ಕೊಪ್ಪಳ: ಆನ್‌ಲೈನ್‌ನಲ್ಲಿ ಹಣ ಡಬ್ಲಿಂಗ್‌ ಪ್ರಕರಣ,ತನಿಖೆ ಚುರುಕು

By Kannadaprabha NewsFirst Published Jul 3, 2023, 12:50 PM IST
Highlights

ಕಿಪ್ಟೋಕರೆನ್ಸಿ ಹಾಗೂ ಆನ್‌ಲೈನ್‌ ಡಬ್ಲಿಂಗ್‌ ದಂಧೆ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅದರಲ್ಲೂ ಕುಷ್ಟಗಿಯಲ್ಲಿ ಖಾಸಗಿ ಶಾಲೆಯ ಶಿಕ್ಷಕ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ದಂಧೆಯ ಕರಾಳಮುಖ ತೆರೆದಿಟ್ಟಆನಂತರ ಅದರ ಕಬಂಧ ಬಾಹು ಎಷ್ಟುದೊಡ್ಡದಿದೆ ಎನ್ನುವುದು ಬೆಳಕಿಗೆ ಬಂದಿತು.

ಸೋಮರಡ್ಡಿ ಅಳವಂಡಿ

ಕೊಪ್ಪಳ (ಜು.3) :  ಕಿಪ್ಟೋಕರೆನ್ಸಿ ಹಾಗೂ ಆನ್‌ಲೈನ್‌ ಡಬ್ಲಿಂಗ್‌ ದಂಧೆ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅದರಲ್ಲೂ ಕುಷ್ಟಗಿಯಲ್ಲಿ ಖಾಸಗಿ ಶಾಲೆಯ ಶಿಕ್ಷಕ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ದಂಧೆಯ ಕರಾಳಮುಖ ತೆರೆದಿಟ್ಟಆನಂತರ ಅದರ ಕಬಂಧ ಬಾಹು ಎಷ್ಟುದೊಡ್ಡದಿದೆ ಎನ್ನುವುದು ಬೆಳಕಿಗೆ ಬಂದಿತು.

Latest Videos

ಈ ಪ್ರಕರಣದಲ್ಲಿ ಕುಟುಂಬಸ್ಥರು ದೂರು ನೀಡಿ, ಸಮಗ್ರ ತನಿಖೆ ಮಾಡುವ ದಿಸೆಯಲ್ಲಿ ಮುಂದಾಗಲಿಲ್ಲ. ಹೀಗಾಗಿ, ಈಗ ಪೊಲೀಸ್‌ ಇಲಾಖೆಯೇ ಸ್ವಯಂ ಪ್ರಕರಣ ದಾಖಲಿಸಿ ಬಯಲು ಮಾಡಲು ಮುಂದಾಗಿದೆ.

ಕುಷ್ಟಗಿ ಖಾಸಗಿ ಶಾಲೆಯ ಶಿಕ್ಷಕ ವೀಡಿಯೋದಲ್ಲಿ ಹೇಳಿರುವುದೆಲ್ಲವನ್ನು ಗಂಭೀರವಾಗಿಯೇ ಪರಿಗಣಿಸಿರುವ ಪೊಲೀಸ್‌ ಇಲಾಖೆ ಸಮಗ್ರ ತನಿಖೆಗೆ ಮುಂದಾಗಿದೆ. ವಿಶೇಷವಾಗಿ ಕುಷ್ಟಗಿ ಖಾಸಗಿ ಶಾಲೆಯ ಶಿಕ್ಷಕ ನೀಡಿದ ಹೇಳಿಕೆ ಮತ್ತು ಅದರಲ್ಲಿ ಪ್ರಸ್ತಾಪ ಮಾಡಿದ ಎಂಬಿಬಿ ಹೆಸರು ಸೇರಿದಂತೆ ಅದರ ಸುತ್ತಮುತ್ತ ತನಿಖೆ ಮಾಡುತ್ತಿದ್ದಾರೆ. ಇದಕ್ಕಿಂತ ಮಿಗಿಲಾಗಿ ಇದರಲ್ಲಿ ತೊಡಗಿಕೊಂಡು ದಂಧೆಗೆ ಇಳಿದಿದ್ದು ಬಹುತೇಕ ಶಿಕ್ಷಕರು ಮತ್ತು ಹೂಡಿಕೆ ಮಾಡಿದ್ದು ಶಿಕ್ಷಕರೇ ಎನ್ನುವುದು ಗಮನಾರ್ಹ ಸಂಗತಿ.

