* ಪ್ರೀತಿಸಿ ಮದುವೆಯಾಗಿದ್ದ ಜೋಡಿ
* ಇಬ್ಬರು ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದವರು
* ಮಗು ಹುಟ್ಟುವ ವೇಳೆ ಜಾತಿ ನೆನೆಪು
* ಗರ್ಭಿಣಿ ಪತ್ನಿ ಕೊಲೆ ಮಾಡಿ ನೀರಿಗೆ ಎಸೆದ
ಮೈಸೂರು(ಮಾ. 22) ಆಕೆ ರಕ್ತದಲ್ಲಿನ ಕಲ್ಮಶ ಹುಡುಕಿ ವೈದ್ಯರಿಗೆ ತಿಳಿಸುವ ಲ್ಯಾಬ್ ಟೆಕ್ನಿಷಿಯನ್. ಈತನೂ ಆಸ್ಪತ್ರೆಗಳಿಗೆ ಔಷಧಿ ಸಾಗಿನೋ ವಾಹನದ ಚಾಲಕ. ಫೀಲ್ಡಲ್ಲಿ ಓಡಾಡಿಕೊಂಡಿದ್ದಾಗ ಪರಿಚಯವಾಗಿ, ಆ ಪರಿಚಯ ಪ್ರೇಮಾಂಕುರಕ್ಕೆ (Love) ಕಾರಣ ಆಗಿದೆ. ಜಾತಿ ಬೇರೆಯಾದರೇನಂತೆ ಎಂದು ಕುಟುಂಬ ಎದುರಿಸಿ ಮದುವೆಯಾದವನಿಗೆ ಮಗು ಹುಟ್ಟುವ ವೇಳೆಗೆ ಜಾತಿಯ (Caste) ಹುಳು ತಲೆ ಹೊಕ್ಕಿದೆ. ಇದೇ ಕಾರಣಕ್ಕೆ 7 ತಿಂಗಳ ಗರ್ಭಿಣಿಯನ್ನು(Pregnant) ನಿರ್ಭಯವಾಗಿ ಕೊಂದು (Murder) ಕೆರೆಗೆ ಎಸೆದಿದ್ದಾನೆ ದುರುಳ.
ಪ್ರೀತಿ ಕುರುಡು ಆಂತಾರೆ ಓಕೆ. ಆದ್ರೆ ಸಂಸಾರ ಕಣ್ಣು ಮುಚ್ಚಿದರೆ ನಡೆದರೆ ಸಾಗದು. ಈ ದಾರುಣ ಪ್ರಕರಣದಲ್ಲೂ ಅದೇ ಆಗಿದೆ. ದೈಹಿಕ ಹಲ್ಲೆ ನಡೆಸಿ, ನಂತರ ಉಸಿರುಗಟ್ಟಿಸಿ 7 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಪತಿ, ಮೃತದೇಹವನ್ನು ರಾತ್ರೋ-ರಾತ್ರಿ ಕೆರೆಗೆ ಎಸೆದಿದ್ದಾನೆ. ಮೈಸೂರು (Mysuru) ನಗರದ ಹೊರ ವಲಯ ಬೆಳವಾಡಿ ಕೆರೆಯಲ್ಲಿ ಘಟನೆ ನಡೆದಿದೆ.
ಮೈಸೂರಿನ ಹಿನಕಲ್ ಗ್ರಾಮದ ನನ್ನೇಶ್ವರ ಬಡಾವಣೆ ನಿವಾಸಿ ಪ್ರಮೋದ್ ಪತ್ನಿ ಅಶ್ವಿನಿ(23) ಹತ್ಯೆಗೀಡಾದ ಗರ್ಭಿಣಿ ಮಹಿಳೆ. ಮೈಸೂರು ತಾಲೂಕಿನ ಉದ್ಬೂರು ಗ್ರಾಮದ ಸ್ವಾಮಿ ಮತ್ತು ಲಕ್ಷ್ಮಿ ದಂಪತಿ ಪುತ್ರಿಯಾದ ಅಶ್ವಿನಿ ಮೈಸೂರು ತಾಲೂಕು ಮೈದನಹಳ್ಳಿ ಗ್ರಾಮದ ನಂದೀಶ್ ಮಗ ಪ್ರಮೋದ್ ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಕೃಷಿ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕಾರು ಚಾಲಕನಾಗಿದ್ದ ಪ್ರಮೋದನೊಂದಿಗೆ 2021ರ ಜೂನ್ 13ರಂದು ಮದುವೆಯಾಗಿದ್ದು, ಅಶ್ವಿನಿ ಈಗ 7 ತಿಂಗಳ ಗರ್ಭಿಣಿ. ಮದುವೆಯಾದ ಆರಂಭದಲ್ಲಿ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ ಆಸಾಮಿ ನಂತರ ತನ್ನ ವರಸೆ ಬದಲಿಸಿದ್ದಾನೆ.
