ನಿಮ್ಮ ಫೋನ್‌ಗೆ ಬಂದ OTP ಪಾಕ್‌ಗೆ ಶೇರ್‌ ಆಗ್ಬೋದು ಎಚ್ಚರ: ಎನ್‌ಐಎ, ಎಟಿಎಸ್‌ ತನಿಖೆ

By BK Ashwin  |  First Published Jul 9, 2023, 1:55 PM IST

ಒಡಿಶಾ ಎಸ್‌ಟಿಎಫ್‌ ಇತ್ತೀಚೆಗೆ ಬಂಧಿಸಿದ್ದ ಆರೋಪಿ ಅಭಿಜಿತ್‌ ಸಂಜಯ್‌ ಜಂಬುರೆಯನ್ನು ವಿಚಾರಣೆ ಮಾಡಲು NIA ಹಾಗೂ ಮುಂಬೈ ಎಟಿಎಸ್‌ನ ತಂಡ ಮುಂದಾಗಿದೆ.


ದೆಹಲಿ (ಜುಲೈ 9, 2023): ನಿಮ್ಮ ಮೊಬೈಲ್‌ಗೆ ಯಾವ್ಯಾವುದೋ ನಂಬರ್‌ಗಳಿಂದ ಮೆಸೇಜ್‌ ಬರುತ್ತಿರುತ್ತದೆ. ಆ ಮೆಸೇಜ್‌ಗೆ ಬಂದ ಲಿಂಕ್‌ ಅನ್ನು ನೀವು ಕ್ಲಿಕ್‌ ಮಾಡಿದ್ರೆ ನಿಮಗೆ ಅನಾಹುತ ಖಂಡಿತ. ಹಾಗೆ, ಅಪರಿಚಿತರು ಕೇಳಿದ ಓಟಿಪಿ ಕೊಟ್ರೆ ನಿಮ್ಮ ಅಕೌಂಟ್‌ನಲ್ಲಿರೋ ಹಣವೆಲ್ಲ ಖಾಲಿ ಆಗ್ಬೋದು. ಅಲ್ಲದೆ, ಈ ಓಟಿಪಿಗಳು ಪಾಕಿಸ್ತಾನಕ್ಕೂ ಶೇರ್‌ ಆಗ್ತಿದೆ ಅಂದ್ರೆ ನೀವು ನಂಬ್ಲೇಬೇಕು. ಇಂತಹದ್ದೊಂದು ಗ್ಯಾಂಗ್‌ ಅನ್ನು ಪತ್ತೆಹಚ್ಚಲಾಗಿದ್ದು, ಈಗ ಆ ಆರೋಪಿಗಳ ವಿಚಾರಣೆಯನ್ನು ಎನ್‌ಐಎ ಹಾಗೂ ಮುಂಬೈ ಎಟಿಎಸ್‌ ನಡೆಸಲಿದೆ. 

ಹೌದು, ಒಡಿಶಾ ಎಸ್‌ಟಿಎಫ್‌ ಇತ್ತೀಚೆಗೆ ಬಂಧಿಸಿದ್ದ ಆರೋಪಿ ಅಭಿಜಿತ್‌ ಸಂಜಯ್‌ ಜಂಬುರೆಯನ್ನು ವಿಚಾರಣೆ ಮಾಡಲು NIA ಹಾಗೂ ಮುಂಬೈ ಎಟಿಎಸ್‌ನ ತಂಡ ಮುಂದಾಗಿದೆ. ಈ ಆರೋಪಿ OTPಗಳನ್ನು ಪಾಕಿಸ್ತಾನಿ ಗುಪ್ತಚರ ಕಾರ್ಯಾಚರಣೆಗಳಿಗೆ ರವಾನೆ ಮಾಡ್ತಿದ್ದ ಎಂದು ಹೇಳಲಾಗಿದೆ.  ಮಹಾರಾಷ್ಟ್ರದ ಪುಣೆಯಲ್ಲಿ ಈತನನ್ನು ಜೂನ್ 29ರಂದು ಬಂಧಿಸಲಾಗಿದ್ದು, ಬಳಿಕ ಟ್ರಾನ್ಸಿಟ್‌ ಮೂಲಕ ಒಡಿಶಾಗೆ ಕರೆದುಕೊಂಡು ಹೋಗಲಾಗಿದೆ. ಈತ ಗುಜರಾತ್‌ನ ಸರ್ದಾರ್‌ ವಲ್ಲಬಭಾಯಿ ಪಟೇಲ್‌ನಲ್ಲಿ ಡಿಗ್ರಿ ಪಡೆದುಕೊಂಡಿದ್ದು, ಪುಣೆಯಲ್ಲಿ ಸಾಫ್ಟ್‌ವೇರ್ ಕಂಪನಿಯಾದ ವಿಪ್ರೋನಲ್ಲಿ ಕೆಲಸ ಮಾಡ್ತಿದ್ದ ಎಂದು ತಿಳಿದುಬಂದಿದೆ.

