ಇತ್ತೀಚೆಗಷ್ಟೇ ಮದುವೆಯಾಗಿದ್ದ ನವ ಜೋಡಿಗಳು ಎರಡು ದಿನ ಜಾಲಿ ಟ್ರಿಪ್ ಮುಗಿಸಿಕೊಂಡು ವಾಪಸ್ ಊರಿಗೆ ಬರುತ್ತಿರುವಾಗ ಹಿರೇಕೆರೂರು ತಾಲ್ಲೂಕಿನ ಕೋಡದ ಬಳಿ ಐದು ದಿನಗಳ ಹಿಂದೆ ಭಾನುವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ನವ ವರ ಸ್ಥಳದಲ್ಲಿಯೇ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್, ದಾವಣಗೆರೆ
ದಾವಣಗೆರೆ (ಡಿ.16): ಇತ್ತೀಚೆಗಷ್ಟೇ ಮದುವೆಯಾಗಿದ್ದ ನವ ಜೋಡಿಗಳು ಎರಡು ದಿನ ಜಾಲಿ ಟ್ರಿಪ್ ಮುಗಿಸಿಕೊಂಡು ವಾಪಸ್ ಊರಿಗೆ ಬರುತ್ತಿರುವಾಗ ಹಿರೇಕೆರೂರು ತಾಲ್ಲೂಕಿನ ಕೋಡದ ಬಳಿ ಐದು ದಿನಗಳ ಹಿಂದೆ ಭಾನುವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ನವ ವರ ಸ್ಥಳದಲ್ಲಿಯೇ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಜಿಗಳಿ ಗ್ರಾಮದ ಮಠದ ರಾಜಯ್ಯ ಮತ್ತು ಶ್ರೀಮತಿ ಶೋಭಾ ದಂಪತಿ ಪುತ್ರ ಸಂಜಯ್ (28) ಅಪಘಾತದಲ್ಲಿ ಮೃತ ಪಟ್ಟ ದುರ್ದೈವಿಯಾಗಿದ್ದಾನೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಸಂಜಯ್, ಕಳೆದ ತಿಂಗಳು ನವೆಂಬರ್ 28 ರಂದು ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠದ ಸಮುದಾಯ ಭವನದಲ್ಲಿ ಹಮ್ಮಿ ಕೊಂಡಿದ್ದ ವಿವಾಹ ಮಹೋತ್ಸವದಲ್ಲಿ ಬೈಲ ಹೊಂಗಲದ ಪ್ರೀತಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಪ್ರೀತಿ ಕೂಡಾ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ಮದುವೆ ನಂತರ ಎಲ್ಲಾ ಶಾಸ್ತ್ರಗಳನ್ನು ಮುಗಿಸಿಕೊಂಡ ಸಂಜಯ್ ಮತ್ತು ಪ್ರೀತಿ ದಂಪತಿ ಮೊನ್ನೆ ಶನಿವಾರ ಬೆಳಿಗ್ಗೆ ಜಿಗಳಿಯಿಂದ ಬೈಕ್‌ನಲ್ಲಿ ಸಿಗಂದೂರು, ಮುರುಡೇಶ್ವರ ನೋಡಿಕೊಂಡು ಮುರುಡೇಶ್ವರದಲ್ಲಿಯೇ ತಂಗಿದ್ದಾರೆ.
ಬಿಜೆಪಿಗೆ ಬಿಎಸ್‌ವೈ ನಾಯಕತ್ವದ ಶ್ರೀರಕ್ಷೆಯಿದೆ: ಸಿಎಂ ಬೊಮ್ಮಾಯಿ
ನಿನ್ನೆ ಭಾನುವಾರ ಬೆಳಿಗ್ಗೆ ಅಲ್ಲಿಂದ ಶಿರಸಿಗೆ ಬಂದು ಮಾರಿಕಾಂಬ ದೇವಿ ದರ್ಶನ ಮಾಡಿಕೊಂಡು ವಾಪಸ್ ಜಿಗಳಿಗೆ ಬರುತ್ತಿರುವಾಗ ಹಂಸಭಾವಿ ಕೋಡ ನಡುವೆ ರಸ್ತೆ ಬದಿ ನಿಂತಿದ್ದ ಕಬ್ಬಿನ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಸಂಜಯ್ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಎರಡೂ ಕಿವಿಯಲ್ಲಿ ರಕ್ತಸ್ರಾವವಾಗಿ ಬಿದ್ದಿದ್ದಾನೆ. ಬೈಕ್‌ನ ಹಿ೦ಬದಿಯಲ್ಲಿದ್ದ ಪ್ರೀತಿಗೂ ತೀವ್ರ ತರಹದ ಗಾಯಗಳಾಗಿವೆ. ಹಂಸಭಾವಿ ಪೊಲೀಸರು ಆಗಮಿಸಿ, ಸಂಜಯ್ ಮತ್ತು ಪ್ರೀತಿ ಅವರನ್ನು ರಾಣೇಬೆನ್ನೂರು ಆಸ್ಪತ್ರೆಗೆ ಕರೆ ತಂದಿದ್ದಾರೆ. ನಂತರ ದಾವಣಗೆರೆ ಬಾಪೂಜೆ ಆಸ್ಪತ್ರೆಗೆ ಕರೆ ತರುವಷ್ಟರಲ್ಲಿ ಸ೦ಜಯ್ ಮೃತಪಟ್ಟಿದ್ದ ಎನ್ನಲಾಗಿದೆ.
