ಕರಾವಳಿಯಲ್ಲಿ ಸಂಭವಿಸಿದ ಸರಣಿ ಹತ್ಯೆಗಳ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳ ಕುರಿತು ಆಕ್ರೋಶ ಕೇಳಿ ಬಂದ ಹಿನ್ನೆಲೆಯಲ್ಲಿ ಅವುಗಳಿಗೆ ಮೂಗುದಾರ ಹಾಕಲು ಗಂಭೀರ ಚಿಂತನೆ ನಡೆಸಲಾಗುವುದು ಎಂದು ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಮಂಗಳೂರು (ಜು.31): ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಬಿತ್ತರಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಶಾಂತಿ ಸಮಿತಿ ಸಭೆಯಲ್ಲಿ ಒಕ್ಕೊರಲ ಆಗ್ರಹ ವ್ಯಕ್ತವಾಗಿದೆ. ಇದೇ ವೇಳೆ ಹಿಂದು ಮತ್ತು ಮುಸ್ಲಿಂ ಸಂಘಟನೆಗಳ ಪ್ರಮುಖರು ಶಾಂತಿ ಸಮಿತಿ ಸಭೆಗೆ ಗೈರಾಗಿದ್ದಾರೆ. ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಶಾಂತಿ ಸಮಿತಿ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಸಾಮಾಜಿಕ ಮುಂದಾಳುಗಳು ಪಾಲ್ಗೊಂಡಿದ್ದರು. ದೃಶ್ಯ ಮಾಧ್ಯಮಗಳು ಟಿಆರ್‌ಪಿ ಸಲುವಾಗಿ ಒಂದು ವಿಷಯವನ್ನೇ ಮೇಲಿಂದ ಮೇಲೆ ತೋರಿಸಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿ, ಜಿಲ್ಲೆಯ ಬಗ್ಗೆ ಕೆಟ್ಟಅಭಿಪ್ರಾಯ ಮೂಡಿಸುವಂತೆ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ, ಪ್ರಚೋದನಕಾರಿ ಹೇಳಿಕೆ ನೀಡುವವರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಾಧ್ಯವಾದರೆ ಇಂಟರ್‌ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಬೇಕು ಎಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾಗಿದೆ. ಇತ್ತೀಚೆಗೆ ಹತ್ಯೆಯಾದ ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅದಕ್ಕಿಂದ ಕೆಲವು ದಿನಗಳ ಹಿಂದೆ ಮೃತಪಟ್ಟಮಸೂದ್ ಮಾತ್ರವಲ್ಲದೆ, ಸಿಎಂ ನಗರದಲ್ಲಿರುವಾಗಲೇ ಮೃತ ಪಟ್ಟಫಾಝಿಲ್ ಮನೆಗೂ ಭೇಟಿ ನೀಡಿ ಸಾಂತ್ವಾನ ಹೇಳಬೇಕಾಗಿತ್ತು ಎಂಬ ಅಭಿಪ್ರಾಯವೂ ಸಭೆಯಲ್ಲಿ ಕೇಳಿಬಂದಿದೆ.
ಕೊಲೆಗೀಡಾದ ಸಂತ್ರಸ್ತರ ಕುಟುಂಬಕ್ಕೂ ಸಮಾನ ಪರಿಹಾರ ಒದಗಿಸಬೇಕು. ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಕ್ರಮ ವಹಿಸಬೇಕು. ಮಾಧ್ಯಮದಲ್ಲಿ ಅಪಪ್ರಚಾರ, ಸುಳ್ಳು ಸುದ್ದಿಗಳನ್ನು ನಿಯಂತ್ರಿಸಬೇಕು ಎಂಬ ಸಲಹೆಗಳ ಜತೆಯಲ್ಲೇ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಸಂಘಟನೆಗಳು ಹಾಗೂ ಸಮುದಾಯದ ನಾಯಕರು ಭಾಗವಹಿಸಿಲ್ಲದ ಕಾರಣ ಅವರೆಲ್ಲನರನ್ನೂ ಸೇರಿಸಿ ಮತ್ತೊಂದು ಸಭೆ ನಡೆಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.
