
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ ವಿಜಯಪುರ
ವಿಜಯಪುರ (ಏ10) : ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಪಡಿತರ ಅಕ್ಕಿ ಮಾರಾಟ ದಂಧೆ ಎಗ್ಗಿಲ್ಲದೆ ಸಾಗ್ತಿದೆ. ಆಗೊಂದು ಈಗೊಂದು ಇನ್ನುವಂತೆ ನಡೆಯುತ್ತಿರುವ ರೇಡ್ ಗಳ ನಡುವೆಯು ಅಕ್ಕಿ ದಂಧೆಕೋರರು ಹಸಿರು ಮೇಯುತ್ತಿದ್ದಾರೆ.. ನಗರದ ಯೋಗಾಪುರದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿಟ್ಟುಕೊಂಡಿದ್ದ ಅಡ್ಡೆಯ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ರೇಡ್ ನಡೆಸಿದ್ದಾರೆ.. ಅಪಾರ ಪ್ರಮಾಣದ ಪಡಿತರ ಅಕ್ಕಿಯನ್ನ ವಶಕ್ಕೆ ಪಡೆದಿದ್ದಾರೆ..
ಯೋಗಾಪುರದಲ್ಲಿ ನಡೆಯುತ್ತಿದ್ದ ಕಳ್ಳದಂಧೆ..!
ನಗರದ ಯೋಗಾಪುರ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಪಡಿತರ ಅಕ್ಕಿಯನ್ನು ಆಹಾರ ಇಲಾಖೆಯ ಉಪನಿರ್ದೇಶಕರ ನೇತೃತ್ವದ ತಂಡವು ವಶಪಡಿಸಿಕೊಂಡಿದೆ. ವಿಜಯಪುರ ನಗರ ವ್ಯಾಪ್ತಿಯಲ್ಲಿ ಬರುವ ಯೋಗಾಪುರ ಪ್ರದೇಶದಲ್ಲಿ ಅಕ್ರಮವಾಗಿ ಪಡಿತರ ಚೀಟಿದಾರರ ರಿಂದ ಖರೀದಿಸಿದ ಅಕ್ಕಿಯನ್ನು ಸಂಗ್ರಹಿಸಿ ಕಾಳಸಂತೆಯಲ್ಲಿ ಹೆಚ್ಚಿನ ಲಾಭಕ್ಕಾಗಿ ಮಾರಾಟ ಮಾಡುತ್ತಿದ್ದಾರೆಂದು ಖಚಿತ ಮಾಹಿತಿಯ ಮೇರೆಗೆ ಆಹಾರ ಇಲಾಖೆಯ ಉಪನಿರ್ದೇಶಕರ ನೇತೃತ್ವದ ತಂಡ ಯೋಗಾಪುರದ ಅಬ್ದುಲ್ ಗಫೂರ್ ಶಾ ದರ್ಗಾ ಹತ್ತಿರ ಇರುವ ಪತ್ರಾಸ್ ಶೆಡ್ಡಿನಲ್ಲಿ ದಾಳಿ ನಡೆಸಿದೆ. ದಾಳಿಯಲ್ಲಿ ಅಪಾರ ಪ್ರಮಾಣದ ಪಡಿತರ ಅಕ್ಕಿ ಲಭ್ಯವಾಗಿದೆ. ಸುಮಾರು 3.55 ಲಕ್ಷ ಬೆಲೆ ಬಾಳುವ 161 ಕ್ವಿಂಟಲ್ ಪಡಿತರ ಅಕ್ಕಿ ಪತ್ತೆಯಾಗಿದೆ. ಎಲ್ಲ ಅಕ್ಕಿಯನ್ನ ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ..
ಓರ್ವ ಕಳ್ಳದಂಧೆಕೋರನ ಬಂಧನ..!
ದಾಳಿಯಲ್ಲಿ ಅಪಾರ ಪ್ರಮಾಣದ ಅಕ್ಕಿಯನ್ನ ವಶಕ್ಕೆ ಪಡೆದ ಅಧಿಕಾರಿಗಳು ಇದು ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪಡಿತರ ಮೂಲಕ ಬಡವರಿಗಾಗಿ ವಿತರಿಸಲಾಗುವ ಅಕ್ಕಿ ಎನ್ನುವುದನ್ನ ಖಚಿತ ಪಡೆಸಿದ್ದಾರೆ. ಬಡವರಿಂದ ಅಕ್ಕಿ ಸಂಗ್ರಹಿಸಿ ಇಲ್ಲಿ ಅಕ್ರಮವಾಗಿ ವ್ಯವಹಾರದಲ್ಲಿ ತೊಡಗಿದ್ದ ಯೋಗಾಪುರ ನಿವಾಸಿ ಗೂಡು ಲಾಲ ತುಬಾಕಿ ಎಂಬ ವ್ಯಕ್ತಿಯನ್ನ ಗೋಳಗುಮ್ಮಟ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ಕಿದಂಧೆಕೋರ ಗೂಡುಲಾಲ್ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಗೋಳಗುಮ್ಮಟ ಠಾಣೆಯಲ್ಲಿ ಸ್ವತಃ ಆಹಾರ ನಿರೀಕ್ಷಕರೇ ದೂರು ದಾಖಲಿಸಿದ್ದಾರೆ.