ಅಬ್ಬಬ್ಬಾ ಹೋಳಿಯಾಡಲು ಹೋದ ಕಂದನ ರೇಪ್, ಕಣ್ಣು ಕಿತ್ತು ಹತ್ಯೆ!
ಪ್ರಮೋದ್ ಕೆಲ ದಿನಗಳಿಂದ ಪತ್ನಿಗೆ ವಿನಾಕಾರಣ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಸಣ್ಣಪುಟ್ಟ ವಿಚಾರಕ್ಕೂ ಗಲಾಟೆ ತೆಗೆಯುತ್ತಿದ್ದ ಆತ ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ಕುಟುಂಬದವರು ಆರೋಪಿಸಿದ್ದಾರೆ. ಶುಕ್ರವಾರ ಪತ್ನಿಯೊಂದಿಗೆ ಜಗಳವಾಡಿ ಹಲ್ಲೆ ನಡೆಸಿದ್ದಾನೆ. ನಂತರ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಮೃತದೇಹವನ್ನು ಬೆಳವಾಡಿ ಕೆರೆಗೆ ಎಸೆದಿದ್ದಾನೆ. ಅಶ್ವಿನಿ ಮನೆಯವರು ಆಕೆಗೆ ಪೋನ್ ಮಾಡಿದಾಗ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡು ಮನೆಗೆ ಬಂದು ನೋಡಿದಾಗ ಆಕೆ ಇರಲಿಲ್ಲ. ಪ್ರಮೋದ್‌ಗೆ ಕರೆ ಮಾಡಿದರೆ ಅವನ ಉತ್ತರ ಸಮಂಜಸವಾಗಿರಲಿಲ್ಲ. ಹೀಗಾಗಿ ಅಶ್ವಿನಿ ಮನೆಯವರು ವಿಜಯನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಈ ಬೆಳವಣಿಗೆಯಿಂದ ಹೆದರಿದ ಪ್ರಮೋದ್ ತಲೆಮರೆಸಿಕೊಂಡಿದ್ದ. ಭಾನುವಾರ ಆತನೇ ವಿಜಯನಗರ ಪೊಲೀಸ್ ಠಾಣೆಗೆ ತೆರಳಿದ್ದು, ಪೊಲೀಸರು ವಿಚಾರಣೆ ನಡೆಸಿದ ವೇಳೆ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಶವವನ್ನು ಬೆಳವಾಡಿ ಕೆರೆಗೆ ಎಸೆದಿರುವುದಾಗಿ ತಾನೇ ಬಂದು ತೋರಿಸಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರ ನೆರವಿನೊಂದಿಗೆ ಸೋಮವಾರ ಕಾರ್ಯಾಚರಣೆ ನಡೆಸಿ ಶವವನ್ನು ಪತ್ತೆಹಚ್ಚಿದ್ದಾರೆ. ಈ ಕುರಿತು ವಿಜಯನಗರ ಪೊಲೀಸ್ನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಂದವನೆ ಬಂದು ಹುಡುಕುವ ನಾಟಕವಾಡಿದ: ಶುಕ್ರವಾರ ರಾತ್ರಿ ಪತ್ನಿಯನ್ನು ಕೊಲೆಗೈದಿದ್ದ ಪ್ರಮೋದ್ ಶವವನ್ನು