ಕಂಡೋರ ಸೈಟ್‌ 1 ಕೋಟಿಗೆ ಮಾರಾಟ..!

By Kannadaprabha NewsFirst Published Jan 21, 2021, 7:29 AM IST
Highlights

ದುಬೈನಲ್ಲಿರುವ ವ್ಯಕ್ತಿಯೊಬ್ಬರ ನಿವೇಶನಕ್ಕೆ ನಕಲಿ ಮಾಲೀಕನ ಸೃಷ್ಟಿ| ಸೈಟ್‌ನ ನಕಲಿ ಪ್ರತಿ ಹೊಂದಿದ್ದ ವಕೀಲನಿಂದ ಭಾರೀ ಮೋಸದಾಟ| ಕೆಲಸದ ಆಸೆ ತೋರಿಸಿ ವ್ಯಕ್ತಿಯೊಬ್ಬರ ಹೆಸರಲ್ಲಿ ನಕಲಿ ಕ್ರಯಪತ್ರ ಸೃಷ್ಟಿ| 1 ಕೋಟಿಗೆ ಸೈಟ್‌ ಡೀಲ್‌ ಮಾಡಿ 70 ಲಕ್ಷ ಪಡೆದು ವಂಚನೆ| 
 

ಬೆಂಗಳೂರು(ಜ.21): ನಿವೇಶನಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಹತ್ತಾರು ಬಾರಿ ದಾಖಲೆ ಪರಿಶೀಲನೆ ನಡೆಸಿ. ಇಲ್ಲದಿದ್ದರೆ ಊರಿನಲ್ಲಿ ಇಲ್ಲದ್ದವರ ಹೆಸರಿನ ನಿವೇಶನ ತೋರಿಸಿ ವಂಚನೆ ಮಾಡುತ್ತಿರುವ ಗ್ಯಾಂಗ್‌ ಕೈಗೆ ಸಿಕ್ಕಿ ಹಾಕಿಕೊಳ್ಳಬಹುದು ಎಚ್ಚರ...!

ಹೌದು, ದುಬೈನಲ್ಲಿರುವ ವ್ಯಕ್ತಿಯೊಬ್ಬರ ನಿವೇಶನಕ್ಕೆ ನಕಲಿ ಮಾಲೀಕನನ್ನು ಸೃಷ್ಟಿಸಿ ಅಂದಾಜು 70 ಲಕ್ಷ ಟೋಪಿ ಹಾಕಿದ್ದ ದಂಪತಿ ಸೇರಿ ಐದು ಮಂದಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೆ.ಪಿ.ನಗರದ ಕೀರ್ತನಾ (29), ಈಕೆಯ ಪತಿ ಶೇಖರ್‌ (36), ಕೆಂಗೇರಿಯ ಪವನ್‌ ಕುಮಾರ್‌ (36), ಸರ್ಜಾಪುರದ ಉಮಾ ಮಹೇಶ್‌ (41) ಹಾಗೂ ಜಯಪ್ರಕಾಶ್‌ (39) ಬಂಧಿತರು. ಪ್ರಮುಖ ಆರೋಪಿ ವಕೀಲ ಪ್ರಜ್ವಲ್‌ ರಾಮಯ್ಯ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಬಂಧಿತರಿಂದ 1.83 ಲಕ್ಷ ಬೆಲೆ ಬಾಳುವ ಚಿನ್ನಾಭರಣ, 35 ಲಕ್ಷ ಮೌಲ್ಯದ ಮೂರು ಹೊಸ ಕಾರು ಹಾಗೂ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೀರ್ತನಾ ಹಾಗೂ ಶೇಖರ್‌ ದಂಪತಿಗೆ ತಲೆಮರೆಸಿಕೊಂಡಿರುವ ಆರೋಪಿ ಪ್ರಜ್ವಲ್‌ ರಾಮಯ್ಯ ಪರಿಚಯಸ್ಥರಾಗಿದ್ದ. ಪ್ರಜ್ವಲ್‌ ವಕೀಲ ವೃತ್ತಿಯನ್ನು ಮಾಡುತ್ತಿರಲಿಲ್ಲ. ಬದಲಾಗಿ ಯಾವುದಾದರೂ ದಾಖಲೆ ಪರಿಶೀಲನೆ ಮಾಡುವ ಕೆಲಸವನ್ನಷ್ಟೇ ಮಾಡುತ್ತಿದ್ದ. ಈ ನಡುವೆ ಆರೋಪಿಗಳು ಹೇಗಾದರೂ ಮಾಡಿ ಹಣ ಸಂಪಾದಿಸಬೇಕು ಎಂದು ತೀರ್ಮಾನಿಸಿದ್ದರು. ಪ್ರಜ್ವಲ್‌ ರಾಮಯ್ಯಗೆ ದುಬೈನಲ್ಲಿರುವ ಮೈಕೆಲ್‌ ಡಿಸೋಜಾ ಎಂಬುವರಿಗೆ ಸೇರಿದ ನಿವæೕಶನ ಅವಿನ್ಯೂ ಲೇಔಟ್‌ನಲ್ಲಿರುವ ಬಗ್ಗೆ ಮಾಹಿತಿ ಇತ್ತು. ಇದಕ್ಕೆ ಸಂಬಂಧಿಸಿದ ಜೆರಾಕ್ಸ್‌ ಪ್ರತಿ ದಾಖಲೆಗಳು ಆರೋಪಿ ಬಳಿ ಇದ್ದವು.