ಈಗಾಗಲೇ ಈ ಪ್ರಕರಣದ ಪ್ರಮುಖ ರೂವಾರಿಗಳ ವಿರುದ್ಧ ರಾಜ್ಯದ ನಾನಾ ಕಡೆ ಪ್ರಕರಣ ದಾಖಲಾಗಿರುವುದರಿಂದ ಮತ್ತು ಇದರ ಜಾಲ ರಾಷ್ಟ್ರಮಟ್ಟದಲ್ಲಿ ಬೇರೂರಿರುವುದರಿಂದ ಸಿಐಡಿ ತನಿಖೆಯೂ ನಡೆಯುತ್ತಿದೆ. ಹೀಗಾಗಿ, ಕೊಪ್ಪಳ ಪೊಲೀಸ್‌ ಇಲಾಖೆ ದಾಖಲಿಸಿಕೊಂಡಿರುವ ಸ್ವಯಂ ಪ್ರಕರಣವೂ ಇದಕ್ಕೆ ಪೂರಕವಾಗಿದೆ.

ಮುಂಬೈ ಪೊಲೀಸ್‌ ಸೋಗಿನಲ್ಲಿ ಟೆಕ್ಕಿಗೆ ₹33.24 ಲಕ್ಷ ವಂಚನೆ!

ಕೊಪ್ಪಳ ಪೊಲೀಸ್‌ ಇಲಾಖೆ ರೂವಾರಿಯನ್ನು ಬೆನ್ನು ಹತ್ತುವ ಬದಲು ಅದರಲ್ಲಿ ತೊಡಗಿಕೊಂಡಿರುವ ಸ್ಥಳೀಯರನ್ನು ಪತ್ತೆ ಮಾಡುವುದಕ್ಕೆ ಹೆಚ್ಚು ಒತ್ತು ನೀಡಿದೆ. ಯಾಕೆಂದರೆ ಅದರ ರೂವಾರಿಯನ್ನು ಈಗಾಗಲೇ ಸಿಐಡಿ ಪೊಲೀಸರು ಬೆನ್ನು ಹತ್ತಿದ್ದಾರೆ.

ಅಮಾಯಕರ ಬಲಿ:

ಇಂಥ ಡಬ್ಲಿಂಗ್‌ ದಂಧೆಗೆ ಅಮಾಯಕ ಶಿಕ್ಷಕರು ಬಲಿಯಾಗುತ್ತಿದ್ದಾರೆ. ಹೂಡಿಕೆ ಮಾಡುವ ನೆಪದಲ್ಲಿ ಬ್ಯಾಂಕಿನಲ್ಲಿ ಸಾಲ ಮಾಡಿ ಹೂಡಿಕೆ ಮಾಡುತ್ತಿದ್ದಾರೆ. ಆರು ತಿಂಗಳಲ್ಲಿ, ವರ್ಷದಲ್ಲಿ ಡಬಲ್‌ ನೀಡುವ ದಂಧೆ ಇದಾಗಿರುವುದರಿಂದ ಅದನ್ನು ಪತ್ತೆ ಮಾಡುವ ಕಾರ್ಯ ಪೊಲೀಸ್‌ ಇಲಾಖೆ ಸದ್ದಿಲ್ಲದೆ ಮಾಡುತ್ತಿದೆ.

ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಸೇರಿದಂತೆ ಅನೇಕ ಕಡೆ ಇದರ ಏಜೆಂಟರು ಇದ್ದಾರೆ. ಮನೆಯಲ್ಲಿ ಕುಳಿತುಕೊಂಡು ಕಂಪ್ಯೂಟರ್‌ ಮೂಲಕವೇ ಎಲ್ಲ ವ್ಯವಹಾರ ಮಾಡುತ್ತಾರೆ. ಹಣ ಕಳೆದುಕೊಂಡವರು ಬಾಯಿ ಬಿಡುತ್ತಿಲ್ಲ. ಅದರಲ್ಲೂ ಕುಷ್ಟಗಿ ಖಾಸಗಿ ಶಾಲೆಯ ಶಿಕ್ಷಕ ಇದರಲ್ಲಿ ಕೋಟ್ಯಂತರ ನಷ್ಟವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಹೂಡಿಕೆ ಮಾಡಿದವರು ಮಾಡಿಯೇ ಇಲ್ಲ ಎನ್ನುವಂತೆ ಮೌನವಾಗಿದ್ದಾರೆ. ನಾನು ಹೂಡಿಕೆ ಮಾಡಿಯೇ ಇಲ್ಲ ಎಂದು ಹೇಳಿಕೊಳ್ಳಲು ಶುರು ಮಾಡಿದ್ದಾರೆ.

ಕುಷ್ಟಗಿ ಖಾಸಗಿ ಶಾಲೆಯ ಶಿಕ್ಷಕ ಆತ್ಮಹತ್ಯೆ ಪ್ರಕರಣದಲ್ಲಿ ಇಡೀ ಪ್ರಕರಣ ಪತ್ತೆ ಮಾಡುವ ಕುರಿತು ಅವರ ಕುಟುಂಬಸ್ಥರು ದೂರು ನೀಡಲು ಹಿಂದೇಟು ಹಾಕಿದರು.ಹೀಗಾಗಿ, ಇಲಾಖೆಯಿಂದಲೇ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದೇವೆ.

ಯಶೋದಾ ಒಂಟಿಗೋಡ ಎಸ್ಪಿ ಕೊಪ್ಪಳ

ಬರೋಬ್ಬರಿ 25,000 ಕೋಟಿ ರೂ. ಮೊತ್ತದ ನಕಲಿ ಜಿಎಸ್‌ಟಿ ಕ್ಲೇಮ್‌ ಪತ್ತೆ: ನಕಲಿ ದಾಖಲೆ ಸಲ್ಲಿಸಿ ವಂಚನೆ

ಏನಿದು ಪ್ರಕರಣ?

ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಬುತ್ತಿ ಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ರಾಜು ಬ್ಯಾಡಗಿ (45) ಜೂ. 23ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಇತ್ತೀಚಿಗೆ ಎಂಬಿಬಿ ಹೆಸರಿನ ಕಂಪನಿಯಲ್ಲಿ ಹಣ ಡಬಲ್‌ ಮಾಡಿಕೊಡುವುದಾಗಿ ಅನೇಕ ಜನರಿಂದ ಹಣ ಹೂಡಿಕೆ ಮಾಡಿಸಿದ್ದರು. ಮರಳಿ ವಾಪಸ್‌ ಕೊಡಿಸಲಾಗದ ಹಿನ್ನೆಲೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ‘ಇತ್ತೀಚಿನ ದಿನಗಳಲ್ಲಿ ಕೆಟ್ಟಕಣ್ಣುಗಳು ಬಿದ್ದ ಪರಿಣಾಮ ಜನರ ಹತ್ತಿರ ಪಡೆದುಕೊಂಡು ಕಂಪನಿಗೆ ಹಾಕಿರುವ ಕೋಟಿಗಟ್ಟಲೆ ದುಡ್ಡು ವಾಪಸ್‌ ಆಗಲಿಲ್ಲ. ನಾನು ಸಹ ಜನರಿಗೆ ವಾಪಸ್‌ ಮಾಡಲು ಸಾಧ್ಯವಾಗಲಿಲ್ಲ. ಇತ್ತೀಚಿಗೆ ನನ್ನ ಹತ್ತಿರ ಹೂಡಿಕೆ ಮಾಡಿರುವ ಜನರು ನನಗೆ ಕರೆ ಮಾಡಿ ದುಡ್ಡು ಕೇಳುವುದು, ಬೆದರಿಸುವುದು ಮಾಡುತ್ತಿದ್ದರು. ಇದಕ್ಕೆ ನಾನು ಹೆದರಿ ಮನನೊಂದು ಇಂದು ಸಾಯುತ್ತಿದ್ದೇನೆ.’ ಎಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು.

click me!