ರಾತ್ರಿಯೇ ಬೆಳವಾಡಿ ಕೆರೆಗೆ ಎಸೆದು ಬಂದಿದ್ದ. ಶನಿವಾರ ಅಶ್ವಿನಿ ಮನೆಯವರು ಪ್ರಮೋದ್‌ನ ಮೊಬೈಲ್‌ಗೆ ಕರೆ ಮಾಡಿದ ವೇಳೆ ಆಕೆ ಆಸ್ಪತ್ರೆಗೆ ಹೋಗಿದ್ದಾಳೆ ಎಂದು ಸುಳ್ಳು ಹೇಳಿದ್ದ. ಮನೆಯವರು ಎಲ್ಲೆಡೆ ಪೋನ್ ಮಾಡಿದರೂ ಅಶ್ವಿನಿ ಸುಳಿವು ಸಿಗಲಿಲ್ಲ. ಇದರಿಂದ ಗಾಬರಿಯಾದ ಅವರು ಅಶ್ವಿನಿ ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ರಾತ್ರಿ ಮಾಡಿದ್ದ ಅಡುಗೆಯನ್ನು ಬಳಸಿರಲಿಲ್ಲ. ಈ ಕುರಿತು ಪ್ರಮೋದ್‌ಗೆ ಕರೆ ಮಾಡಿದ ವೇಳೆ, ಆಕೆಯ ಬಗ್ಗೆ ನನಗೇನೂ ಗೊತ್ತಿಲ್ಲ. ನಾನು ಕೆಲಸದ ಮೇಲೆ ಹೋಗಿದ್ದೇನೆ ಎಂದಿದ್ದಾನೆ. ಆತನ ನಾಟಕವನ್ನು ಅರಿತ
ಕುಟುಂಬದವರು ಕೂಡಲೇ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರೀತಿಸುವಾಗ ಇಲ್ಲದ ಜಾತಿ, ಮಗುವಿನ ವಿಚಾರದಲ್ಲಿ ಮುನ್ನೆಲೆಗೆ ಬಂದಿತ್ತು: ಪ್ರಮೋದ್‌ನ ಮನೆಯವರು ಒಂದು ದಿನವೂ ಅಶ್ವಿನಿ ಬಗ್ಗೆ ಪ್ರೀತಿ ತೋರಲಿಲ್ಲ. ನೀನು ಕೆಳ ಜಾತಿಯವಳು ಎಂದು ಪದೇಪದೇ ನಿಂದಿಸಿ ಹಿಂಸೆ ನೀಡುತ್ತಿದ್ದರು. ಈ ನಡುವೆ ಪ್ರಮೋದ್ ಕೂಡ ಮಗು ನಿನ್ನ ಜಾತಿಯೋ ಅಥವಾ ನನ್ನ ಜಾತಿಯೋ ಎಂದು ಸದಾ ಕುಟುಕುತಿದ್ದ. ಈ ಗೊಂದಲವೇ ಬೇಡ ಗರ್ಭಪಾತ ಮಾಡಿಸಿಕೊಳ್ಳಬೇಕು
ಎಂದು ಹಿಂಸಿಸುತ್ತಿದ್ದ ಎಂದು ಕುಟುಂಬಸ್ಥರು ದೂರಿದ್ದಾರೆ.
ಗಂಡ ಹೆಂಡತಿ ನಡುವೆ ಅವಳು ಸುಳಿದಿದ್ದಳು: ಮೈದನಹಳ್ಳಿಯ ಗಂಡನ ಮನೆಯಲ್ಲಿ ಕಿರುಕುಳ ಹೆಚ್ಚಾದಾಗ ಅಶ್ವಿನಿ ಮನೆಯವರೇ ಮೈಸೂರಿನ ನನ್ನೇಶ್ವರ ನಗರದಲ್ಲಿ ಮನೆ ಮಾಡಿ ಇಬ್ಬರನ್ನೂ ಇರಿಸಿದ್ದರು. ಆದರೆ ಅಲ್ಲಿ ವಾಸವಿದ್ದ ಕೆಲವೇ ದಿನಗಳಲ್ಲಿ ಪಕ್ಕದ ಬೀದಿಯ ಯುವತಿ ಜೊತೆ ಪ್ರಮೋದ್ ಸಖ್ಯ ಬೆಳೆಸಿದ್ದನಂತೆ. ಇದನ್ನ ಅಶ್ವಿನಿ ಮನೆಯವರು ಪ್ರಶ್ನೆ ಮಾಡಿದ್ದು, ಹೆಂಡತಿ ದಬಾಯಿಸಿ ಕೇಳಿದಾಗ ಗಲಾಟೆ ಹೆಚ್ಚಾಗ ತೊಡಗಿದೆ.
