ಡ್ರಗ್‌ ದಂಧೆ: ರಾಗಿಣಿ, ಸಂಜನಾ ಸೇರಿ 6 ಮಂದಿಗೆ ಬೇಲ್‌ ಇಲ್ಲ

By Kannadaprabha NewsFirst Published Sep 12, 2020, 9:59 AM IST
Highlights

ನೇರವಾಗಿ ಇಬ್ಬರು ಆಫ್ರಿಕನ್‌ ಪೆಡ್ಲರ್‌ಗಳಿಂದ ಡ್ರಗ್ಸ್‌ ಖರೀದಿ|ಪ್ಲೀಸ್‌ ಸೆಂಡ್‌ ಮಿ ಒನ್‌ ಮೋರ್‌ ಗ್ರಾಂ..’ ಎಂಬಂಥ ಹಲವು ಸಂದೇಶಗಳು ವಾಟ್ಸ್‌ಆಪ್‌ ಮೂಲಕ ಪೆಡ್ಲರ್‌ಗಳು ಮತ್ತು ರಾಗಿಣಿ ಮಧ್ಯೆ ವಿನಿಮಯ| ರಾಗಿಣಿ ಸಂಪರ್ಕದಲ್ಲಿ ಮತ್ತಿಬ್ಬರ ಪತ್ತೆಗೆ ತನಿಖೆ| 

ಬೆಂಗಳೂರು(ಸೆ.12): ಡ್ರಗ್‌ ದಂಧೆ ಆರೋಪದಲ್ಲಿ ಸಿಲುಕಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ ಗಲ್ರಾಣಿ ಸೇರಿದಂತೆ ಆರು ಮಂದಿಯನ್ನು ಹೆಚ್ಚಿನ ವಿಚಾರಣೆಗಾಗಿ ಮತ್ತೆ ಮೂರು ದಿನಗಳ ಕಾಲ (ಸೆ.14) ಸಿಸಿಬಿ ವಶಕ್ಕೆ ನೀಡಿ ಒಂದನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ಈ ಆದೇಶದಿಂದ ಇಬ್ಬರೂ ನಟಿಯರು ಸೋಮವಾರದವರೆಗೂ ಮಹಿಳೆಯರ ಸಾಂತ್ವನ ಕೇಂದ್ರದಲ್ಲಿ ನೆಲೆಸಲಿದ್ದು, ಸಿಸಿಬಿ ಅಧಿಕಾರಿಗಳಿಂದ ವಿಚಾರಣೆ ಎದುರಿಸಬೇಕಾಗಿದೆ.

"

ಪ್ರಕರಣದ ಎರಡನೇ ಆರೋಪಿಯಾಗಿರುವ ರಾಗಿಣಿ ಅವರನ್ನು ವಿಚಾರಣೆಗಾಗಿ ಸಿಸಿಬಿ ವಶಕ್ಕೆ ಪಡೆದಿದ್ದ ಅವಧಿ ಶುಕ್ರವಾರಕ್ಕೆ, 14ನೇ ಆರೋಪಿಯಾಗಿರುವ ಸಂಜನಾ ಅವರ ಅವಧಿ ಶನಿವಾರಕ್ಕೆ ಅಂತ್ಯವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಈ ಇಬ್ಬರ ಜೊತೆಗೆ ಇತರೆ ಆರೋಪಿಗಳಾದ ಪ್ರಶಾಂತ ರಂಕಾ, ಲೂಮ್‌ ಪೆಪ್ಪರ್‌, ರಾಹುಲ್‌ ತೋನ್ಸಿ, ನಿಯಾಜ್‌ರನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಧಿಶರ ಮುಂದೆ ಹಾಜರುಪಡಿಸಿದ್ದರು. ಆರೋಪಿಗಳ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರು ಹೆಚ್ಚಿನ ವಿಚಾರಣೆಗಾಗಿ ಎಲ್ಲ ಆರೋಪಿಗಳನ್ನು ಸಿಸಿಬಿ ವಶಕ್ಕೆ ನೀಡಿ ವಿಚಾರಣೆ ಮುಂದೂಡಿದರು.

