ಚಿತ್ರದುರ್ಗ: ವೈದ್ಯರ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಬಲಿ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

By Ravi JanekalFirst Published Mar 8, 2024, 8:55 PM IST
Highlights

ನವಜಾತ ಶಿಶುಗಳ ರಕ್ಷಣೆಗಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಆದ್ರೆ ವೈದ್ಯರ ನಿರ್ಲಕ್ಷ್ಯದಿಂದ‌ ನವಜಾತು ಶಿಶುಗಳು ಬಲಿಯಾಗುತ್ತಲೆ ಇವೆ. ಇದೀಗ ಮತ್ತೊಂದು ಶಿಶು ವೈದ್ಯರ ನಿರ್ಲಕ್ಷ್ಯದಿಂದ ಅನ್ಯಾಯವಾಗಿ ಸಾವಿಗೀಡಾಗಿದೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಮಾ.8) ನವಜಾತ ಶಿಶುಗಳ ರಕ್ಷಣೆಗಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಆದ್ರೆ ವೈದ್ಯರ ನಿರ್ಲಕ್ಷ್ಯದಿಂದ‌ ನವಜಾತು ಶಿಶುಗಳು ಬಲಿಯಾಗುತ್ತಲೆ ಇವೆ. ಇದೀಗ ಮತ್ತೊಂದು ಶಿಶು ವೈದ್ಯರ ನಿರ್ಲಕ್ಷ್ಯದಿಂದ ಅನ್ಯಾಯವಾಗಿ ಸಾವಿಗೀಡಾಗಿದೆ.

ವೈದ್ಯರ ನಿರ್ಲಕ್ಷದಿಂದಾಗಿ ನಾಲ್ಕು ದಿನದ ಗಂಡು ಶಿಶು  ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಕಳೆದ ನಾಲ್ಕು ದಿನಗಳ ಹಿಂದೆ  ಹೆರಿಗೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಚಿತ್ರದುರ್ಗ ತಾಲೂಕಿನ ಕಡ್ಲೆಗುದ್ದು ಗ್ರಾಮದ‌ ಕವಿತಾ ನಾಗರಾಜ್ ದಂಪತಿ, ಸಿಸೆರೆಯನ್ ಮೂಲಕ ಗಂಡು ಮಗುಗೆ ಜನ್ಮ‌ ನೀಡಿದ್ದಾರೆ. ಆದರೆ ಹೆರಿಗೆಯಾಗಿ 4ದಿನ ಕಳೆದರೂ ಕೂಡ  ಮಕ್ಕಳ ತಜ್ಞ ವೈದ್ಯರು‌ ಚಿಕಿತ್ಸೆ‌ ನೀಡಿಲ್ಲ. ನವಜಾತ ಶಿಶುವನ್ನು ಒಮ್ಮೆಯೂ ಪರೀಕ್ಷಿಸಿಲ್ಲ. ಹೀಗಾಗಿ ತಾಯಿ ಪಕ್ಕದಲ್ಲೇ ಮಲಗಿದ್ದ ಹಸುಗೂಸು  ಕೊನೆಯುಸಿರೆಳೆದಿದೆ. 

 

ವೈದ್ಯಾಧಿಕಾರಿ ನಿರ್ಲಕ್ಷ್ಯ ದಿಂದ ಹೆರಿಗೆ ಬಳಿಕ ತೀವ್ರ ರಕ್ತಸ್ರಾವದಿಂದ ಮಹಿಳೆ ಸಾವು!