ಹೇಗೆ ನಡೆಯುತ್ತೆ ಈ ಪಡಿತರ ಅಕ್ಕಿ ಕಳ್ಳದಂಧೆ..!?
ಜಿಲ್ಲೆಯ ತಾಲೂಕು ಕೇಂದ್ರ ಸೇರಿ ವಿಜಯಪುರ ನಗರದಲ್ಲೆ ಅವ್ಯಾಹತವಾಗಿ ಪಡಿತರ ಅಕ್ಕಿ ಕಳ್ಳದಂಧೆ ನಡೆಯುತ್ತಿದೆ. ಅಕ್ರಮ ದಂಧೆ ಹಲವು ಹಂತಗಳಲ್ಲಿ ನಡೆಯುತ್ತದೆ. ಒಂದನೇ ಹಂತ ಅಂದ್ರೆ ಬಿಪಿಎಲ್ ಕಾರ್ಡ್ ಬಳಕೆ ಮಾಡಿ ಅಕ್ಕಿಯನ್ನ ಪಡಿತರ ಅಂಗಡಿಗಳಿಂದ ತಂದ ಬಡವರನ್ನ ಕೆಳಹಂತದ ದಂಧೆಕೋರರು ಗುರುತಿಸುತ್ತಾರೆ. ಅಲ್ಲಿಂದ ಅತಿ ಕಡಿಮೆ ಬೆಲೆಗೆ ಅಕ್ಕಿಯನ್ನ ಖರೀದಿಸಿ ಎರಡನೇ ಹಂತದ ದಂಧೆಕೋರರಿಗೆ ಒಂದಿಷ್ಟು ಹೆಚ್ಚಿನ ಹಣಕ್ಕೆ ಮಾರಾಟ ಮಾಡಿಕೊಳ್ತಾರೆ. ಅಲ್ಲಿ ಸಂಗ್ರಹವಾಗುವ ಪಡಿತರ ಅಕ್ಕಿ ಇನ್ನೊಂದು ಹಂತದ ಖದೀಮರ ಗೋಡೌನ್‌ಗಳನ್ನ ಸೇರುತ್ವೆ. ಅಲ್ಲಿ ಕ್ವಿಂಟಾಲ್, ಟನ್ ಪ್ರಮಾಣದ ಅಕ್ಕಿ ಲಾರಿಗಳ ಮೂಲಕ ಹೊರ ರಾಜ್ಯವನ್ನ ಸೇರುತ್ತೆ. ಅದ್ರಲ್ಲು ವಿಜಯಪುರದಲ್ಲಿ ದಂಧೆ ನಡೆಸುವ ಖದೀಮರು ಹತ್ತಿರದ ಮಹಾರಾಷ್ಟ್ರಕ್ಕೆ ಕಳುಹಿಸಿಕೊಡ್ತಾರೆ.
ಮಹಾರಾಷ್ಟ್ರದಲ್ಲಿ ನಮ್ಮ ಪಡಿತರ ಅಕ್ಕಿ ಪಾಲೀಶ್..!
ನಮ್ಮ ರಾಜ್ಯದಲ್ಲಿ ಅಕ್ರಮ ದಂಧೆಯ ಮೂಲಕ ಸಂಗ್ರವಾಗುವ ಅಕ್ಕಿ ಮಹಾರಾಷ್ಟ್ರಕ್ಕೆ ತಲುಪಿದ ಮೇಲೆ ಅಲ್ಲಿ ಚೆನ್ನಾಗಿ ಪಾಲೀಶ್ ಆಗುತ್ತೆ. ಪಾಲೀಶ್ ಆದ ಇದೆ ಪಡಿತರ ಅಕ್ಕಿ ವಾಪಾಸ್ ಪ್ಯಾಕಿಂಗ್ ಆಗಿ ನಮ್ಮ ರಾಜ್ಯಕ್ಕೆ ಮಾರಾಟವಾಗಲು ಬರುತ್ತೆ. ಬಡವರಿಂದ 10 ರೂಪಾಯಿಗೆ ಖರೀದಿಯಾಗೋ ಪಡಿತರ ಅಕ್ಕಿ ಪಾಲೀಶ್ ಆಗಿ 60 ರಿಂದ 70 ರುಪಾಯಿಗೆ ಕೆ.ಜಿ ಯಂತೆ ಮಾರಾಟವಾಗಲು ನಮ್ಮ ರಾಜ್ಯಕ್ಕೆ ಬರುತ್ತೆ.. ಈ ನಡುವೆ ಕೋಟ್ಯಾಂತರ ರು. ವ್ಯವಹಾರವೇ ನಡೆದು ಹೋಗುತ್ತೆ. ಈ ದಂಧೆ ಸಾಂಗವಾಗಿ ಸಾಗಲು ಕೆಲ ಅಧಿಕಾರಿಗಳಿಗೆ ಮಾಮೂಲು ಹೋಗುತ್ತೆ ಅನ್ನೋ ಮಾಹಿತಿಗಳು ಇವೆ..