ವಿಚಾರಣೆ ವೇಳೆ ರಾಗಿಣಿ ಮತ್ತು ಸಂಜನಾ ಗಲ್ರಾಣಿ ಪರ ವಕೀಲರು ಪ್ರತ್ಯೇಕವಾಗಿ ವಾದ ಮಂಡಿಸಿ, ಪ್ರಕರಣದ ಇತರೆ ಆರೋಪಿಗಳ ಹೇಳಿಕೆಗಳನ್ನು ಆಧರಿಸಿ ಅರ್ಜಿದಾರರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರು ಮಾದಕ ವಸ್ತುಗಳು ಮಾರಾಟ ದಂಧೆಯಲ್ಲಿ ಭಾಗಿಯಾಗಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಬಂಧಿತರಿಂದ ಮಾದಕ ವಸ್ತುಗಳನ್ನು ವಶಕ್ಕೂ ಪಡೆದಿಲ್ಲ. ಯಾವ ಕಾರಣಕ್ಕಾಗಿ ಬಂಧಿಸಲಾಗಿದೆ ಎಂಬುದಕ್ಕೆ ತನಿಖಾಧಿಕಾರಿಗಳ ಬಳಿ ಸ್ಪಷ್ಟಉತ್ತರವಿಲ್ಲ. ಪ್ರಕರಣಕ್ಕೂ ಅರ್ಜಿದಾರರಿಗೂ ಯಾವುದೇ ಸಂಬಂಧವಿಲ್ಲ ಎಂದು ವಾದ ಮಂಡಿಸಿದರು.

ಕೇವಲ ನಟಿಯರು ಅರೆಸ್ಟ್: ಪ್ರಕರಣದ A1 ಆರೋಪಿಯೇ ಇನ್ನೂ ಬಂಧನವಾಗಿಲ್ಲ..!

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಾಸಿಕ್ಯೂಷನ್‌ ಪರ ವಕೀಲರು, ಅರ್ಜಿದಾರರು ಮಾದಕ ವಸ್ತುಗಳ ದಂದೆಯಲ್ಲಿ ಭಾಗಿಯಾಗಿರುವ ಸಂಬಂಧ ಮಾಹಿತಿ ಇದೆ. ಈ ಬಗ್ಗೆ ಸಾಕ್ಷ್ಯಗಳನ್ನು ಕಲೆಹಾಕಬೇಕಾಗಿದೆ. ಆದರೆ, ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ. ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ನಡೆಸಬೇಕಾದ ಅಗತ್ಯವಿದೆ. ಆದ್ದರಿಂದ ಐದು ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ನೀಡಬೇಕು ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.

ವಾದ-ಪ್ರತಿ ವಾದ ಆಲಿಸಿದ ನ್ಯಾಯಾಧೀಶರು, ಎಲ್ಲ ಆರೋಪಿಗಳನ್ನು ಮೂರು ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ನೀಡಿ ವಿಚಾರಣೆ ಮುಂದೂಡಿದ್ದಾರೆ. ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಲ್ಲಿ ಸೆ.4ಕ್ಕೆ ರಾಗಿಣಿ ಮತ್ತು ಸೆ.8ಕ್ಕೆ ಸಂಜನಾ ಗಲ್ರಾಣಿಯವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.

