಳ ಸೆರೆ!
ಈತನೊಂದಿಗೆ ಇತರ ರಾಜ್ಯದ 10 ಮಂದಿ ದಂಧೆಕೋರರು ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ದೇಶವ್ಯಾಪಿ ದಂಧೆಕೋರರು ಕೃತ್ಯದಲ್ಲಿ ತೊಡಗಿದ್ದಾರೆ. ಜಾಲದ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗೆ ಸಿಐಡಿ ತನಿಖಾಧಿಕಾರಿಗಳು ವಿಸ್ತೃತ ವರದಿ ನೀಡಿದ್ದಾರೆ. ಹಣಕ್ಕಾಗಿ ಆರೋಪಿಗಳು ವ್ಯವಸ್ಥಿತ ಜಾಲ ರೂಪಿಸಿಕೊಂಡು ಕೃತ್ಯ ಎಸಗುತ್ತಿದ್ದರು. ಆದರೆ ಈ ಮಕ್ಕಳನ್ನು ಯಾರು ಬಳಸಿಕೊಂಡು ವಿಡಿಯೋ ಮಾಡಿದ್ದರು ಎಂಬುದು ಇನ್ನಷ್ಟೇ ತನಿಖೆ ಬಳಿಕ ಹೊರ ಬರಬೇಕಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ಪತ್ತೆ ಹೇಗೆ?
ಕೇಂದ್ರ ಸರ್ಕಾರದ ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋ ಸೈಬರ್ ಟಿಪ್‌ಲೈನ್ ಮೂಲಕ ರಾಜ್ಯದ ವ್ಯಕ್ತಿಯೊಬ್ಬ ಅಪ್ರಾಪ್ತ ವಯಸ್ಸಿನ ಮಕ್ಕಳ ಲೈಂಗಿಕ ದೃಶ್ಯಾವಳಿಗಳನ್ನು ಆನ್‌ಲೈನ್‌ನಲ್ಲಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುವ ಬಗ್ಗೆ ಸಿಐಡಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಕೂಡಲೇ ಕಾರ್ಯ ಪ್ರವೃತ್ತರಾದ ಸಿಐಡಿ ಕ್ರೈಂ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
7 ಜಿಬಿ ಅಶ್ಲೀಲ ವಿಡಿಯೋ ಪತ್ತೆ
ಆರೋಪಿ ಸೌರವ್‌ಶೆಟ್ಟಿಬಳಿ ಏಳು ಜಿಬಿಯ ಮಕ್ಕಳ ಅಶ್ಲೀಲ ವಿಡಿಯೋ ಜಪ್ತಿ ಮಾಡಲಾಗಿದೆ. ವಿದ್ಯಾರ್ಥಿ ದೆಸೆಯಿಂದಲೇ ಆರೋಪಿ ದಂಧೆಯಲ್ಲಿ ತೊಡಗಿದ್ದಾನೆ. ಈತನೊಂದಿಗೆ ಹೊರ ರಾಜ್ಯದ ಹತ್ತು ಮಂದಿ ಸಂಪರ್ಕದಲ್ಲಿದ್ದಾರೆ. ಕೆಲ ವರ್ಷಗಳ ಹಿಂದೆ ಆರೋಪಿ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ಹುಡುಕಾಟ ನಡೆಸುವಾಗ ದಂಧೆಕೋರರ ಸಂಪರ್ಕಕ್ಕೆ ಬಂದಿದ್ದಾನೆ. ನಂತರ ದಂಧೆಕೋರರ ಮೂಲಕ ಅಶ್ಲೀಲ ವಿಡಿಯೋಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ. ಈತನಿಗೆ ಎಷ್ಟುಹಣ ಕೊಡುತ್ತಿದ್ದರು, ಎಷ್ಟುಹಣಕ್ಕೆ ವಿಡಿಯೋ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆ ಬಳಿಕ ಸಂಪೂರ್ಣ ಮಾಹಿತಿ ಹೊರ ಬರಲಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.