Suspected Terrorist Detained: ರಾಜ್ಯ ಇಂಟಲಿಜೆನ್ಸ್, ಎನ್‌ಐಎ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ಭಟ್ಕಳ , ತುಮಕೂರು ಮತ್ತು ಬೆಳಗಾವಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ
ಬೆಂಗಳೂರು (ಜು. 31): ರಾಜ್ಯದಲ್ಲಿ ಮೂರು ಕಡೆ ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ (NIA) ವಶಕ್ಕೆ ಪಡೆದಿದೆ. ಮೂರು ಜಿಲ್ಲೆಗಳಲ್ಲಿ ತನಿಖಾ ಸಂಸ್ಥೆಗಳು ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದೆ. ರಾಜ್ಯ ಇಂಟಲಿಜೆನ್ಸ್, ಎನ್‌ಐಎ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಭಟ್ಕಳ, ತುಮಕೂರು ಮತ್ತು ಬೆಳಗಾವಿಯಲ್ಲಿ ತನಿಖಾ ಸಂಸ್ಥೆಗಳು ಕಾರ್ಯಾಚರಣೆ ನಡೆಸಿವೆ. ಮೂರು ಕಡೆ ಮೂರು ಶಂಕಿತ ಉಗ್ರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಶಂಕಿತ ಉಗ್ರ ಯಾವ ಯಾವ ಸಂಘಟನೆಗೆ ಸೇರಿದ್ದವರು ಎಂದು ತನಿಖಾ ಸಂಸ್ಥೆಗಳು ಪರೀಶಿಲನೆ ನಡೆಸುತ್ತಿವೆ.
ಇಂದು ಬೆಳಗ್ಗೆ ಏಕ ಕಾಲಕ್ಕೆ ಕಾರ್ಯಾಚರಣೆ ನಡೆದಿದ್ದು, ಸದ್ಯ ಇನ್ನು ಪರಿಶೀಲನೆ ಕಾರ್ಯ ಮುಂದುವರೆದಿದೆ. ಇನ್ನು ಕರ್ನಾಟಕ ಮಾತ್ರವಲ್ಲದೇ ಎನ್‌ಐಎ 6 ರಾಜ್ಯಗಳಲ್ಲಿ ಶಂಕಿತರ 13 ಸ್ಥಳಗಳಲ್ಲಿ ಶೋಧ ನಡೆಸಿದೆ. ಮಧ್ಯಪ್ರದೇಶದ ಭೋಪಾಲ್ ಮತ್ತು ರೈಸನ್ , ಗುಜರಾತ್‌ನ ಭರೂಚ್, ಸೂರತ್, ನವಸಾರಿ ಮತ್ತು ಅಹಮದಾಬಾದ್ , ಬಿಹಾರದ ಅರಾರಿಯಾ ಜಿಲ್ಲೆಗಳಲ್ಲಿ ಎನ್‌ಐಎ ದಾಳಿ ಮಾಡಿದೆ.
ಇನ್ನು ಕರ್ನಾಟಕದ ಭಟ್ಕಳ ಮತ್ತು ತುಮಕೂರು, ಮಹಾರಾಷ್ಟ್ರದ ಕೊಲ್ಲಾಪುರ ಮತ್ತು ನಾಂದೇಡ್ ಜಿಲ್ಲೆಗಳು ಮತ್ತು ಉತ್ತರ ಪ್ರದೇಶದ ದೇವಬಂದ್ ಜಿಲ್ಲೆಗಳಲ್ಲಿ ಐಸಿಸ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿವೆ.
ಉಗ್ರರ ಟಾರ್ಗೆಟ್ ಲಿಸ್ಟ್‌ನಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು, ಭದ್ರತಾ ಸಂಸ್ಥೆಯಿಂದ ಅಲರ್ಟ್
ಪ್ರಕರಣವನ್ನು ಎನ್ಐಎ ಐಪಿಸಿಯ ಸೆಕ್ಷನ್ 153 ಎ, ಮತ್ತು 153 ಬಿ ಮತ್ತು ಯುಎ (ಪಿ) ಕಾಯ್ದೆಯ ಸೆಕ್ಷನ್ 18, 18 ಬಿ, 38, 39 ಮತ್ತು 40 ರ ಅನ್ವಯ ಸು-ಮೋಟೋ ದಾಖಲಿಸಿದೆ.ದಾಳಿ ವೇಳೆ ಎನ್‌ಐಎ ಹಲವು ದಾಖಲೆಗಳು/ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣದಲ್ಲಿ ಹೆಚ್ಚಿನ ತನಿಖೆಗಳು ಪ್ರಗತಿಯಲ್ಲಿದೆ.