ನಟಿ ರಾಗಿಣಿಗೆ ಆಫ್ರಿಕನ್‌ ಡ್ರಗ್‌ ಪೆಡ್ಲರ್‌ಗಳ ಸಂಪರ್ಕ

ಮಾದಕ ವಸ್ತು ಖರೀದಿಗೆ ಆಫ್ರಿಕಾ ಮೂಲದ ಇಬ್ಬರು ಪೆಡ್ಲರ್‌ಗಳ ಜತೆ ನಟಿ ರಾಗಿಣಿ ನೇರ ಸಂಪರ್ಕದಲ್ಲಿದ್ದು, ತನ್ನ ಮನೆಗೆ ಆಕೆ ಡ್ರಗ್ಸ್‌ ತರಿಸಿಕೊಂಡಿದ್ದಾಳೆ ಎಂದು ಸಿಸಿಬಿ ಮೂಲಗಳು ಹೇಳಿವೆ. ಆಫ್ರಿಕಾ ದೇಶದ ಪೆಡ್ಲರ್‌ಗಳ ಜತೆ ರಾಗಿಣಿ ನಡೆಸಿದ್ದ ವಾಟ್ಸ್‌ಆಪ್‌ ಸಂದೇಶಗಳು ಲಭಿಸಿವೆ. ಅಲ್ಲದೆ, ಆಕೆಯ ಸಂಪರ್ಕದಲ್ಲಿದ್ದ ಸೈಮನ್‌ ಎಂಬಾತನ ಮನೆಯಲ್ಲಿ ಎಂಡಿಎಂಎ ಡ್ರಗ್ಸ್‌ ಪತ್ತೆಯಾಗಿದೆ. ತಾವು ತಪ್ಪು ಮಾಡಿಲ್ಲವೆಂದರೆ ಪೆಡ್ಲರ್‌ಗಳ ಜೊತೆ ನಟಿಯ ಸ್ನೇಹ ಏನು ಹೇಳುತ್ತದೆ ಎಂದು ಸಿಸಿಬಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ಡೋಪ್ ಟೆಸ್ಟ್ ಬೇಡ್, ನಾನ್ ವೆಜ್ ಬೇಕು; ಸಂಜನಾ ಹೈಡ್ರಾಮಾ!

ಪೇಜ್‌ ತ್ರಿ ಪಾರ್ಟಿಗಳಲ್ಲದೆ ರಾಗಿಣಿ, ಖಾಸಗಿಯಾಗಿ ಕೂಡಾ ಡ್ರಗ್ಸ್‌ ಸೇವಿಸುತ್ತಿದ್ದಳು. ಆಕೆಗೆ ಸಾರಿಗೆ ಇಲಾಖೆ ಉದ್ಯೋಗಿ, ಸ್ನೇಹಿತ ರವಿಶಂಕರ್‌ ನಿಯಮಿತ ಡ್ರಗ್ಸ್‌ ಪೂರೈಸುತ್ತಿದ್ದ. ಈ ವಿಚಾರವನ್ನು ವಿಚಾರಣೆ ವೇಳೆ ರವಿಶಂಕರ್‌ ಒಪ್ಪಿಕೊಂಡಿದ್ದಾನೆ. ರವಿಶಂಕರ್‌ ಮಾತ್ರವಲ್ಲದೆ ಕೆಲವು ಬಾರಿ ರಾಗಿಣಿ, ತಾನಾಗಿಯೇ ಅಫ್ರಿಕಾ ಪೆಡ್ಲರ್‌ಗಳಿಗೆ ಸಂದೇಶ ಕಳುಹಿಸಿ ಡ್ರಗ್ಸ್‌ ಖರೀದಿಸಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಪ್ಲೀಸ್‌ ಸೆಂಡ್‌ ಮಿ ಒನ್‌ ಮೋರ್‌ ಗ್ರಾಂ..’ ಎಂಬಂಥ ಹಲವು ಸಂದೇಶಗಳು ವಾಟ್ಸ್‌ಆಪ್‌ ಮೂಲಕ ಪೆಡ್ಲರ್‌ಗಳು ಮತ್ತು ರಾಗಿಣಿ ಮಧ್ಯೆ ವಿನಿಮಯವಾಗಿವೆ. ತಮ್ಮ ಸ್ನೇಹಿತ ರವಿಶಂಕರ್‌ ಬಂಧನ ಬಳಿಕ ರಾಗಿಣಿ, ತನ್ನ ವಾಟ್ಸ್‌ಆಪ್‌ ಚಾಟಿಂಗ್‌ ಡಿಲೀಟ್‌ ಮಾಡಿದ್ದಳು. ಅವುಗಳನ್ನು ಮತ್ತೆ ಸಂಗ್ರಹಿಸಲಾಗಿದೆ. ಈ ಪ್ರಕರಣದಲ್ಲಿ ಪಾರ್ಟಿಗಳಿಗೆ ಡ್ರಗ್ಸ್‌ ಪೂರೈಸುತ್ತಿದ್ದ ಅಫ್ರಿಕಾದ ಲೂಮ್‌ ಪೆಪ್ಪರ್‌ ಸಾಂಬಾನನ್ನು ಬಂಧಿಸಲಾಗಿದೆ. ರಾಗಿಣಿ ಸಂಪರ್ಕದಲ್ಲಿ ಮತ್ತಿಬ್ಬರ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!