
ಬೆಂಗಳೂರು(ಅ.09): ‘ಬೆಂಗಳೂರು ಉಗ್ರರ ನೆಲೆವೀಡಾಗುತ್ತದೆ’ ಎಂದು ಕೇಂದ್ರ ಸರ್ಕಾರಕ್ಕೆ ಇತ್ತೀಚೆಗೆ ಸಂಸದ ತೇಜಸ್ವಿ ಸೂರ್ಯ ದೂರು ನೀಡಿದ್ದರು. ಇದರ ಬೆನ್ನಲೇ, ವಿಶ್ವದ ರಕ್ತಪಿಪಾಸು ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ನ (ಐಸಿಸ್) ಇಬ್ಬರು ಪ್ರಮುಖ ನಾಯಕರನ್ನು ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಗುರುವಾರ ಬಂಧಿಸಿದೆ. ಬಂಧಿತರು ಬೆಂಗಳೂರಿನ ಮುಸ್ಲಿಂ ಯುವಕರಿಗೆ ಮೂಲಭೂತವಾದ ಬೋಧಿಸಿ ಸಿರಿಯಾಗೆ ಕಳುಹಿಸುತ್ತಿದ್ದ ಐಸಿಸ್ ಗುಂಪಿಗೆ ಸೇರಿದವರು ಎಂದು ತಿಳಿದುಬಂದಿದೆ.
ಫ್ರೇಜರ್ ಟೌನ್‌ನ ಇರ್ಫಾನ್ ನಾಸೀರ್ (33) ಹಾಗೂ ತಮಿಳುನಾಡು ರಾಮನಾಥಪುರದ ಅಹ್ಮದ್ ಅಬ್ದುಲ್ ಖಾದರ್ (40) ಬಂಧಿತರು. ಆರೋಪಿಗಳಿಗೆ ಸೇರಿದ ಗುರಪ್ಪನಪಾಳ್ಯ ಹಾಗೂ ಫ್ರೇಜನ್ ಟೌನ್‌ಗಳಲ್ಲಿರುವ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಮೊಬೈಲ್ ಹಾಗೂ ಹಾರ್ಡ್ ಡಿಸ್ಕ್ ಸೇರಿದಂತೆ ಕೆಲವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆ ಸಲುವಾಗಿ ಇಬ್ಬರನ್ನು 10 ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ ಎಂದು ಎನ್‌ಐಎ ಹೇಳಿದೆ.
ಕೆಲ ದಿನಗಳ ಹಿಂದೆ ಐಸಿಸ್ ಸಂಘಟನೆಗೆ ಆ್ಯಪ್ ಅಭಿವೃದ್ಧಿಪಡಿಸುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ಸೆರೆಯಾಗಿದ್ದ ಐಸಿಸ್ ಶಂಕಿತ ಉಗ್ರ ಡಾ.ಅಬ್ದುರ್ ರೆಹಮಾನ್ ಅಲಿಯಾಸ್ ‘ಡಾ ಬ್ರೇವ್’ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಎನ್‌ಐಎ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ.
ಬೆಂಗಳೂರಿನಲ್ಲಿ ‘ಐಸಿಸ್ ಉಗ್ರರ ಕ್ಯಾಂಪ್’: ಸ್ಫೋಟಕ ಮಾಹಿತಿ ಬಹಿರಂಗ..!
ಬೆಂಗಳೂರು ಐಸಿಸ್ ಘಟಕವಾದ ‘ಕುರಾನ್ ಸರ್ಕಲ್’ ವಿರುದ್ಧ ಸ್ವಯಂ ಪ್ರೇರೇರಿತವಾಗಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಯಿತು. ವಿಚಾರಣೆ ವೇಳೆ ಅಬ್ದುಲ್ ರೆಹಮಾನ್, ತನ್ನ ಸಹಚರರ ಬಗ್ಗೆ ಬಾಯ್ಬಿಟ್ಟಿದ್ದಾನೆ. ಅಲ್ಲದೆ ಸಿರಿಯಾಗೆ ತೆರಳಲು ಆರ್ಥಿಕ ನೆರವಿನ ಮೂಲವು ಬಹಿರಂಗಪಡಿಸಿದ್ದ ಎಂದು ಎನ್‌ಐಎ ಅಧಿಕಾರಿಗಳು ಹೇಳಿದ್ದಾರೆ.
‘ಕುರಾನ್ ಸರ್ಕಲ್’ ಕೆಲಸವೇನು?:
ತಮಿಳುನಾಡಿನ ಅಹ್ಮದ್ ಅಬ್ದುಲ್ ಖಾದರ್, ಚೆನ್ನೈನಲ್ಲಿ ಖಾಸಗಿ ಬ್ಯಾಂಕ್‌ವೊಂದರಲ್ಲಿ ಉದ್ಯೋಗದಲ್ಲಿದ್ದ. ಬೆಂಗಳೂರಿನಲ್ಲಿ ಇರ್ಫಾನ್ ನಾಸೀರ್ ಅಕ್ಕಿ ವ್ಯಾಪಾರಿಯಾಗಿದ್ದಾನೆ.