ಜಾಲತಾಣಗಳಿಗೆ ಮೂಗುದಾರ: ಸಭೆಯ ಬಳಿಕ ಸುದ್ದಿಗಾರರಲ್ಲಿ ಮಾತನಾಡಿದ ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್, ಸಭೆಯಲ್ಲಿ ವ್ಯಕ್ತವಾದ ಸೂಚನೆಯನ್ನು ಪರಿಗಣಿಸಿ ಅಗತ್ಯ ಕ್ರಮ ವಹಿಸಲಾಗುವುದು. ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಿಗೆ ಮೂಗುದಾರ ಹಾಕಲು ಗಂಭೀರ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಚೋದನಾಕಾರಿ ಭಾಷಣಗಳಿಂದ ಅಶಾಂತಿಗೆ ಕಾರಣವಾಗುತ್ತಿದೆ ಎಂಬುದಾಗಿ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದ ಕುರಿತಂತೆ ಪ್ರತಿಕ್ರಿಯಿಸಿದ ಎಡಿಜಿಪಿ, ಇಂತಹ ಪ್ರಚೋದನಕಾರಿ ಭಾಷಣಗಳ ಕುರಿತಂತೆ ದೂರು ಬಂದಲ್ಲಿ ಹಿಂದೆಯೂ ಕ್ರಮ ವಹಿಸಿದ್ದೇವೆ. ಮುಂದೆಯೂ ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು. ಸಿಆರ್‌ಪಿಸಿ 107ರ ಅಡಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದರ ಉಲ್ಲಂಘನೆ ಕಂಡುಬಂದರೆ ಬಂಧನ ಮಾಡಲಾಗುವುದು. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದರೆ ಸಾಲದು, ಪೊಲೀಸರಿಗೆ ದೂರು ನೀಡಬೇಕು ಎಂದು ಹೇಳಿದರು.
ಜಿಲ್ಲಾದ್ಯಂತ ಶಾಂತಿ ಸಮಿತಿ ಸಭೆ: ಬೀಟ್ ಕಮಿಟಿ, ಮೊಹಲ್ಲಾ ಕಮಿಟಿ ಹಾಗೂ ಠಾಣಾ ಮಟ್ಟದಲ್ಲಿ ಶಾಂತಿ ಸಭೆಗಳನ್ನು ನಡೆಸಬೇಕು. ಶಾಂತಿ ಸಮಿತಿ ಸಭೆಗಳು ನಡೆಯುತ್ತಿದ್ದರೆ ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂಬ ಸಲಹೆ ವ್ಯಕ್ತವಾಗಿದೆ. ನಾವು ಈ ಬಗ್ಗೆ ಅಧಿಕಾರಿಗಳಿಗೆ ಸಭೆಯನ್ನು ಪರಿಣಾಮಕಾರಿಯಾಗಿ ನಡೆಸಲು ಸೂಚನೆ ನೀಡಿದ್ದೇವೆ. ಸೂಕ್ಷ್ಮ ಪ್ರದೇಶಗಳಲ್ಲಿ ಇಂತಹ ಸಭೆಗಳÜನ್ನು ನಡೆಸುವ ಭರವಸೆಯನ್ನೂ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದವರಿಗೆ ನೀಡಲಾಗಿದೆ. ಗಾಂಜಾ ಮತ್ತು ಮದ್ಯ ಸೇವನೆ ಮಾಡಿಕೊಂಡವರಿಂದಲೂ ಇಂತಹ ಪ್ರಕರಣಗಳು ನಡೆಯುತ್ತಿದೆ ಎಂಬ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ಅದರ ಬಗ್ಗೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು. ಕೆಲವೆಡೆ 12 ಗಂಟೆಯವರೆಗೂ ಬಾರ್, ಪಬ್‌ಗಳು ಸೌಂಡ್ ಹಾಕಿಕೊಂಡಿರುವ ಬಗ್ಗೆಯೂ ಚರ್ಚೆಯಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ಸಭೆಯಲ್ಲಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಜಿಲ್ಲಾ ಎಸ್ಪಿ ಋುಷಿಕೇಶ್ ಸೊನಾವಣೆ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಸೇರಿದಂತೆ ಇತರ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
ಮುಸ್ಲಿಮರ ಬಹಿಷ್ಕಾರ, ಹಿಂದೂಗಳ ಗೈರು!
ದ.ಕ. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಬಹುತೇಕ ಹಿಂದೂ ಹಾಗೂ ಮುಸ್ಲಿಂ ಸಮುದಾಯ ಮತ್ತು ಸಂಘಟನೆಗಳ ಪ್ರಮುಖರೇ ಆಗಮಿಸಿರಲಿಲ್ಲ. ಮುಸ್ಲಿಂ ಸಮುದಾಯ ಶಾಂತಿ ಸಮಿತಿ ಸಭೆಯನ್ನು ಬಹಿಷ್ಕರಿಸಿದ್ದರೆ, ಹಿಂದೂ ಸಂಘಟನೆ ಪ್ರಮುಖರಿಗೆ ಆಹ್ವಾನವೇ ಇರಲಿಲ್ಲ ಎಂದು ಆರೋಪಿಸಲಾಗಿದೆ.