Tap to resize

Latest Videos

ಇದನ್ನು ಓದಿ: ವಾಟ್ಸಾಪ್‌ ಕಾಲ್‌ನಲ್ಲಿ ಬೆತ್ತಲಾದ 78 ವರ್ಷದ ವೃದ್ಧ: ಮುತ್ತಿನ ನಗರಿಯಲ್ಲಿ ಸೈಬರ್‌ ವಂಚಕರಿಂದ 23 ಲಕ್ಷ ರೂ. ಪಂಗನಾಮ

ಪಾಕಿಸ್ತಾನದ ಗುಪ್ತಚರ ಅಥವಾ ಸೇನಾ ಅಧಿಕಾರಿಗಳೊಂದಿಗೆ ಆತನ ಸಂಪರ್ಕ ಅಥವಾ ಸಂಬಂಧದ ಬಗ್ಗೆ ಹೆಚ್ಚು ಮಾಹಿತಿ ಪಡೆದುಕೊಳ್ಳಲು ಎನ್‌ಐಎ ಹಾಗೂ ಮುಂಬೈ ಎಟಿಎಸ್‌ ಯತ್ನಿಸಲಿದೆ. ಈ ಹಿನ್ನೆಲೆ ಈ ಬೆಳವಣಿಗೆ ಹೆಚ್ಚು ಗಮನ ಸೆಳೆದಿದೆ. 2018 ರಲ್ಲಿ "ಚೆಗ್" ನಲ್ಲಿ ಫ್ರೀಲ್ಯಾನ್ಸರ್ ಎಂದು ಗುರುತಿಸಿಕೊಂಡ ಪಾಕಿಸ್ತಾನದ ಫೈಸ್ಲಾಬಾದ್‌ನ ಖಾನ್ಕಿಯ ಡ್ಯಾನಿಶ್ ಅಲಿಯಾಸ್ ಸೈಯದ್ ಡ್ಯಾನಿಶ್ ಅಲಿ ನಖ್ವಿಯನ್ನು ಫೇಸ್‌ಬುಕ್ ಮೆಸೆಂಜರ್ ಮೂಲಕ ಅಭಿಜಿತ್ ಭೇಟಿಯಾಗಿದ್ದಾನೆ ಎಂದು ಎಸ್‌ಟಿಎಫ್ ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು.

ಕರಾಚಿಯ ಖುರ್ರಾಮ್ ಅಲಿಯಾಸ್ ಅಬ್ದುಲ್ ಹಮೀದ್ ಎಂಬಾತನಿಗೆ ಅಭಿಜಿತ್‌ನನ್ನು ಪರಿಚಯಿಸಿದವನು ಡ್ಯಾನಿಶ್. ಖುರ್ರಂ ಪಾಕಿಸ್ತಾನದ ಸೇನೆಯ ಹಿರಿಯ ಗುಪ್ತಚರ ಅಧಿಕಾರಿ ಎಂದು ಹೇಳಲಾಗಿದ್ದು, ಅಲ್ಲದೆ, ಇವರು ಭಾರತದಲ್ಲಿ ಏಜೆಂಟ್‌ಗಳ ದೊಡ್ಡ ನೆಲೆ/ನೆಟ್‌ವರ್ಕ್ ಹೊಂದಿದ್ದಾರೆ ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: ಸಂಸದನ ವಿರುದ್ಧ ಟ್ವೀಟ್‌: ಬಿಜೆಪಿ ರಾಜ್ಯ ಕಾರ್ಯದರ್ಶಿ ಬಂಧಿಸಿದ ಸೈಬರ್‌ ಕ್ರೈಂ ಪೊಲೀಸರು

ಖುರ್ರಂ ಅವರ ಸೂಚನೆಯಂತೆ ಅಭಿಜಿತ್ ಭಾರತದಲ್ಲಿ ಕೆಲಸ ಮಾಡುತ್ತಿರುವ ವಿವಿಧ ಪಿಐಒಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದರು. ಅಭಿಜಿತ್ ವಾಟ್ಸಾಪ್ ಮೂಲಕ ಕನಿಷ್ಠ ಏಳು ಪಾಕಿಸ್ತಾನಿ ನಾಗರಿಕರು ಮತ್ತು 10 ನೈಜೀರಿಯಾದ ನಾಗರಿಕರೊಂದಿಗೆ ಮಾತನಾಡಿದ್ದಾನೆ ಎಂದೂ ತಿಳಿದುಬಂದಿದೆ. ಸದ್ಯ, ಎನ್‌ಐಎ ಹಾಗೂ ಮುಂಬೈ ಎಟಿಎಸ್‌ ಈ ಪ್ರಕರಣದ ಆರೋಪಿಯನ್ನು ವಿಚಾರಣೆ ನಡೆಸುವುದರೊಂದಿಗೆ ಈ ಪ್ರಕರಣ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. 

ನಾಗರಿಕರು ಸಹ ಇಂತಹ ಪ್ರಕರಣಗಳಿಂದ ಎಚ್ಚೆತ್ತುಕೊಳ್ಳಬೇಕಾಗಿದೆ. ನಿಮ್ಮ ಮೊಬೈಲ್‌ಗೆ ಬಂದ ಅಪರಿಚಿತ ಸಂದೇಶಗಳ ಲಿಂಕ್‌ ಕ್ಲಿಕ್‌ ಮಾಡಬೇಡಿ. ಅಥವಾ ಓಟಿಪಿಯನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ. 

ಇದನ್ನೂ ಓದಿ: ಹರ್ಷದ್‌ ಮೆಹ್ತಾನಂತೆ ವಂಚನೆ: 3 ತಿಂಗಳಲ್ಲಿ 4,672 ಕೋಟಿ ರೂ. ಅಕ್ರಮ ಷೇರು ವಹಿವಾಟು ಮಾಡಿದ ಸ್ಟಾಕ್‌ ಬ್ರೋಕರ್!

click me!