ಉಸಿರಾಟದ ಸಮಸ್ಯೆಯಿಂದಾಗಿ ಆ ಮಗುವಿನ ದೇಹ ನೀಲಿ ಬಣ್ಣಕ್ಕೆ ತಿರುಗಿದ್ದು, ಪರೀಕ್ಷಿಸಬೇಕಿದ್ದ  ಮಕ್ಕಳ ತಜ್ಞ ವೈದ್ಯ‌ ಡಾ.ಶ್ರೀರಾಮ್ ಒಮ್ಮೆಯೂ ಮಗುವಿಗೆ ಚಿಕಿತ್ಸೆ ನೀಡದೇ‌ ನಿರ್ಲಕ್ಷ್ಯ ತೋರಿದ ಪರಿಣಾಮ ಮಗು ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೇ ಈ ಜಿಲ್ಲಾಸ್ಪತ್ರೆಯಲ್ಲಿ ಲಂಚಾವತಾರ ತಾಂಡವವಾಡ್ತಿದ್ದು, ಏನೇ ಚಿಕಿತ್ಸೆ ಮಾಡಬೇಕಿದ್ರೂ ಮೊದಲು ಹಣ ಕೊಡಬೇಕು. ಆಸ್ಪತ್ರೆ ನರ್ಸ್‌ಗಳಿಂದ ವೈದ್ಯರವರೆಗೆ ಹಣಕ್ಕೆ ಬೇಡಿಕೆ ಇಡುವುದು ಮಿತಿಮೀರಿದೆ ಎಂದು ಮೃತ ಮಗುವಿನ‌ ಪೋಷಕರು ಜಿಲ್ಲಾಆಸ್ಪತ್ರೆ ಆವರಣದಲ್ಲೇ  ಪ್ರತಿಭಟಿಸಿದ್ದಾರೆ. ತಮಗಾದ ಅನ್ಯಾಯ ಮತ್ಯಾವ ತಂದೆತಾಯಿಗೂ ಆಗದಿರಲಿ ಅಂತ ಆಕ್ರೋಶ ಹೊರಹಾಕಿದ್ದಾರೆ. ಪ್ರಕರಣಕ್ಕೆ ಕಾರಣವಾದ ತಪ್ಪಿತಸ್ಥರ ವಿರುದ್ಧ  ಕಾನೂನು ಕ್ರಮ‌ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಇನ್ನು ಇದೊಂದೇ ಪ್ರಕರಣವಲ್ಲ, ದಿನನಿತ್ಯ ಈ ಜಿಲ್ಲಾಸ್ಪತ್ರೆಯಲ್ಲಿ ನಿರಂತರವಾಗಿ ನಡೆಯುತ್ತಲೇ ಇವೆ. ಅಷ್ಟರಮಟ್ಟಿಗೆ ವೈದ್ಯರ ನಿರ್ಲಕ್ಷ್ಯ ಮಿತಿಮೀರಿದೆ. ಈ ಬಗ್ಗೆ ಜಿಲ್ಲಾಸ್ಪತ್ರೆ ಸರ್ಜನ್ ಡಾ,ರವೀಂದ್ರ ಅವರನ್ನು ಕೇಳಿದ್ರೆ, ಕರ್ತವ್ಯಕ್ಕೆ ಹಾಜಾರಾಗಬೇಕಿದ್ದ ಮಕ್ಕಳ ತಜ್ಞ ಡಾ.ಶ್ರೀರಾಮ್ ಅವರ ತಂದೆಯ ತಿಥಿ ಕಾರ್ಯ ಹಿನ್ನೆಲೆ ಗೈರಾಗಿದ್ದರೆಂಬ ಮಾಹಿತಿ‌ ತಿಳಿದು ಬಂದಿದೆ. ಹೀಗಾಗಿ‌ಈ ಪ್ರಕರಣ ನಡೆದಿದ್ದು, ಅವರ ವಿರುದ್ಧ  ಸೂಕ್ತ ಕ್ರಮ ಕೈಗೊಳ್ಳುವ ಭರವಸೆ‌ಯನ್ನು  ಜಿಲ್ಲಾ ಸರ್ಜನ್ ಡಾ.ರವೀಂದ್ರ‌ನೀಡಿದ್ದಾರೆ.

ಹುಟ್ಟಿದ 5ನೇ ದಿನಕ್ಕೆ ಮಗುವಿಗೆ ಋತುಸ್ರಾವ…. ಏನಿದು ಸಮಸ್ಯೆ ತಿಳಿಯಿರಿ

ಒಟ್ಟಾರೆ ಬದುಕಿ ಬಾಳಬೇಕಿದ್ದ ಕಣ್ತೆರೆಯುವ ಮುನ್ನವೇ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿರುವುದು ದುರಂತವೇ ಸರಿ. ವೈದ್ಯರ‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿರುವ ಕುಟುಂಬಸ್ಥರು, ಸ್ಥಳೀಯರು. ಇನ್ನಾದ್ರು ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯ‌ ಹಾಗು‌ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು‌ ಜಿಲ್ಲಾಡಳಿತ ಮುಂದಾಗಬೇಕಿದೆ.

click me!