ವೈದ್ಯ ಸೀಟು ಕೊಡಿಸುವುದಾಗಿ 52 ಲಕ್ಷ ವಂಚನೆ

ಇದೇ ಸಮಯಕ್ಕೆ ಚಕ್ರವರ್ತಿ ನಡುಪಾಂಡು ಎಂಬುವರು ನಿವೇಶನ ಖರೀದಿಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ನಿವೇಶನವನ್ನು ಆರೋಪಿಗಳು ಜೇವರ್ಗೀಸ್‌ ಮ್ಯಾಥ್ಯೂ ಎಂಬುವರ ಹೆಸರಿನಲ್ಲಿ ಸಬ್‌ ರಿಜಿಸ್ಟ್ರಾರ್‌ನಲ್ಲಿ ಶುದ್ಧ ಕ್ರಯಪತ್ರ ಮಾಡಿಸಿದ್ದರು. ನಂತರ ಚಕ್ರವರ್ತಿ ನಡುಪಾಂಡು ಅವರ ಬಳಿ ಮಾತನಾಡಿ .1 ಕೋಟಿಗೆ ನಿವೇಶನ ಮಾರಾಟ ಮಾಡಲು ಒಪ್ಪಂದವಾಗಿತ್ತು.

ನಂತರ ಆರೋಪಿ ಪ್ರಜ್ವಲ್‌ ರಾಮಯ್ಯನೇ ಐಸಿಐಸಿಐ ಬ್ಯಾಂಕ್‌ನಿಂದ ಚಕ್ರವರ್ತಿ ನಡುಪಾಂಡು ಅವರಿಗೆ .69.62 ಲಕ್ಷ ಸಾಲ ಕೊಡಿಸಿದ್ದ. ಈ ಹಣದ ಡೀಡಿಯನ್ನು ಜೇವರ್ಗಿಸ್‌ ಮ್ಯಾಥ್ಯೂ ಅವರ ಹೆಸರಿನಲ್ಲಿ ಆರೋಪಿಗಳು ಪಡೆದು ಮಲ್ಲೇಶ್ವರದಲ್ಲಿರುವ ಬಂಧನ್‌ ಬ್ಯಾಂಕ್‌ ಖಾತೆಗೆ ಹಾಕಿ ಹಾಕಿಕೊಂಡಿದ್ದರು. ಜೇವರ್ಗಿಸ್‌ ಮ್ಯಾಥ್ಯೂ ಅವರನ್ನೇ ಮೈಕೆಲ್‌ ಡಿಸೋಜಾ ನಂಬಿಸಿ ನಿವೇಶನ ಮಾರಾಟ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೊಬೈಲ್‌ ಸ್ವಿಚ್‌ಆಫ್‌ ಮಾಡಿ ಸಿಕ್ಕಿಬಿದ್ದರು!

