ಪೊಲೀಸ್ ಮಗ ಕಳ್ಳ ಆಗ್ತಾನೆಂಬ ಮಾತನ್ನು ನಂಜನಗೂಡು ಟ್ರಾಫಿಕ್ ಪಿಎಸ್‌ಐ ಮಗ ಬೈಕ್ ನಿಜ ಮಾಡಿದ್ದಾನೆಂಬ ಆರೋಪ ಕೇಳಿಬಂದಿದೆ.
ಮೈಸೂರು (ಆ.27): ಪೊಲೀಸ್ ಮಗ ಕಳ್ಳ ಆಗ್ತಾನೆ ಅಂತ ಜನ ತಮಾಷೆಯಾಗಿ ಮಾತಾಡ್ತೊದನ್ನ ನೋಡಿದ್ದೀವಿ. ಇಲ್ಲೊಬ್ಬ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮಗ ಗಾದೆ ಮಾತನ್ನ ನಿಜ ಮಾಡಿದ್ದಾನೆ. ತಾಯಿ ಪೊಲೀಸ್ ಇಲಾಖೆಯಲ್ಲಿ ಇರುವಾಗಲೇ ಮಗನ ಮೇಲೆ ಬೈಕ್ ಕಳ್ಳತನದ ದೂರು ದಾಖಲಾಗಿದೆ. ಪ್ರಕರಣ ನಡೆದು 4 ತಿಂಗಳಾದರೂ ಕ್ರಮ ವಹಿಸದ ಪೊಲೀಸರ ನಡೆ ಅನುಮಾನ ಮೂಡಿಸುತ್ತಿದ್ದು, ಇತ್ತ ಪಿಎಸ್‌ಐ ಪುತ್ರನ ಮೇಲೆ ಕೊಲೆ ಬೆದರಿಕೆ ಆರೋಪವೂ ಕೇಳಿ ಬಂದಿದೆ.
ಮೈಸೂರು ನಗರದಲ್ಲಿ ವ್ಹೀಲಿಂಗ್ ಪುಂಡಾಟ ಮೆರೆದಿದ್ದ ಪಿಎಸ್‌ಐ ಪುತ್ರ ಈಗ ಬೈಕ್ ಕಳ್ಳತನ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಮೈಸೂರಿನ ನಜರ್‌ಬಾದ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಂಜನಗೂಡು ಟ್ರಾಫಿಕ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಯಾಸ್ಮಿನ್ ತಾಜ್ ಮಗ ಐಮಾನ್ ವಿರುದ್ಧ ದೂರು ನೀಡಲಾಗಿದೆ. ಏಪ್ರಿಲ್ 26 ರಂದು ಮೈಸೂರಿನ ಗಾಯತ್ರಿಪುರಂ ನಿವಾಸಿ ಭಾರತಿ ಎಂಬುವರ ಮನೆ ಮುಂದೆ ನಿಲ್ಲಿಸಿದ್ದ ಕೆಟಿಎಂ ಬೈಕ್ ಕಳ್ಳತನ ಮಾಡಿದ್ದಾರೆ. ಬೈಕ್ ಹ್ಯಾಂಡಲ್ ತಿರುಗಿಸಿ ಕದ್ದೊಯ್ಯುವ ದೃಶ್ಯಗಳು ಸಿ.ಸಿ.ಟಿವಿಯಲ್ಲಿ ಸೆರೆಯಾಗಿವೆ.
ಕೋಲಾರ ಮತ್ತೊಂದು ಮರ್ಯಾದಾ ಹತ್ಯೆ: ಅನ್ಯ ಜಾತಿ ಯುವಕನ ಪ್ರೀತಿಸಿದ ಮಗಳನ್ನೇ ಕೊಲೆಗೈದ ವೆಂಕಟೇಶ್‌ಗೌಡ
ಟ್ರಾಫಿಕ್ ಪಿಎಸ್‌ಐ ಪುತ್ರನಿಂದ ಬೈಕ್ ಕಳ್ಳತನ: ನಂಜನಗೂಡು ಟ್ರಾಫಿಕ್ ಪಿಎಸ್‌ಐ ಯಾಸ್ಮಿನ್ ತಾಜ್ ಪುತ್ರ ಐಮಾನ್ ಹಾಗೂ ಆತ ಸ್ನೇಹಿತರಾದ ಫರ್ಹಾನ್, ತೌಸಿಫ್ ಮತ್ತು ಜುಬಾನ್ ಸೇರಿ ಕಳ್ಳತನ ಮಾಡಿದ್ದಾರೆಂದು ಬೈಕ್‌ನ ಮಾಲೀಕರು ಮೈಸೂರು ನಗರದ ಭಾರತಿ ಅವರು ನಜರ್‌ಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಕೊಟ್ಟು ಒಂದು ತಿಂಗಳ ನಂತರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ಪ್ರಮುಖ ಆರೋಪಿ ಆಗಿರುವ ಐಮಾನ್ ಹೆಸರು ದಾಖಲು ಮಾಡದೇ, ಆರೋಪಿಯ ರಕ್ಷಣೆಗೆ ಪೊಲೀಸರೇ ಬೆಂಗಾವಲಾಗಿ ನಿಂತಿದ್ದಾರೆ ಎಂದು ಆರೋಪಿಸಲಾಗಿದೆ.
