
ಬೆಂಗಳೂರು(ನ.13): ನಗರದಲ್ಲಿ ಮತ್ತೊಂದು ವಂಚಕ ಕಂಪನಿ ಬೆಳಕಿಗೆ ಬಂದಿದ್ದು, ದುಬಾರಿ ಬಡ್ಡಿ ಆಸೆ ತೋರಿಸಿ ಚಿಟ್ ಫಂಡ್ ಕಂಪನಿಯೊಂದು ನೂರಾರು ಜನರಿಗೆ ಮೋಸ ಮಾಡಿರುವ ಬಗ್ಗೆ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಉಲ್ಲಾಳು ಉಪನಗರ (ಸರ್.ಎಂ. ವಿಶ್ವೇಶ್ವರಯ್ಯ ಲೇಔಟ್ 6ನೇ ಬ್ಲಾಕ್) ಐಶ್ವರ್ಯಲಕ್ಷ್ಮಿ ಚಿಟ್ಸ್ ಫಂಡ್ ಪ್ರೈ.ಲಿ ವಿರುದ್ಧ ವಂಚನೆ ದೂರು ದಾಖಲಾಗಿದ್ದು, ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿರುವ ಆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪಟೇಲ್ ಆನಂದ್, ನಿರ್ದೇಶಕಿ ಹಾಗೂ ಪಟೇಲ್ ಆನಂದ್ ಪತ್ನಿ ಗಂಗಾಂಬಿಕೆ, ಮಗಳು ಗೀತಾ, ಪುಷ್ಪ ಮತ್ತು ನೌಕರರಾದ ಉಮಾಶಂಕರ್ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಲಾಕ್‌ಡೌನ್ ತಂದ ಸಂಕಟ:
ಪಟೇಲ್ ಆನಂದ್, ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಆದರೆ ಆ ಕೆಲಸ ತೊರೆದು 2018ರಲ್ಲಿ ಐಶ್ವರ್ಯ ಲಕ್ಷ್ಮಿ ಚಿಟ್ಸ್ ಫಂಡ್ ಕಂಪನಿ ಆರಂಭಿಸಿದ್ದ. ತನ್ನ ಕಂಪನಿಯಲ್ಲಿ 1 ಲಕ್ಷ ಹೂಡಿದರೆ ಮಾಸಿಕ 2500 ಬಡ್ಡಿ ಕೊಡುವುದಾಗಿ ಜನರಿಗೆ ಆನಂದ್ ಆಮಿಷವೊಡಿದ್ದ. ಈ ಮಾತು ನಂಬಿ ಆತನ ಕಂಪನಿಯಲ್ಲಿ ನೂರಾರು ಜನರು ಬಂಡವಾಳ ತೊಡಗಿಸಿದ್ದರು. ಪೂರ್ವನಿಗದಿತ ಒಪ್ಪಂದದಂತೆ ಈ ವರ್ಷದ ಫೆಬ್ರವರಿವರೆಗೆ ಗ್ರಾಹಕರ ಬ್ಯಾಂಕ್ ಖಾತೆಗೆ ಬಡ್ಡಿ ಜಮೆಯಾಗಿದೆ. ಆದರೆ ಲಾಕ್‌ಡೌನ್ ಶುರುವಾದ ಬಳಿಕ ಕಂಪನಿ ವಹಿವಾಟಿನಲ್ಲಿ ವ್ಯತ್ಯಯವಾಗಿದೆ. ಕೊರೋನಾ ನೆಪ ಹೇಳಿ ಬಡ್ಡಿ ನೀಡುವುದನ್ನು ಆರೋಪಿ ಸ್ಥಗಿತಗೊಳಿಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಲಕ್ಕೀ ಸ್ಕೀಂ ಹೆಸರಿನಲ್ಲಿ ಲಕ್ಷಾಂತರ ರೂ. ಪಂಗನಾಮ: ಕಂಗಾಲಾದ ಜನತೆ..!
ಈ ಬಗ್ಗೆ ಜ್ಞಾನಭಾರತಿ ಪೊಲೀಸ್ ಠಾಣೆಗೆ ಬಸವೇಶ್ವರನಗರದ ಎಂ.ದೀಪು ಎಂಬಾಕೆ ದೂರು ನೀಡಿದ್ದಾರೆ. ಆನಂತರ ಹಲವು ಮಂದಿ ದೂರು ಸಲ್ಲಿಸಿದ್ದಾರೆ. ಇದರಿಂದ ನೂರಾರು ಮಂದಿಗೆ ಆನಂದ್ ವಂಚಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಐಶ್ವರ್ಯ ಚಿಟ್ಸ್ ಕಂಪನಿಗೆ ವ್ಯವಸ್ಥಾಪಕ ನಿರ್ದೇಶಕನಾಗಿದ್ದ ಆನಂದ್, ಆ ಕಂಪನಿಗೆ ತನ್ನ ಪತ್ನಿ, ಮಕ್ಕಳು ಹಾಗೂ ನೌಕರರನ್ನು ನಿರ್ದೇಶಕರಾಗಿಸಿಕೊಂಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ
ತನ್ನ ಕಂಪನಿ ಗ್ರಾಹಕರಿಗೆ ಹಣದ ಭದ್ರತೆಗೆ ಭರವಸೆ ಕೊಟ್ಟಿದ್ದ ಆನಂದ್, ತಾನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಹಣಕ್ಕೆ ತೊಂದರೆಯಾಗುವುದಿಲ್ಲ. ನಿಮ್ಮ ಹಣಕ್ಕೆ ಮೋಸವಿಲ್ಲ ಎಂದು ಹೇಳಿ ಜನರಿಗೆ ನಾಮ ಹಾಕಿದ್ದಾನೆ ಎನ್ನಲಾಗಿದೆ.
ಜ್ಞಾನಭಾರತಿ ಠಾಣೆಗೆ ಐಶ್ವರ್ಯ ಲಕ್ಷ್ಮಿ ಚಿಟ್ಸ್ ಫಂಡ್ ಪ್ರೈ.ಲಿ. ಕಂಪನಿಯಲ್ಲಿ ಹಣ ತೊಡಗಿಸಿ ವಂಚನೆಗೊಳಗಾಗಿರುವ ಜನರು ದೂರು ನೀಡಿದರೆ ಪರಿಶೀಲಿಸಿ ತನಿಖೆ ನಡೆಸುತ್ತೇವೆ. ತಪ್ಪಿಸಿಕೊಂಡಿರುವ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಎಂ.ಪಾಟೀಲ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