ಪಡಿತರ ಅಕ್ಕಿ ಮಾರಾಟ-ಖರೀದಿ ಅಪರಾಧ..!
ಸರ್ಕಾರವು ಪಡಿತರ ಚೀಟಿದಾರರಿಗೆ ನೀಡಲಾಗುವ ಅಕ್ಕಿಯನ್ನು ಮಾರಾಟ ಮಾಡುವುದು ಅಪರಾಧವಾಗಿದ್ದು, ಅಂತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್ ಪಡಿತರ ಚೀಟಿದಾರರು ತಮಗೆ ಸರಕಾರ ನೀಡುವ ಉಚಿತ ಅಕ್ಕಿಯನ್ನು ಬೇರೆ ಯಾರಿಗೂ ಕಾಳಸಂತೆಯಲ್ಲಿ ಮಾರಾಟ ಮಾಡದೆ ಸ್ವಂತಕ್ಕೆ ಮಾತ್ರ ಉಪಯೋಗಿಸಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಪಡಿತರ ಕಳ್ಳದಂಧೆಗೆ ಬೀಳುತ್ತಾ ಬ್ರೇಕ್.?!
ಜಿಲ್ಲಾಧಿಕಾರಿಗಳು ಎಷ್ಟೇ ಹೇಳಿದ್ರು ವಿಜಯಪುರ ಜಿಲ್ಲೆಯಲ್ಲಿ ನಡೆಯುತ್ತಿರೋ ಅಕ್ಕಿ ಕಳ್ಳದಂಧೆಗೆ ಬ್ರೇಕ್ ಬೀಳುವ ಯಾವುದೇ ಲಕ್ಷಣಗಳು ಈವರೆಗೆ ಗೋಚರಿಸುತ್ತಿಲ್ಲ.. ಹಿರಿಯ ಅಧಿಕಾರಿಗಳಿಗೆ ಅನುಮಾನ ಬಾರದಿರುವಂತೆ ಕೆಳ ಹಂತದ ಅಧಿಕಾರಿಗಳು ಕೆಲಬಾರಿ ಮಾಹಿತಿಗಳನ್ನ ನೀಡಿದಂತೆ ಮಾಡಿ, ರೇಡ್ ನಾಟಕಗಳನ್ನ ಮಾಡ್ತಾರೆ. ಹೀಗಾಗಿ ಸಂಪೂರ್ಣವಾಗಿ ದಂಧೆಗೆ ಬ್ರೇಕ್ ಬೀಳ್ತಿಲ್ಲ.. ಈ ಅಕ್ಕಿ ಕಳ್ಳದಂಧೆ ವಿಜಯಪುರ ಜಿಲ್ಲೆಯಿಂದ ಹತ್ತಿರದ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಿಗು ನಂಟು ಬೆಸೆದುಕೊಂಡಿದೆ.. ವಿಜಯಪುರ ಜಿಲ್ಲೆಯ ಗಡಿ ತಾಲೂಕುಗಳಲ್ಲಿ ಸಂಗ್ರಹವಾಗೋ ಅಕ್ಕಿಯು ಅಕ್ರಮವಾಗಿ ಮಹಾರಾಷ್ಟ್ರ ಸೇರಿರ್ತಿದೆ. ಅಧಿಕಾರಿಗಳು ಆಗೊಂದು ಈಗೊಂದು ರೇಡ್ ಮಾಡಿ ಸುಮ್ಮನಾಗ್ತಾರೇ ಅಷ್ಟೇ.. ದಂಧೆಯನ್ನ ಬುಡ ಸಮೇತ ಕೀಳಲು ಪ್ರಯತ್ನಿಸುತ್ತಿಲ್ಲ ಅನ್ನೋದು ಸಾರ್ವಜನಿಕರ ಆರೋಪವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