ಎಟಿಎಂ ಸರ್ವಿಸ್‌ ನೆಪದಲ್ಲಿ 50 ಲಕ್ಷ ಲೂಟಿ..!

By Kannadaprabha News  |  First Published Nov 13, 2020, 12:24 PM IST

ಉತ್ತರ ಭಾರತ ಮೂಲದ ಆರೋಪಿಂದ 25.5 ಲಕ್ಷ ಜಪ್ತಿ| ಐದು ಎಟಿಎಂ ಕೇಂದ್ರಗಳಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ನಕಲು ಮಾಡಿ ಆತ 30 ಲಕ್ಷ ಲಪಟಾಯಿಸಿದ್ದ ಆರೋಪಿ| ಬ್ಯಾಂಕ್‌ ಸಾಲ ಮಾಡಿಕೊಂಡಿದ್ದ. ಅದನ್ನು ತೀರಿಸಲು ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡ ಆರೋಪಿ| 


ಬೆಂಗಳೂರು(ನ.13): ಕೆಲವು ದಿನಗಳ ಹಿಂದೆ ಮಾಗಡಿ ರಸ್ತೆ ಬಳಿ ಯಂತ್ರಗಳ ಸರ್ವಿಸ್‌ ನೆಪದಲ್ಲಿ ಎಟಿಎಂ ಘಟಕದಲ್ಲಿ ಹಣ ದೋಚಿದ್ದ ಖಾಸಗಿ ಸಂಸ್ಥೆ ನೌಕರನೊಬ್ಬನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಭಾರತ ಮೂಲದ, ಲಗ್ಗೆರೆ ನಿವಾಸಿ ವಿನಯ್‌ ಜೋಗಿ (36) ಬಂಧಿತ. ಆರೋಪಿಯಿಂದ 25.5 ಲಕ್ಷ ಜಪ್ತಿ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಮಾಗಡಿ ರಸ್ತೆಯ ಎಟಿಎಂ ಘಟಕಗಳಲ್ಲಿ ಹಣ ಕಳ್ಳತನ ನಡೆದಿತ್ತು. ಕಳ್ಳತನ ಬಳಿಕ ನಿಗೂಢವಾಗಿ ಕೆಲಸ ತೊರೆದು ನಾಪತ್ತೆಯಾಗಿದ್ದ ಜೋಗಿ ಮೇಲೆ ಶಂಕೆ ಮೂಡಿತು. ಕೊನೆಗೆ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

Latest Videos

undefined

ಎಟಿಎಂಗಳಿಗೆ ಹಣ ತುಂಬುವ ಸೆಕ್ಯೂರ್‌ ವ್ಯಾಲ್ಯೂ ಕಂಪನಿಯಲ್ಲಿ ಕಸ್ಟೋಡಿಯನ್‌ ಆಗಿದ್ದ ವಿನಯ್‌ ಜೋಗಿ, ಎಟಿಎಂ ಯಂತ್ರಗಳನ್ನು ಸರ್ವಿಸ್‌ ಮಾಡುವ ನೆಪದಲ್ಲಿ ಆರೋಪಿ ಒಟ್ಟು 50 ಲಕ್ಷ ದೋಚಿರುವುದು ವಿಚಾರಣೆ ವೇಳೆ ಗೊತ್ತಾಗಿದೆ. ಈ ಹಣದಲ್ಲಿ ತನ್ನ ತಂದೆ-ತಾಯಿಗೆ ನೀಡಿದ್ದ 14.50 ಲಕ್ಷ ಹಾಗೂ ಬ್ಯಾಂಕ್‌ ಸಾಲ ತೀರಿಸಲು ಖಾತೆಗೆ ಜಮಾ ಮಾಡಿದ್ದ 11 ಲಕ್ಷ ಸೇರಿ 25.5 ಲಕ್ಷ ಜಪ್ತಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಕ್ಕಾ ಸಿನಿಮಾ.. 15 ಕೋಟಿ ರೂ. ಮೊಬೈಲ್ ಹೊತ್ತೊಯ್ಯುತ್ತಿದ್ದ ಟ್ರಕ್ ದರೋಡೆ!

ಮಾಗಡಿ ರಸ್ತೆಯಲ್ಲಿರುವ ಎಟಿಎಂ ಘಟಕಗಳ ಉಸ್ತುವಾರಿಯನ್ನು ಆತನಿಗೆ ಸಂಸ್ಥೆ ವಹಿಸಿತ್ತು. ಆ.24ರಿಂದ ಆತ ಕೆಲಸಕ್ಕೆ ಬಾರದೆ ದಿಢೀರ್‌ ಕಣ್ಮೆರೆಯಾಗಿದ್ದ. ಬಳಿಕ ಸಂಸ್ಥೆ ಅಧಿಕಾರಿಗಳು, ಜೋಗಿ ಸ್ಥಾನಕ್ಕೆ ಬಸವರಾಜ್‌ ಎಂಬಾತನನ್ನು ನೇಮಿಸಿದ್ದರು. ಬಳಿಕ ಮಾಗಡಿ ರಸ್ತೆಯ ಎಟಿಎಂಗಳಿಗೆ ಸಂಬಂಧಿಸಿದ ಹಣದ ಬಗ್ಗೆ ದಾಖಲೆ ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ.

ಐದು ಎಟಿಎಂ ಕೇಂದ್ರಗಳಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ನಕಲು ಮಾಡಿ ಆತ 30 ಲಕ್ಷ ಲಪಟಾಯಿಸಿದ್ದ. ಈ ಕುರಿತು ಕಂಪನಿಯ ವ್ಯವಸ್ಥಾಪಕ ರಾಜು ಎಂಬುವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಉತ್ತರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಜೋಗಿಯನ್ನು ಬಂಧಿಸಲಾಗಿದೆ. ಬ್ಯಾಂಕ್‌ ಸಾಲ ಮಾಡಿಕೊಂಡಿದ್ದ. ಅದನ್ನು ತೀರಿಸಲು ಕೃತ್ಯ ಎಸಗಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
 

click me!