ಅಯ್ಯೋ ಕಂದಮ್ಮ..! 4 ದಿನದ ಹಸುಗೂಸನ್ನು ತುಳಿದು ಸಾಯಿಸಿದ ಪೊಲೀಸರು: ತನಿಖೆಗೆ ಆದೇಶಿಸಿದ ಸಿಎಂ

By BK AshwinFirst Published Mar 23, 2023, 12:04 PM IST
Highlights

ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಈ ಮೃತ ಮಗುವಿನ ಅಜ್ಜನನ್ನು ಹುಡುಕಲು ಪೊಲೀಸರು ಅವರ ಮನೆಗೆ ತೆರಳಿದ್ದರು. ಈ ವೇಳೆ  ಕೊಠಡಿಯೊಂದರಲ್ಲಿ ಮಲಗಿದ್ದ ನವಜಾತ ಶಿಶುವಿನ ಮೇಲೆ ಪೊಲೀಸರು ಕಾಲಿಟ್ಟಿದ್ದಾರೆ ಎನ್ನಲಾಗಿದೆ.

ಗಿರಿದಿಹ್, ಜಾರ್ಖಂಡ್ (ಮಾರ್ಚ್‌ 23, 2023) : ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯಲ್ಲಿ ಬುಧವಾರ ನಾಲ್ಕು ದಿನದ ನವಜಾತ ಶಿಶುವನ್ನು ಪೊಲೀಸ್ ಅಧಿಕಾರಿಯೊಬ್ಬರು ತುಳಿದು ಸಾಯಿಸಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ತನಿಖೆಗೆ ಆದೇಶಿಸಿದ್ದಾರೆ. ಗಿರಿದಿಹ್‌ ಜಿಲ್ಲೆಯ ಕೊಸೊಗೊಂಡೋಡಿಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಈ ಮೃತ ಮಗುವಿನ ಅಜ್ಜನನ್ನು ಹುಡುಕಲು ಪೊಲೀಸರು ಅವರ ಮನೆಗೆ ತೆರಳಿದ್ದರು. ಈ ವೇಳೆ  ಕೊಠಡಿಯೊಂದರಲ್ಲಿ ಮಲಗಿದ್ದ ನವಜಾತ ಶಿಶುವಿನ ಮೇಲೆ ಪೊಲೀಸರು ಕಾಲಿಟ್ಟಿದ್ದಾರೆ ಎನ್ನಲಾಗಿದೆ. ದಿಯೋರಿ ಪೊಲೀಸ್ ಠಾಣೆಯ ಉಸ್ತುವಾರಿ ಸಂಗಮ್ ಪಾಠಕ್ ನೇತೃತ್ವದ ತಂಡವು ಆರೋಪಿ ಭೂಷಣ್ ಪಾಂಡೆ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ ನಂತರ ಅವರ ಮನೆಗೆ ಹೋಗಿತ್ತು. ಪೊಲೀಸರನ್ನು ನೋಡಿದ ಭೂಷಣ್ ಅವರ ಕುಟುಂಬದ ಸದಸ್ಯರೆಲ್ಲರೂ ನವಜಾತ ಶಿಶುವನ್ನು ಮನೆಯಲ್ಲಿಯೇ ಬಿಟ್ಟು ಮನೆಯಿಂದ ಓಡಿಹೋಗಿದ್ದರು ಎಂದು ಸ್ತಳೀಯ ಜನರು ಮಾಹಿತಿ ನೀಡಿದ್ದಾರೆ. 

ಇದನ್ನು ಓದಿ: ಅಯ್ಯೋ.. ಕಂದಮ್ಮ! ಆಸ್ಪತ್ರೆಯಲ್ಲಿ ತಾಯಿ ಪಕ್ಕ ಮಲಗಿದ್ದ ಶಿಶು ಕೊಂದ ಬೀದಿ ನಾಯಿಗಳು

ಅಲ್ಲದೆ, ಪೊಲೀಸರು ಆರೋಪಿಗಾಗಿ ಮನೆಯ ಮೂಲೆ ಮೂಲೆಯಲ್ಲಿ ಹುಡುಕುತ್ತಿದ್ದಾಗ ನಾಲ್ಕು ದಿನದ ಮಗು ಒಳಗೆ ಮಲಗಿತ್ತು ಎಂದು ಮೃತ ಮಗುವಿನ ತಾಯಿ ನೇಹಾದೇವಿ ಹೇಳಿದ್ದಾರೆ. ಬಳಿಕ, ಪೊಲೀಸರು ಮನೆಯಿಂದ ಹೊರ ಹೋದ ಬಳಿಕ, ನಾವು ಮನೆ ತಲುಪಿದಾಗ ತನ್ನ ಮಗು ಶವವಾಗಿ ಬಿದ್ದಿತ್ತು ಎಂದು ತಾಯಿ ಬೇಸರ ಪಟ್ಟುಕೊಂಡು ಹೇಳಿದ್ದಾರೆ. 
 
ಮಗುವನ್ನು ಪೊಲೀಸರೇ ತುಳಿದು ಕೊಂದಿದ್ದಾರೆ ಎಂದು ಮೃತ ನವಜಾತ ಶಿಶುವಿನ ತಾಯಿ ಮತ್ತು ಆರೋಪಿ ಭೂಷಣ್ ಪಾಂಡೆ ಸೇರಿದಂತೆ ಮನೆಯ ಇತರ ಸದಸ್ಯರು ಆರೋಪಿಸಿದ್ದಾರೆ. ಇನ್ನು, ಈ ಸಂಬಂಧ ದೂರು ದಾಖಲಾದ ಬಳಿಕ, ಈ ಘಟನೆಯ ಬಗ್ಗೆ ಎಚ್ಚೆತ್ತುಕೊಂಡ ಉಪ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ರಾಣಾ, ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನ್ಯುಮೋನಿಯಾನಿಂದ ಬಳಲುತ್ತಿದ್ದ 3 ತಿಂಗಳ ಹಸುಗೂಸಿಗೆ ಬಿಸಿ ರಾಡ್‌ನಿಂದ ಚುಚ್ಚಿ ಚಿಕಿತ್ಸೆ: ಕಂದಮ್ಮ ಬಲಿ..!

ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಜಾರ್ಖಂಡ್‌ ರಾಜ್ಯ ಆರೋಗ್ಯ ಸಚಿವ ಬನ್ನಾ ಗುಪ್ತಾ, "ಇಂತಹ ಘಟನೆಗಳನ್ನು ಟೀಕಿಸಲಾಗುತ್ತದೆ ಮತ್ತು ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ದೇಶವು ಸಂವಿಧಾನದ ಪ್ರಕಾರ ನಡೆಯುತ್ತದೆ. ಆದ್ದರಿಂದ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುತ್ತದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: 2 ತಿಂಗಳ ಕಂದಮ್ಮನನ್ನು ಆಸ್ಪತ್ರೆಯ 3ನೇ ಮಹಡಿಯಿಂದ ಎಸೆದು ಕೊಂದ ಹೆತ್ತ ತಾಯಿ..!

click me!