ಪಿಎಸ್‌ಐ ಮಗನೆಂಬ ಕಾರಣಕ್ಕೆ ಕಳ್ಳನನ್ನ ಸೇಫ್ ಮಾಡ್ತಿರೋ ಪೋಲೀಸ್ ಇಲಾಖೆ: ಇನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರವೂ ಪಿಎಸ್‌ಐ ಮಗನೆಂಬ ಕಾರಣಕ್ಕೆ ಕಳ್ಳನನ್ನು ಸೇಫ್ ಮಾಡುವ ಪ್ರಯತ್ನಗಳು ನಡೆದಿವೆ. ಆದ್ದರಿಂದ ಬೈಕ್ ಮಾಲೀಕರಾದ ಭಾರತಿ ಅವರು ಪೊಲೀಸ್ ಕಮಿಷನರ್‌ಗೆ ಕೂಡ ದೂರು ಕೊಟ್ಟಿದ್ದಾರೆ. ಇಷ್ಟಾದರೂ ಯಾವುದೇ ಪ್ರಯೋಜನ ಆಗಿಲ್ಲ. ಐಮಾನ್ ತಾಯಿ ಪೊಲೀಸ್ ಇಲಾಖೆಯಲ್ಲಿ ಇರುವುದರಿಂದ ಕಳ್ಳನ ರಕ್ಷಣೆಗೆ ಪೊಲೀಸರು ನಿಂತಿದ್ದಾರೆ ಅಂತ ಬೈಕ್ ಕಳೆದುಕೊಂಡವರು ದೂರಿದ್ದಾರೆ.
ವ್ಹೀಲಿಂಗ್ ಮಾಡುತ್ತಿದ್ದ ಪಿಎಸ್‌ಐ ಪುತ್ರನನ್ನೇ ಜೈಲಿಗೆ ದಬ್ಬಿದ ಮೈಸೂರು ಪೊಲೀಸರು!
ಬೈಕ್ ಕಳ್ಳತನ ಮಾಡಿದವರಿಗೆ ಕೊಲೆ ಬೆದರಿಕೆ: ಬೈಕ್ ಕಳ್ಳತನ ಮಾಡಿದ ಆರೋಪಿಗಳು ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡರೂ ದೂರು ದಾರರಿಗೆ ನ್ಯಾಯ ಸಿಕ್ಕಿಲ್ಲ. ಇದರ ನಡುವೆ ರಾಜಿ ಸಂದಾನಕ್ಕೆ ಮುಂದಾಗಿರುವ ಐಮಾನ್ ಪರ ವಕೀಲರು, ಹೊಸ ಬೈಕ್ ಕೊಳ್ಳಲು ನಾಲ್ಕನೇ ಒಂದು ಭಾಗ ಹಣ ಕೊಡುವುದಾಗಿ ಹೇಳುತ್ತಿದ್ದಾರೆ. ಇತ್ತ ದೂರು ಕೊಟ್ಟವರ ಮೇಲೆಯೇ ಆರೋಪಿ ಐಮಾನ್ ಕೊಲೆ ಬೆದರಿಕೆ ಹಾಕುತ್ತಿದ್ದಾನಂತೆ. ಈ ಬಗ್ಗೆ ಮಾತನಾಡಿದ ಸ್ಥಳೀಯ ಪೊಲೀಸ್ ಠಾಣೆ ಡಿಸಿಪಿ, ನ್ಯಾಯ ಜನರಿಗೊಂದು ಪೊಲೀಸರಿಗೊಂದು ಅಂತ ಇರೋದಿಲ್ಲ. ವೀಲಿಂಗ್ ಕೇಸಲ್ಲಿ ಕ್ರಮ ಕೈಗೊಂಡ ಪೊಲೀಸರು ಈ ಪ್ರಕರಣದಲ್ಲಿ ಆರೋಪಿ ರಕ್ಷಣೆ ಮಾಡುತ್ತಿರುವುದು ಅಕ್ಷಮ್ಯವಾಗಿದೆ. ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಬೈಕ್ ಮಾಲೀಕರಿಗೆ ಭರವಸೆ ನೀಡಿದ್ದಾರೆ.