ಇಸ್ಲಾಂ ಮೂಲಭೂತವಾದದ ಬಗ್ಗೆ ವಿಪರೀತ ಒಲವು ಬೆಳೆಸಿಕೊಂಡಿದ್ದ ಈ ಇಬ್ಬರು, ‘ಮುಸ್ಲಿಂ ಅಸ್ಮಿತೆಗೆ ಹೋರಾಟ ನಡೆಸಿದೆ’ ಎಂದು ಐಸಿಸ್ ಬಲವರ್ಧನೆಗೆ ಯತ್ನಿಸಿದ್ದರು. ತರುವಾಯ ಸಿರಿಯಾದಲ್ಲಿರುವ ಐಸಿಸ್ ಭಯೋತ್ಪಾದಕ ಸಂಘಟನೆ ನಾಯಕರ ಸಂಪರ್ಕ ಸಾಧಿಸಿದ ಅಬ್ದುಲ್ ಹಾಗೂ ಇರ್ಫಾನ್, ನಂತರ ಬೆಂಗಳೂರಿನಲ್ಲಿ ಐಸಿಸ್ ಸಂಘಟನೆಗೆ ಮುಸ್ಲಿಂ ಯುವಕರ ನೇಮಕಾತಿಗೆ ಯೋಜಿಸಿದ್ದರು. ಅಂತೆಯೇ ಮುಸ್ಲಿಂ ಯುವಕರನ್ನು ಧರ್ಮ ಬೋಧನೆ ನೆಪದಲ್ಲಿ ಐಸಿಸ್ ಒಲವು ಮೂಡಿಸುತ್ತಿದ್ದರು. ಹೀಗೆ ತಮ್ಮ ಬಲೆಗೆ ಬಿದ್ದು ಮೂಲಭೂತವಾದಿಗಳಾಗಿ ಪರಿವರ್ತನೆಗೊಂಡವರನ್ನು ಐಸಿಸ್ ತರಬೇತಿಗೆ ಸಿರಿಯಾಗೆ ಆರೋಪಿಗಳು ಕಳುಹಿಸುತ್ತಿದ್ದರು ಎಂದು ಎನ್‌ಐಎ ಮೂಲಗಳು ಹೇಳಿವೆ.
ಇದಕ್ಕಾಗಿ ಹಿಜ್ಬ್-ಉತ್-ತೆಹ್ರೀರ್ ಎಂಬ ಗುಂಪು ಕಟ್ಟಿಕೊಂಡಿದ್ದ ಆರೋಪಿಗಳು, ಬಳಿಕ ‘ಕುರಾನ್ ಸರ್ಕಲ್’ ಎಂಬ ಗುಪ್ತನಾಮದಲ್ಲಿ ಸಂಘಟನೆ ಚಟುವಟಿಕೆಯಲ್ಲಿ ನಡೆಸಿದ್ದರು. ಇವರ ಬಗ್ಗೆ ಡಾ ರೆಹಮಾನ್ ಸುಳಿವು:
ಇತ್ತೀಚಿಗೆ ಬೆಂಗಳೂರಿನಲ್ಲಿ ಐಸಿಸ್ ಸಂಘಟನೆಗೆ ಆ್ಯಪ್ ಅಭಿವೃದ್ಧಿಪಡಿಸಲು ಸಿಕ್ಕಿಬಿದ್ದ ಡಾ.ಅಬ್ದುರ್ ರೆಹಮಾನ್‌ನನ್ನು 2014ರಲ್ಲಿ ಸಿರಿಯಾಗೆ ಕಳುಹಿಸಲಾಗಿತ್ತು. ವಿಚಾರಣೆ ವೇಳೆ ತನ್ನ ಸಿರಿಯಾ ಯಾತ್ರೆ ಹಿಂದಿರುವ ನೆರವಿನ ಹಸ್ತವನ್ನು ಆತ ಬಹಿರಂಗಪಡಿಸಿದ್ದ. ಬಳಿಕ ಈ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಯಿತು. ಬೆಂಗಳೂರಿನಲ್ಲಿ ಮುಸ್ಲಿಂ ಯುವಕರನ್ನು ಉಗ್ರ ಸಂಘಟನೆ ನೇಮಕಾತಿಯಲ್ಲಿ ಇರ್ಫಾನ್ ಹಾಗೂ ಅಬ್ದುಲ್ ಬಹುಮುಖ್ಯ ಪಾತ್ರವಹಿಸಿದ್ದಾರೆ. ಹೀಗೆ ಸಿರಿಯಾಗೆ ಹೋಗಿದ್ದ ಇಬ್ಬರು ಯುವಕರು ಅಲ್ಲಿ ಹತ್ಯೆಗೀಡಾಗಿದ್ದರು. ಸಿರಿಯಾಗೆ ಯುವಕರ ಕಳುಹಿಸಲು ಅಗತ್ಯವಾಗಿರುವ ಆರ್ಥಿಕ ನೆರವನ್ನು ಆರೋಪಿಗಳು ಸಂಗ್ರಹಿಸುತ್ತಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