ಬೆಂಗಳೂರು: ತಲೆಮರೆಸಿಕೊಂಡಿದ್ದ ರೌಡಿ ಕಡಲೆಕಾಯಿ ಪರಿಷೆಗೆ ಬಂದು ಸಿಕ್ಕಿಬಿದ್ದ..!

By Kannadaprabha NewsFirst Published Nov 24, 2022, 10:00 AM IST
Highlights

ಕೊಲೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿ ಅರೆಸ್ಟ್‌ 

ಬೆಂಗಳೂರು(ನ.24): ಕೊಲೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿಯೊಬ್ಬ ಬಸವನಗುಡಿಯ ಕಡಲೆಕಾಯಿ ಪರಿಷೆ ನೋಡಲು ಬಂದು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹೊಸಕೆರೆಹಳ್ಳಿ ನಿವಾಸಿ ಪ್ರತ್ವಿಕ್‌ (21) ಬಂಧಿತ ರೌಡಿ. 2019ರ ನವೆಂಬರ್‌ 19ರಂದು ಬಸವನಗುಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳಾದ ಅಭಿಷೇಕ್‌ ಮತ್ತು ಪ್ರತ್ವಿಕ್‌ ಸೇರಿಕೊಂಡು ಅಭಿಷೇಕ್‌ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಬಸವನಗುಡಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಪಟ್ಟಿಸಲ್ಲಿಸಲಾಗಿತ್ತು.

ಜಾಮೀನು ಪಡೆದು ಹೊರ ಬಂದಿದ್ದ ಆರೋಪಿ ಪ್ರತ್ವಿಕ್‌, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ನ್ಯಾಯಾಲಯವು ನಾಲ್ಕು ಬಾರಿ ಜಾಮೀನು ರಹಿತ ವಾರೆಂಟ್‌ ಹೊರಡಿಸಿದ್ದರೂ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ಆರೋಪಿಯ ಬಂಧನಕ್ಕೆ ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು.

ಬೆಂಗ್ಳೂರಲ್ಲಿ ವೇಶ್ಯಾವಾಟಿಕೆ ದಂಧೆ: ಮಹಿಳೆ ಸೇರಿ ಮೂವರ ಬಂಧನ

ಬಸವನಗಡಿಯ ದೊಡ್ಡಗಣಪತಿ ದೇವಸ್ಥಾನದ ಬಳಿ ನಡೆಯುವ ಕಡಲೆಕಾಯಿ ಪರಿಷೆಗೆ ಪ್ರತಿ ವರ್ಷ ಸಾವಿರಾರು ಜನ ಬರುತ್ತಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ವಾಗಿ ಪೊಲೀಸ್‌ ಬಂದೋಬಸ್‌್ತ ಏರ್ಪಡಿಸಲಾಗುತ್ತದೆ. ಅದರಂತೆ ಈ ಬಾರಿಯೂ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಅಪರಾಧ ವಿಭಾಗದ ಪೊಲೀಸ್‌ ಸಿಬ್ಬಂದಿ ಮಫ್ತಿಯಲ್ಲಿ ಪರಿಷೆಗೆ ಬರುವ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕಣ್ಣಿಟ್ಟಿದ್ದರು. ಅದರಂತೆ ಆರೋಪಿ ಪ್ರತ್ವಿಕ್‌ ಕಡಲೆಕಾಯಿ ಪರಿಷೆಗೆ ಬಂದಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!