ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ಮುಗಿಸಿ ತೆರಳುವಾಗ ನಿಡಸೋಸಿ ಮಠದ ಸ್ವಾಮೀಜಿ ಕಾರು ಅಪಘಾತ

By Manjunath Nayak  |  First Published Jul 6, 2022, 7:34 PM IST

Hubli News: ವಾಸ್ತುತಜ್ಞ ಚಂದ್ರಶೇಖರ್‌ ಗುರೂಜಿ ಅಂತ್ಯಕ್ರಿಯೆ ಮುಗಿಸಿ ತೆರಳುವಾಗ ನಿಡಸೋಸಿ ಮಠದ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. 


ಹುಬ್ಬಳ್ಳಿ (ಜು. 06): ವಾಸ್ತುತಜ್ಞ ಚಂದ್ರಶೇಖರ್‌ ಗುರೂಜಿ (Chandrashekhar Guruji) ಅಂತ್ಯಕ್ರಿಯೆ ಮುಗಿಸಿ ತೆರಳುವಾಗ ನಿಡಸೋಸಿ ಮಠದ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಧಾರವಾಡದ ತೆಗೂರು ಬಳಿ ರಾಷ್ಟ್ರೀಯ ಹೆದ್ದಾರಿ ಬಳಿ ಅಪಘಾತವಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ‌ಕಾರು ಪಲ್ಟಿಯಾಗಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನಿಡಸೋಸಿ ಮಠದ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಜಿಗಳಿಗೆ (Shree Shivalingeshwara Swamiji) ಗಾಯಗಳಾಗಿವೆ. ಅದೃಷ್ಟವಶಾತ್ ಶ್ರೀಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಭಕ್ತರು ಆತಂಕ ಪಡುವ ಅವಶ್ಯಕತೆ ಇಲ್ಲ:   ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ  ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ದಾಖಲಾಗಿದ್ದಾರೆ.  ಇನ್ನು ಈ ಬೆನ್ನಲ್ಲೇ ಆಸ್ಪತ್ರೆಯಿಂದಲೇ  ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. "ಭಕ್ತರು ಆತಂಕ ಪಡುವ ಅವಶ್ಯಕತೆ ಇಲ್ಲ, ಕಾರು ಅಪಘಾತ ಆದರೂ ಕಾರಿನಲ್ಲಿದ್ದ ಐವರಿಗೆ ಯಾವುದೇ ಹೆಚ್ಚಿನ ತೊಂದರೆ ಆಗಿಲ್ಲ, ಕಾರಿನಲ್ಲಿದ್ದ ಎಲ್ಲರೂ ಅರಾಮಾಗಿದ್ದೇವೆ ಯಾರೂ ಚಿಂತಿಸಬೇಡಿʼ ಎಂದಿದ್ದಾರೆ. 

Tap to resize

Latest Videos

ಇನ್ನು ಕಾರು ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿರುವ ನಿಡಸೋಸಿ ಶ್ರೀಗಳಿಗೆ ಕರೆ ಮಾಡಿ  ಫೋನ್ ಮೂಲಕ ಮಾಜಿ ಸಂಸದ ರಮೇಶ್ ಕತ್ತಿ ಆರೋಗ್ಯ  ವಿಚಾರಿಸಿದ್ದಾರೆ.  

ಚಂದ್ರಶೇಖರ್‌ ಗುರೂಜಿ ಅಂತ್ಯಕ್ರಿಯೆ: ಆಪ್ತರಿಂದಲೇ ಭೀಕರವಾಗಿ ಹತ್ಯೆಗೀಡಾದ ವಾಸ್ತು ತಜ್ಞ ಚಂದ್ರಶೇಖರ್‌ ಗುರೂಜಿ (Chandrashekhar Guruji) ಅವರ ಅಂತ್ಯ ಸಂಸ್ಕಾರ ಹುಬ್ಬಳ್ಳಿಯ ಸುಳ್ಳ (Sulla) ಗ್ರಾಮದಲ್ಲಿ ನೆರವೇರಿದೆ. ಈ ವೇಳೆ ಅವರ ಪತ್ನಿ ಅಂಕಿತಾ, ಮಗಳು ಸ್ವಾತಿ ಹಾಗೂ ಸರಳ ವಾಸ್ತು ಸಂಸ್ಥೆಯ ಉದ್ಯೋಗಿಗಳ ಅಕ್ರಂದನ ಮುಗಿಲು ಮುಟ್ಟಿತ್ತು.

ವೀರಶೈವ ಲಿಂಗಾಯತ ವಿಧಿವಿಧಾನದ ಪ್ರಕಾರ ಅಂತ್ಯಕ್ರಿಯೆ ನೆರವೇರಿದ್ದು, ಈ ವೇಳೆ ನೂರಾರು ಉದ್ಯೋಗಿಗಳು ಕಣ್ಣೀರಿಟ್ಟರು. 8 ಸ್ವಾಮೀಜಿಗಳು ಅಂತ್ಯಕ್ರಿಯೆಯನ್ನು ನಡೆಸಿಕೊಟ್ಟರು. ಗುರೂಜಿಯ ಅಂತ್ಯಕ್ರಿಯೆಯಲ್ಲಿ ಹಿಂದೂ ಮುಖಂಡ ಪ್ರಮೋದ್‌ ಮುತಾಲಿಕ್‌, ನಿಡುಮಾಮಿಡಿ ಶ್ರೀಗಳು ಭಾಗಿಯಾಗಿದ್ದರು.

ಇದನ್ನೂ ಓದಿಚಂದ್ರಶೇಖರ ಗುರೂಜಿ ಕೊಲೆಯ ಹಿಂದಿನ ಇನ್‌ಸೈಡ್ ಸ್ಟೋರಿ..!

ಸರಳವಾಸ್ತುವಿನಿಂದ ದೇಶವಿದೇಶಗಳಲ್ಲಿ ಖ್ಯಾತರಾಗಿದ್ದ ವಾಸ್ತುತಜ್ಞ ಚಂದ್ರಶೇಖರ್‌ ಗುರೂಜಿ (57) ಅವರನ್ನು ಅವರ ಆಪ್ತರೇ ಮಂಗಳವಾರ ಹಾಡಹಗಲೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿತ್ತು.

ಉಣಕಲ್‌ ಕೆರೆ ಬಳಿಯ ಪ್ರೆಸಿಡೆಂಟ್‌ ಹೋಟೆಲ್‌ನ ರಿಸೆಪ್ಶನ್‌ನಲ್ಲಿ ಹತ್ತಾರು ಮಂದಿಯ ಮುಂದೆಯೇ ನಡೆದ ಈ ಭೀಕರ ಕೊಲೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲ್ಪಟ್ಟಿದ್ದು ಕೆಲ ಕ್ಷಣಗಳಲ್ಲೇ ವೈರಲ್‌ ಆಗಿ ಛೋಟಾ ಮುಂಬೈ ಎಂದೇ ಖ್ಯಾತವಾಗಿರುವ ವಾಣಿಜ್ಯ ನಗರಿ ಹುಬ್ಬಳ್ಳಿ ಮಾತ್ರವಲ್ಲದೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

click me!