ವಯಸ್ಸಾದ ಜೇವರ್ಗಿಸ್‌ ಮ್ಯಾಥ್ಯೂ ಅವರು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದು, ಮೆಯೋಹಾಲ್‌ ಸಮೀಪ ಪ್ರಜ್ವಲ್‌ ರಾಮಯ್ಯನ ಪರಿಚಯವಾಗಿತ್ತು. ಈ ವೇಳೆ ಪ್ರಜ್ವಲ್‌ ಮ್ಯಾಥ್ಯೂ ಅವರಿಗೆ ಕೆಲಸ ಕೊಡಿಸುವುದಾಗಿ ಕೀರ್ತನಾಳನ್ನು ಪರಿಚಯ ಮಾಡಿಕೊಟ್ಟಿದ್ದ. ಮೊದಲೇ ಸಂಚು ರೂಪಿಸಿದಂತೆ ಕೆಲಸ ಕೊಡಿಸಲು ಫೋಟೋ ತೆಗೆಸಬೇಕು ಎಂದು ಹೇಳಿ, ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಕರೆದುಕೊಂಡು ಹೋಗಿ ಮ್ಯಾಥ್ಯೂ ಅವರ ಹೆಸರಿನಲ್ಲಿ ಶುದ್ಧ ಕ್ರಯಪತ್ರ ಮಾಡಿಸಿದ್ದರು. (2005 ಹಿಂದಿನ ಕ್ರಯ ಪತ್ರಗಳಲ್ಲಿ ನಿವೇಶನ ಮಾಲೀಕರ ಫೋಟೋ ಇರಲಿಲ್ಲ).

ಬಳಿಕ ಆರೋಪಿಗಳ ಮೊಬೈಲ್‌ ಸ್ವಿಚ್‌ಆಫ್‌ ಆಗಿತ್ತು. ಹೀಗಾಗಿ ಪ್ರಜ್ವಲ್‌ ರಾಮಯ್ಯನನ್ನು ಹುಡುಕಿಕೊಂಡು ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಹೋಗಿ ವಿಚಾರಿಸಿದಾಗ ತನ್ನ ಹೆಸರಲ್ಲಿ ನಿವೇಶನವನ್ನು ಬೇರೆಯವರಿಗೆæ ಮಾರಾಟ ಮಾಡಿರುವ ವಿಚಾರ ಗೊತ್ತಾಗಿದೆ. ಈ ಎಲ್ಲ ದಾಖಲೆಗಳನ್ನು ಪಡೆದು ಮ್ಯಾಥ್ಯೂ ಅವರು ನೇರವಾಗಿ ನಿವೇಶನ ಖರೀದಿಸಿದ್ದ ಚಕ್ರವರ್ತಿ ನಡುಪಾಂಡು ಬಳಿ ಹೋಗಿ ತಾನು ನಿವೇಶನದ ಮಾಲೀಕ ಮೈಕೆಲ್‌ ಡಿಸೋಜಾ ಅಲ್ಲ ಎಂದು ತಿಳಿಸಿದ್ದರು. ಬಳಿಕ ಚಕ್ರವರ್ತಿ ಅವರು ಕೊಟ್ಟದೂರಿನ ಮೇರೆಗೆ ಪ್ರಕರಣ ಇನ್‌ಸ್ಪೆಕ್ಟರ್‌ ಎಸ್‌.ನಂಜೇಗೌಡ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
 

click me!