ಹತ್ಯೆಗೆ ಒಳಗಾದ ನೆಟ್ಟಾರು ಪ್ರವೀಣ್ ಮನೆಗೆ ತೆರಳಿದ ಸಿಎಂ ಅದಕ್ಕೂ ಮೊದಲು ಹತ್ಯೆಗೊಳಗಾದ ಮಸೂದ್ ಮನೆಗೆ ಹೋಗಿ ಸಾಂತ್ವನ ಹೇಳದೆ ತಾರತಮ್ಯ ಎಸಗಿದ್ದಾರೆ ಎಂಬುದು ಮುಸ್ಲಿಂ ಮುಖಂಡರ ಆಕ್ಷೇಪ. ಈ ಕಾರಣಕ್ಕೆ ಶಾಂತಿ ಸಮಿತಿ ಸಭೆ ಬಹಿಷ್ಕರಿಸಿದ್ದಾಗಿ ಸೆಂಟ್ರಲ್ ಮುಸ್ಲಿಂ ಕಮಿಟಿ ಅಧ್ಯಕ್ಷ ಕೆ.ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದ.ಕ. ಮುಸ್ಲಿಂ ಒಕ್ಕೂಟ ಕೂಡ ಶಾಂತಿ ಸಮಿತಿ ಸಭೆಯಿಂದ ದೂರ ಉಳಿದಿದೆ. ಅಲ್ಲದೆ ಕುದ್ರೋಳಿಯಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ ಮುಖಂಡ ಮಸೂದ್ ನೇತೃತ್ವದಲ್ಲಿ ಖಾಸಗಿಯಾಗಿ ಪ್ರತ್ಯೇಕ ಸಭೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಿಂದೂ ಸಂಘಟನೆಯ ಪ್ರಮುಖರಿಗೆ ಶಾಂತಿ ಸಮಿತಿ ಸಭೆಯ ಆಹ್ವಾನವೇ ಬಂದಿಲ್ಲ ಎನ್ನುತ್ತಾರೆ. ಹಾಗಾಗಿ ನಾವು ಸಭೆಗೆ ಹಾಜರಾಗಿಲ್ಲ. ಜಿಲ್ಲಾಡಳಿತ ಯಾಕೆ ನಮ್ಮ ಸಂಘಟನೆಗಳನ್ನು ಸಭೆಗೆ ಆಹ್ವಾನಿಸಿಲ್ಲ ಎಂದು ಗೊತ್ತಿಲ್ಲ ಎಂದು ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಪ್ರತಿಕ್ರಿಯಿಸಿದ್ದಾರೆ.
ಈ ಸಭೆಗೆ ಮಾಧ್ಯಮ ಪ್ರತಿನಿಧಿಗಳಿಗೂ ಅವಕಾಶ ನಿರಾಕರಿಸಲಾಗಿದೆ. ಸಭೆಯಲ್ಲಿ ಬಿಜೆಪಿ ಹೊರತುಪಡಿಸಿ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಕೆಲವು ಪಕ್ಷಗಳ ಮುಖಂಡರು ಭಾಗವಹಿಸಿದ್ದರು.
ಪ್ರತಿಯಾಗಿ ಕೊಲ್ಲುವುದು ಸರಿಯಲ್ಲ: ಇಸ್ಮಾಯಿಲ್
ನಾವು ಹಿಂದೂ ಮುಸ್ಲಿಂ ಎನ್ನುವ ಬದಲು ಮೊದಲು ಮಾನವರು ಎಂದುಕೊಳ್ಳಬೇಕು. ಆಚಾರ ವಿಚಾರ ಬೇರೆಯಾದರೂ ಇಲ್ಲಿ ನಾವೆಲ್ಲಾ ಒಂದೇ ಎಂಬ ಭಾವನೆ ಬರಬೇಕು. ನಮ್ಮ ಮುಸ್ಲಿಂ ವ್ಯಕ್ತಿಯನ್ನು ಕೊಂದರೆ ಪ್ರತಿಯಾಗಿ ಕೊಲ್ಲುವುದಲ್ಲ ಎಂದು ಎಂದು ಬಂಟ್ವಾಳ ತಾಹಿರಾ ಸಲಫಿ ಮಸೀದಿ ಅಧ್ಯಕ್ಷ ಎಸ್.ಎಂ.ಇಸ್ಮಾಯಿಲ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
