
ಬೆಂಗಳೂರು(ಜ.21): ಕೆಲಸಕ್ಕಿದ್ದ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿ ನೇಪಾಳಕ್ಕೆ ಹೋಗಿ ಪರಾರಿಯಾಗಿದ್ದ ಮಾಜಿ ಪೊಲೀಸ್ ಸಿಬ್ಬಂದಿಯೊಬ್ಬ ಚಾಮರಾಜಪೇಟೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ನೇಪಾಳ ಮೂಲದ ತಾಪಾ ಸೂರ್ಯ ಬಹದ್ದೂರ್(30) ಬಂಧಿತ. ಆರೋಪಿಯಿಂದ 62 ಲಕ್ಷ ಮೌಲ್ಯದ 1192 ಗ್ರಾಂ ಚಿನ್ನದ ಬಿಸ್ಕೆಟ್ ಮತ್ತು ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಉದ್ಯಮಿ ಟಿ. ಸೆಲ್ವರಾಜ್, ತಮ್ಮ ಪತ್ನಿ ಮತ್ತು ಪುತ್ರನ ಜತೆ ಚಾಮರಾಜಪೇಟೆಯಲ್ಲಿ ಮನೆಯಲ್ಲಿ ನೆಲೆಸಿದ್ದರು. ಆರೋಪಿ ತಾಪಾ ಸೂರ್ಯ ಕಳೆದ ಹತ್ತು ತಿಂಗಳ ಹಿಂದೆ ಮನೆಯ ಭದ್ರತಾ ಸಿಬ್ಬಂದಿ ಕೆಲಸಕ್ಕೆ ಸೇರಿಕೊಂಡಿದ್ದ. ಈತನಿಗೆ ಮನೆಯ ಮಹಡಿಯಲ್ಲಿನ ಕೊಠಡಿಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಹತ್ತು ತಿಂಗಳಲ್ಲಿಯೇ ಆರೋಪಿ ಮನೆಯವರ ವಿಶ್ವಾಸಗಳಿಸಿದ್ದ. ಪರಿಣಾಮ ಮನೆಯಲ್ಲೆಡೆ ಓಡಾಡಲು ಮುಕ್ತ ಅವಕಾಶ ನೀಡಲಾಗಿತ್ತು.
ಸೆಲ್ವರಾಜ್ ಅವರು ವಾಸವಿದ್ದ ಮನೆ ವ್ಯಾಜ್ಯದಲ್ಲಿತ್ತು. ಕೋರ್ಟ್ ಸೆಲ್ವರಾಜ್ ವಿರುದ್ಧ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಡಿಸೆಂಬರ್ನಲ್ಲಿ ಮನೆ ಖಾಲಿ ಮಾಡಬೇಕಾಗಿತ್ತು. ಇದಕ್ಕೂ ಮುನ್ನವೇ ಆರೋಪಿ ಮನೆಯಲ್ಲಿ ಚಿನ್ನಾರಭಣ ಕಳವು ಮಾಡಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ಉದ್ಯಮಿ ದೂರು ನೀಡಿದ್ದರು.
ಕದ್ದ ಹಣದಲ್ಲಿ ದುಬಾರಿ ಕಾರು ಖರೀದಿ, ಸಮಾಜ ಸೇವೆ; ಕೊನೆಗೂ ಸಿಕ್ಕಿ ಬಿದ್ದ ಚಾಲಾಕಿ ಕಳ್ಳ!
ಲೋಕಾಪುರ ನೇತೃತ್ವದಲ್ಲಿ ತಂಡ:
ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಚಾಮರಾಜಪೇಟೆ ಠಾಣಾಧಿಕಾರಿ ಬಿ.ಎಸ್.ಲೋಕಾಪುರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆರೋಪಿ ನೇಪಾಳದ ಕಠ್ಮಂಡುಗೆ ಹೋಗಿರುವ ಮಾಹಿತಿ ಕಲೆ ಹಾಕಿತ್ತು. ಅಷ್ಟರಲ್ಲಿ ಅಲ್ಲಿಯ ರಾಮೇಛಾಪ್ ಪೊಲೀಸರು ಪ್ರಕರಣವೊಂದರಲ್ಲಿ ಆರೋಪಿಯನ್ನು ಬಂಧಿಸಿದ್ದರು. ಈ ಮಾಹಿತಿ ಮೇರೆಗೆ ನೇಪಾಳದ ರಾಯಭಾರ ಕಚೇರಿ ಮತ್ತು ಇಂಟರ್ಪೋಲ್ ಅಧಿಕಾರಿಗಳ ಜತೆ ಪತ್ರ ವ್ಯವಹಾರ ನಡೆಸಿದ್ದರು. ಅಲ್ಲದೆ, ರಾಮೇಛಾಫ್ ಪೊಲೀಸ್ ಠಾಣೆಗೂ ಮಾಹಿತಿ ನೀಡಲಾಗಿತ್ತು. ಬಳಿಕ ನೇಪಾಳಕ್ಕೆ ತೆರಳಿದ ಪೊಲೀಸರು ಆರೋಪಿಯಿಂದ ಚಿನ್ನದ ಬಿಸ್ಕೆಟ್ಗಳು ಮತ್ತು ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದು, ಆತನನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ. ಈತ ನೇಪಾಳದಲ್ಲಿ ಪೊಲೀಸ್ ಆಗಿದ್ದು, ರಾಜೀನಾಮೆ ನೀಡಿ ಬೆಂಗಳೂರಿಗೆ ಬಂದು ಸೆಕ್ಯೂರಿಟಿ ಗಾರ್ಡ್ ಆಗಿದ್ದ ಎಂದು ಹಿರಿಯ ಪೊಲೀಸರು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