ನಿತ್ಯ ಅಜ್ಜಿಗೆ ಕರೆ ಮಾಡಿ ಎಲ್ಲಾ ಹೇಳುತ್ತಿದ್ದವಳು ಅಂದು ಕರೆ ಮಾಡಲೇ ಇಲ್ಲ: ಇನ್ನು ಅಶ್ವಿನಿ ಪ್ರತಿನಿತ್ಯ ತನ್ನ ಅಜ್ಜಿ ಜಯಮ್ಮನಿಗೆ ಕರೆ ಮಾಡಿ ಮಾತನಾಡುತ್ತಿದ್ದಳಂತೆ. ಆದರೆ ಶನಿವಾರ ಅಶ್ವಿನಿ ಕಡೆಯಿಂದ ಮನೆಯವರಿಗೆ ಪೋನ್ ಬಂದಿಲ್ಲ. ಇ ಕಡೆಯಿಂದ ಪೋನ್ ಮಾಡಿದರೂ ಅಶ್ವಿನಿ ಕಡೆಯೊಂದ ನೋ ರೆಸ್ಪಾನ್ಸ್. ನಂತರ ಅನುಮಾನ ಬಂದು ಪ್ರಮೋದ್‌ಗೆ ಕರೆ ಮಾಡಿದಾಗಲೂ ಆತ ಸರಿಯಾದ ಉತ್ತರ ಕೊಟ್ಟಿಲ್ಲ. ಇದರಿಂದ ಅನುಮಾನಗೊಂಡಾಗಲೇ ಮನೆಯವರು ಅಶ್ವಿನ ಕಾಣೆಯಾದ ಬಗ್ಗೆ ದೂರು ನೀಡಲು ಮುಂದಾಗಿದ್ದಾರೆ.
ಅಮ್ಮ ಏನೋ ಮಾತನಾಡಬೇಕು ಅಂದ್ಲು. ಆದರೆ..,: ಅಶ್ವಿನಿ ಕೊಲೆಯಾಗುವುದಕ್ಕೂ ಹಿಂದಿನ ದಿನ ಅಂದರೆ ಶುಕ್ರವಾರ ಸಂಜೆ ತಾಯಿ ಲಕ್ಷ್ಮಿಗೆ ಕರೆ ಮಾಡಿ ಏನೋ ಮಾತಾಡಲು ಪ್ರಯತ್ನ ಮಾಡಿದ್ದಾಳೆ. ಅಷ್ಟರಲ್ಲಿ ಗಂಡ ಮನೆಗೆ ಬಂದು ಏನನ್ನೂ ಹೇಳದೆ ಹಾಗೆಯೇ ಪೋನ್ ಕಟ್ ಮಾಡಿದ್ದಾಳೆ. ನಮ್ಮ ಮುಂದೆ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವ ನಾಟಕ ಆಡಿದ ಪ್ರಮೋದ್ ಆಸ್ತಿ ಆಸೆಗೆ ಕೊಲೆ ಮಾಡಿದ್ದಾನೆ ಅಂತ ತಾಯಿ ಆರೋಪಿಸಿದ್ದಾರೆ. ಇದರ ಜೊತೆ ಜಾತಿ ನಿಂದಿಸಿ ಕಿರುಕುಳ ಕೊಟ್ಟ ಅತ್ತೆ ಹಾಗೂ ನಾದಿನಿಗೂ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.
302 ಕೇಸ್ ಬುಕ್ ಮಾಡಿದ ಪೊಲೀಸರು: ವಿಜಯನಗರ ಪೊಲೀಸ್ ಠಾಣೆಯಲ್ಲಿ ಅಶ್ವಿನಿ ಮಿಸ್ಸಿಂಗ್ ಕಂಪ್ಲೆಂಟ್ ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಗಂಡ ಪ್ರಮೋದ್ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ತಪ್ಪೊಪ್ಪೊಕೊಂಡ ಆಸಮಿಯನ್ನು ಜೈಲಿಗಟ್ಟಲಾಗಿದೆ.