ಅಂಥ ವೇಳೆ ಶಿಕ್ಷೆ ಕೊಡಲು ನಮ್ಮಲ್ಲಿ ಕಾನೂನು ಇದೆ, ಕುರಾನ್ ಹೇಳಿದೆ. ಇದರಲ್ಲಿ ಪ್ರತೀ ವರ್ಗವೂ ತಪ್ಪಿತಸ್ಥ, ಅವರವರ ಅನುಕೂಲಕ್ಕೆ ಜನ ಬಲಿಪಶುವಾಗುತ್ತಿದ್ದಾರೆ. ಹಿಂದೂ-ಮುಸ್ಲಿಮರ ಮಧ್ಯೆ ಇರುವವರಿಗೆ ಮತ, ಧರ್ಮ ಇಲ್ಲ. ಈ ಸಭೆಗೆ ಗೈರಾದ ನಮ್ಮ ಮುಖಂಡರಿಗೆ ಅಸಮಾಧಾನ ಇದೆ. ಸಿಎಂ ತಾರತಮ್ಯ ಮಾಡಿದ್ದಾರೆ ಎಂದು ಅವರಿಗೆ ನೋವಿದೆ. ಆದರೆ ನಾನು ಡಿಸಿ ಕರೆದ ಕಾರಣ ಬಂದೆ, ಅವರಿಗೆ ಗೌರವ ಕೊಟ್ಟು ಆಗಮಿಸಿದ್ದೇನೆ. ನಾವು ಹೋಗಿ ನಮ್ಮ ನಿಲುವು ಹೇಳಬೇಕು, ಸುಮ್ಮನೆ ಕೂರುವುದಿಲ್ಲ. ನಮ್ಮ ಮಾತನ್ನು ಯುವಕರು ಕೇಳಲು ಅವರಿಗೆ ಧಾರ್ಮಿಕ ಪ್ರಜ್ಞೆ ಮೂಡಿಸಬೇಕು. ಧರ್ಮ ಎನ್ನುವುದು ಮನುಷ್ಯನನ್ನು ರಕ್ಷಿಸಬೇಕು, ಅದನ್ನು ಮಾಡದವರು ಯಾವುದೇ ಕಾರಣಕ್ಕೂ ಧಾರ್ಮಿಕ ಮುಖಂಡ ಆಗಲು ಸಾಧ್ಯವಿಲ್ಲ. ನನಗೆ ಈ ಸಭೆಯ ಬಗ್ಗೆ ತೃಪ್ತಿ ಇದೆ, ಸಮುದಾಯ ಮಧ್ಯೆ ಸರಿ ಮಾಡಲು ಜಿಲ್ಲಾಡಳಿತ ಯತ್ನಿಸುತ್ತಿದೆ ಎಂದಿದ್ದಾರೆ.
ಯಾವುದೇ ಪ್ರಕರಣದಲ್ಲಿ ಸುಮ್ಮನೆ ಯಾರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಿಸುವುದಾಗಲಿ ಅಥವಾ ಬಂಧಿಸುವುದಾಗಲಿ ಮಾಡುವುದಿಲ್ಲ. ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗುತ್ತಿದೆ ಎಂಬುದನ್ನು ಶಾಂತಿ ಸಮಿತಿ ಸಭೆಯಲ್ಲಿ ಹಲವರಿಂದ ವ್ಯಕ್ತವಾದ ಅನುಮಾನಗಳಿಗೆ ಸ್ಪಷ್ಟಪಡಿಸಲಾಗಿದೆ.-ಅಲೋಕ್ ಕುಮಾರ್, ಎಡಿಜಿಪಿ ಕಾನೂನು ಸುವ್ಯವಸ್ಥೆ ಬೆಂಗಳೂರು
ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಸ್ಥಳೀಯ ಎಲ್ಲ ಜನಪ್ರತಿನಿಧಿಗಳನ್ನು ಒಳಗೊಂಡ ಶಾಂತಿ ಸಭೆ ಮುಂದಿನ ವಾರದಲ್ಲೇ ನಡೆಸಲಾಗುವುದು. ಇದೀಗ ಹಿರಿಯ ಅಧಿಕಾರಿಗಳು ಜಿಲ್ಲೆಯಲ್ಲಿ ಇದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಒಳಗೊಂಡ ಈ ಸಭೆ ನಡೆಸಲಾಗಿದೆ. ಮುಂದೆ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ವರೆಗೆ ಹಂತ ಹಂತವಾಗಿ ಸರಣಿ ಶಾಂತಿ ಸಭೆಗಳನ್ನು ನಡೆಸಲಾಗುವುದು.
-ಡಾ.ರಾಜೇಂದ್ರ, ಜಿಲ್ಲಾಧಿಕಾರಿ, ದ.ಕ.