Crime News: ಘಜ್ವಾ-ಎ-ಹಿಂದ್ ತನಿಖೆಯಲ್ಲಿ ತೊಡಗಿರುವ ಎಸ್‌ಐಟಿ ಅಧಿಕಾರಿಯನ್ನು ಹನಿ ಟ್ರ್ಯಾಪ್‌ನಲ್ಲಿ ಸಿಲುಕಿಸುವ ಸಂಚು ಬಯಲಿಗೆ ಬಂದಿದೆ
ಪಾಟ್ನಾ (ಜು. 22): ಘಜ್ವಾ-ಎ-ಹಿಂದ್ ತನಿಖೆಯಲ್ಲಿ ತೊಡಗಿರುವ ಎಸ್‌ಐಟಿಯನ್ನು (SIT) ಹನಿ ಟ್ರ್ಯಾಪ್‌ನಲ್ಲಿ ಸಿಲುಕಿಸುವ ಸಂಚು ಬಯಲಿಗೆ ಬಂದಿದೆ. ಫುಲ್ವಾರಿಶರೀಫ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್ ಐಟಿಯ ಅಧಿಕಾರಿಯೊಬ್ಬರನ್ನು ಹನಿ ಟ್ರ್ಯಾಪ್‌ನಲ್ಲಿ ಸಿಲುಕಿಸುವ ಯತ್ನ ನಡೆದಿದ್ದು, ಪೊಲೀಸರು ವಿಫಲಗೊಳಿಸಿದ್ದಾರೆ. ಈ ಸಂಖ್ಯೆ ಪಾಕಿಸ್ತಾನದ್ದು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಆ ಅಧಿಕಾರಿಯನ್ನು ಹನಿ ಟ್ರ್ಯಾಪ್‌ನಲ್ಲಿ ಸಿಲುಕಿಸಿ ತನಿಖೆಗೆ ಸಂಬಂಧಿಸಿದ ಮಾಹಿತಿ ಪಡೆಯುವ ಸಂಚು ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಎಸ್‌ಐಟಿಗೆ ಸಂಬಂಧಿಸಿದ ಅಧಿಕಾರಿಗಳು ಈ ವಿಷಯದಲ್ಲಿ ಯಾವುದೇ ಮಾಹಿತಿ ನೀಡಿಲ್ಲ.
ಪ್ರಧಾನಿ ನರೇಂದ್ರ ಮೋದಿ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಹಾಗೂ ದೇಶದ್ರೋಹಿ ಚಟುವಟಿಕೆಗಳನ್ನು ಕೈಗೊಳ್ಳಲು ದೇಶದ ವಿವಿಧೆಡೆಯ ಯುವಕರಿಗೆ ತರಬೇತಿ ನೀಡುತ್ತಿದ್ದ ಶಂಕಿತ ಉಗ್ರರನ್ನು ಬಿಹಾರ ಪೊಲೀಸರು ಬಂಧಿಸಿದ್ದರು. 2047ಕ್ಕೆ ಭಾರತವನ್ನು ಇಸ್ಲಾಮಿಕ್ ದೇಶವಾಗಿಸುವ ಗುರಿಯನ್ನು ಇವರು ಹೊಂದಿದ್ದು ‘2047ರಲ್ಲಿ ಇಸ್ಲಾಮಿಕ್ ದೇಶವಾಗಿ ಭಾರತ’ ಎಂಬ ದಾಖಲೆ ಕೂಡ ಇವರ ಬಳಿ ಪತ್ತೆ ಆಗಿದೆ’ ಎಂದು ಪೊಲೀಸರು ಹೇಳಿದ್ದರು.
2023 ರಲ್ಲಿ ಜಿಹಾದ್ ಅಭಿಯಾನ: ಮಾರ್ಗುಬ್ ಅಹ್ಮದ್ ಡ್ಯಾನಿಶ್ ಅಲಿಯಾಸ್ ತಾಹಿರ್ ಎಂಬಾತನ ಮೊಬೈಲ್ ತನಿಖೆಯಿಂದ ಎಟಿಎಸ್ ಹಾಗೂ ಫುಲ್ವಾರಿಶರೀಫ್ ಠಾಣೆಯ ಪೊಲೀಸರಿಗೆ ಪಾಕಿಸ್ತಾನದ ತೀವ್ರಗಾಮಿ ಸಂಘಟನೆ ಮತ್ತು ಘಜ್ವಾ-ಎ-ಹಿಂದ್ ಗುಂಪಿನೊಂದಿಗೆ ಸಂಬಂಧವಿರುವುದು ತಿಳಿದು ಬಂದಿದೆ. ಇಬ್ಬರು ಪಾಕಿಸ್ತಾನಿಗಳು ಈ ಗುಂಪನ್ನು ನಡೆಸುತ್ತಿದ್ದರು. ಮೂಲಗಳ ಪ್ರಕಾರ, ಮಾರ್ಗುಬ್ ಮೊಬೈಲ್‌ನಿಂದ ಬಂದ ಸಂದೇಶದ ಪ್ರಕಾರ, 2023 ರಲ್ಲಿ ನೇರ ಜಿಹಾದ್ ಅಭಿಯಾನದ ಯೋಜನೆ ಹಾಕಲಾಗಿತ್ತು.