ಸಂಜಯ್ ತಂದೆ ರಾಜಯ್ಯ ಮಲೇಬೆನ್ನೂರಿನ ರಾಜರಾಜೇಶ್ವರಿ ಶಾಲೆಯ ಬಸ್ ಚಾಲಕರಾಗಿದ್ದಾರೆ. ಸಂಜಯ್‌ಗೆ ಒಬ್ಬ ಸಹೋದರ ಇದ್ದಾನೆ. ಸಂಜಯ್ ಶವ ಪರೀಕ್ಷೆ ನಂತರ ಶವಾಗಾರಕ್ಕೆ ತಳ್ಳುವ ಗಾಡಿಯಲ್ಲಿ ಮಲಗಿಕೊಂಡೆ ಆಗಮಿಸಿದ ಪ್ರೀತಿ ಅವರು ತನ್ನ ಗಂಡನ ಮುಖ ಸವರಿ ದುಃಖಿಸಿದ ಆ ಕ್ಷಣ ಅಲ್ಲಿದ್ದ ಎಲ್ಲರ ಕಣ್ಣುಗಳಲ್ಲಿ ಕಣ್ಣೀರು ತರಿಸಿತು. ಸಂಜಯ್ ತಂದೆ ರಾಜಯ್ಯ, ಚಿಕ್ಕಪ್ಪ ಬಸವರಾಜಯ್ಯ ಮತ್ತು ಪ್ರೀತಿ ಅವರ ತಂದೆ - ತಾಯಿ ಹಾಗೂ ಇಬ್ಬರು ಸಹೋದರರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಜಯ್ ಶವವನ್ನು ಜಿಗಳಿಗೆ ತಂದು ಅಂತ್ಯಸಂಸ್ಕಾರ ಮಾಡಲಾಗಿದೆ.ಇಡೀ ಊರಿಗೆ ಊರೇ ದುರಂತ ಅಂತ್ಯಕಂಡ ಸಂಜಯ್ ಸಾವಿಗೆ ಮಮ್ಮಲ ಮರುಗಿದೆ. ಮದುವೆಯಾಗಿ 15 ದಿನ ಅಷ್ಟೇ ಆಗಿತ್ತು. ಆ ವಿಧಿ ಈ ಮುದ್ದಾದ ಜೋಡಿಯನ್ನು ಅಗಲಿಸಿಬಿಟ್ಟ ಎಂದು ಹಿಡಿ ಶಾಪ ಹಾಕಿದ್ಧಾರೆ.
ಶಾಸಕ ರಾಜೇಗೌಡರ 120 ಕೋಟಿ ಹಣದ ಮೂಲ ಏನು?: ಡಿ.ಎನ್.ಜೀವರಾಜ್
ಸಂಜಯ್ ಮತ್ತು ಪ್ರೀತಿ ಇಬ್ಬರ ಹೊಸ ಬದುಕಿಗಾಗಿ ಸಂಜಯ್ ಚಿಕ್ಕಪ್ಪ- ಬಸವರಾಜಯ್ಯ ಬೆಂಗಳೂರಿನಲ್ಲಿ ಬಾಡಿಗೆ ಮನೆ ನಿಗದಿ ಮಾಡಿದ್ದರು. ಸೋಮವಾರ ಈ ದಂಪತಿ ಬೆಂಗಳೂರಿಗೆ ತೆರಳುವ ಕಾರ್ಯಕ್ರಮವನ್ನೂ ನಿಗದಿ ಮಾಡಿಕೊಂಡಿದ್ದರು. ಆದರೆ, ವಿಧಿ ಆಟವೇ ಬೇರೆಯಾಗಿತ್ತು. ತಾನು ಇಷ್ಟ ಪಟ್ಟು ಮದುವೆಯಾಗಿದ್ದ ಪ್ರೀತಿ ಅವರ ಜೊತೆ ಜೀವನ ಮಾಡಲು ದೇವರು ಅವಕಾಶ ನೀಡಲಿಲ್ಲ ಎನ್ನುವುದು ಒಂದು ಕಡೆ ಆದರೆ, ಅತಿಯಾಗಿ ಪ್ರೀತಿಸುತ್ತಿದ್ದ ಸಂಜಯ್ ಇನ್ನಿಲ್ಲ ಎಂಬ ಶಾಕ್ ಪ್ರೀತಿಯನ್ನು ಮಂಕಾಗಿಸಿದೆ. ಎರಡೂ ಕೈಗಳಿಗೆ, ತಲೆಗೆ ಮತ್ತು ಸೊಂಟಕ್ಕೆ ತೀವ್ರ ಪೆಟ್ಟಾಗಿರುವ ಪ್ರೀತಿಗೆ ಶಸ್ತ್ರ ಚಿಕಿತ್ಸೆ ಆಗಿದ್ದು ಅವಳೀಗ ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿದ್ದಾರೆ, ಸಂಜಯ್ ಮನೆಯಲ್ಲಿ ನೀರವ ಮೌನ ನೆಲಸಿದೆ ಅಯ್ಯೋ ಕ್ರೂರ ವಿಧಿಯೇ ಎಂದು ವಿಧಿಯನ್ನು ಶಪಿಸುವಂತಾಗಿದೆ.