ತುಮಕೂರಿನ ಮರಳೂರು ದಿಣ್ಣೆ ನಿವಾಸಿ ವಶಕ್ಕೆ: ಇನ್ನು ತುಮಕೂರಿನಲ್ಲಿ ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳು ಶಂಕಿತ ಉಗ್ರನನ್ನು ವಶಕ್ಕೆ ಪಡೆದಿದ್ದಾರೆ. ಐಸಿಎಸ್ ಉಗ್ರ ಸಂಘನೆ ಜೊತೆಗೆ ನಂಟಿನ ಆರೋಪದ ಮೇಲೆ ಎನ್‌ಐಎ ದಾಳಿ ಮಾಡಿದೆ ಎನ್ನಲಾಗಿದೆ. ತುಮಕೂರಿನ ಮರಳೂರು ದಿಣ್ಣೆ ಮೂಲದ ನಿವಾಸಿಯನ್ನು ತನಿಖಾ ಸಂಸ್ಥೆ ವಶಕ್ಕೆ ಪಡೆದಿದೆ. ದೆಹಲಿ, ಬೆಂಗಳೂರು ಮೂಲದ ಎನ್ಐಎ ಅಧಿಕಾರಿಗಳ ತಂಡದಿಂದ ದಾಳಿ ನಡೆಸಿದ್ದು ಬಂಧಿತನನ್ನು ವಿದ್ಯಾರ್ಥಿ ಎನ್ನಲಾಗುತ್ತಿದೆ.
ಬಂಧಿತ ಮಹಾರಾಷ್ಟ್ರ ಮೂಲದ ನಿವಾಸಿ ಎಂದು ಮೂಲಗಳು ತಿಳಿಸಿದ್ದು, ಆತ ಮರಳೂರುದಿನ್ನೆಯಲ್ಲಿ ವಾಸವಿದ್ದ ಎನ್ನಲಾಗುತ್ತಿದೆ. ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ಎನ್‌ಐಎ ತನಿಖೆ ಮುಂದುವರಿಸಿದೆ. ಬಂಧಿತ ವಿದ್ಯಾರ್ಥಿ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.
ಬೆಂಗಳೂರು ಪೊಲೀಸರಿಂದ ಮೊನ್ನೆ ಇಬ್ಬರ ಬಂಧನ: ಅಲ್‌ಖೈದಾ ಸಂಘಟನೆ ಸೇರ್ಪಡೆಗೆ ಅಪ್ಘಾನಿಸ್ತಾನಕ್ಕೆ ತೆರಳಲು ಸಜ್ಜಾಗಿದ್ದರು ಎಂಬ ಮಾಹಿತಿ ಮೇರೆಗೆ ಬೆಂಗಳೂರಿನ ತಿಲಕನಗರ ಸಮೀಪ ನೆಲೆಸಿದ್ದ ಅಸ್ಸಾಂ ಮೂಲದ ಅಖ್ತರ್ ಹುಸೇನ್ ಲಷ್ಕರ್ ಹಾಗೂ ತಮಿಳುನಾಡಿನ ಸೇಲಂನಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ಅಬ್ದುಲ್ ಮಂಡಲ್ ಅಲಿಯಾಸ್ ಜುಬಾನನ್ನು ಕಾರ್ಯಾಚರಣೆ ನಡೆಸಿ ಸಿಸಿಬಿ ಬಂಧಿಸಿತ್ತು.
ಇಂಡಿಯಾ ವಿಷನ್ 2047, ಇಸ್ಲಾಮಿಕ್ ಆಳ್ವಿಕೆ ಕಡೆಗೆ ಭಾರತ: ಪಿಎಫ್ಐ ಮಹಾ ಷಡ್ಯಂತ್ರ ಬಯಲು
ಈ ಇಬ್ಬರು ಶಂಕಿತ ಉಗ್ರರ ಬಂಧನ ಸಂಬಂಧ ತನಿಖೆ ವಿಚಾರವಾಗಿ ಎನ್‌ಐಎಗೆ ಮಂಗಳವಾರ ಬೆಂಗಳೂರು ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಪತ್ರ ಬರೆದಿದ್ದಾರೆ.ಇನ್ನು ಜಾಗತಿಕ ಮಟ್ಟದ ಅತ್ಯುಗ್ರ ಭಯೋತ್ಪಾದಕ ಸಂಘಟನೆ ಅಲ್‌ಖೈದಾಕ್ಕೆ ದೇಶದಲ್ಲಿ ನಡೆದಿದೆ ಎನ್ನಲಾಗುತ್ತಿರುವ ನೇಮಕಾತಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ), ಈಗ ಸಿಸಿಬಿ ಸೆರೆ ಹಿಡಿದಿರುವ ಇಬ್ಬರು ಶಂಕಿತ ಅಲ್‌ಖೈದಾ ಉಗ್ರರ ಬಂಧನ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳಲಿದೆ ಎಂದು ತಿಳಿದು ಬಂದಿದೆ.