ಜಿಹಾದಿಗಳ ಕೊನೆಯ ಟಾರ್ಗೆಟ್ ಭಾರತ: ಏನಿದು ಘಜ್ವ-ಇ-ಹಿಂದ್?
ಆರೋಪಿ ಮೊಬೈಲ್‌ನಲ್ಲಿ ಪಾಕಿಸ್ತಾನ ಮೂಲದ ಮಾರ್ಖೋರ್ ಎಂಬ ನಂಬರ್ ಸೇವ್ ಆಗಿತ್ತು. ತನ್ನನ್ನು ತಾನು ಐಎಸ್‌ಐ ಏಜೆಂಟ್ ಎಂದು ಕರೆದುಕೊಳ್ಳುತ್ತಿದ್ದ ಮಾರ್ಖೋರ್ ಜೊತೆಯೂ ಆರೋಪಿ ಚಾಟ್ ಮಾಡುತ್ತಿದ್ದ. ಗಜ್ವಾ-ಇ-ಹಿಂದ್ ಅನ್ನು ಐದು ವರ್ಷಗಳವರೆಗೆ ವಿಸ್ತರಿಸುವುದರ ಬಗ್ಗೆ ಮಾತುಕತೆ ನಡೆದಿತ್ತು. ಮೊಬೈಲ್‌ನಿಂದ ಶಂಕಿತ ಪಾಕಿಸ್ತಾನಿ, ಬಾಂಗ್ಲಾದೇಶ ಮತ್ತು ಇತರ ಇಸ್ಲಾಮಿಕ್ ದೇಶಗಳ ಮೊಬೈಲ್ ಸಂಖ್ಯೆಗಳನ್ನು ಎಸ್‌ಐಟಿ ಪಡೆದುಕೊಂಡಿದೆ.
ಗಜ್ವಾ-ಇ-ಹಿಂದ್, ಇವತ್ತಲ್ಲದಿದ್ದರೆ ನಾಳೆ ನಡೆಯುತ್ತದೆ: ಇವತ್ತಲ್ಲದಿದ್ದರೆ ನಾಳೆ ಘಜ್ವಾ-ಎ-ಹಿಂದ್ ನಡದೇ ನಡೆಯುತ್ತದೆ ಎಂದು ಮಾರ್ಗುಬ್ ವಿಚಾರಣೆಯ ಸಮಯದಲ್ಲಿ ಎಸ್‌ಐಟಿಗೆ ಹೇಳಿದ್ದಾನೆ. ಭಾರತ ಮತ್ತು ಪಾಕಿಸ್ತಾನದ ನಿರ್ದಿಷ್ಟ ಸಮುದಾಯಗಳ ಜನರು ಹೋರಾಡುತ್ತಾರೆ. ಪಾಕಿಸ್ತಾನ ನಾಯಕನಾಗುತ್ತದೆ. ಪ್ರಪಂಚದ ಎಲ್ಲಾ ಮುಸ್ಲಿಮರು ಪಾಕಿಸ್ತಾನದ ನಾಯಕತ್ವದಲ್ಲಿ ಹೋರಾಡುತ್ತಾರೆ. 2024 ರಲ್ಲಿ ಖಲೀಫತ್ ಇರುತ್ತದೆ, ಪ್ರಪಂಚದಾದ್ಯಂತ ಖಲೀಫೇಟ್ ಇರುತ್ತದೆ. ವಿಚಾರಣೆ ವೇಳೆ ಇಂತಹ ಹಲವು ಮಾತುಗಳನ್ನು ಆರೋಪಿ ಹೇಳಿದ್ದಾನೆ ಎನ್ನಲಾಗಿದೆ.