ಆರೋಪಿಗಳ ತೀವ್ರ ವಿಚಾರಣೆ, ಕಂಪ್ಯೂಟರ್ ಸೇರಿದಂತೆ ಮಹತ್ವದ ದಾಖಲೆ ಜಪ್ತಿ, ಪ್ರಕರಣ ಸಂಬಂಧ ಈವರೆಗೆ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಸೇರಿದಂತೆ ಐವರನ್ನು ಬಂಧನ
ಬೆಂಗಳೂರು(ನ.24): ಮತದಾರರ ಮಾಹಿತಿ ಕಳವು ಪ್ರಕರಣದ ತನಿಖೆ ಚುರುಕುಗೊಳಿಸಿರುವ ಹಲಸೂರು ಗೇಟ್ ಠಾಣೆ ಪೊಲೀಸರು, ಬುಧವಾರ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ನಿವಾಸದ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ರವಿಕುಮಾರ್ ವಿಚಾರಣೆ ತೀವ್ರಗೊಳಿಸಿರುವ ಪೊಲೀಸರು, ನ್ಯಾಯಾಲಯದಿಂದ ಸಚ್‌ರ್ ವಾರೆಂಟ್ ಪಡೆದು ಆರೋಪಿಯ ಮಲ್ಲೇಶ್ವರದ ನಿವಾಸದ ಮೇಲೆ ದಾಳಿ ನಡೆಸಿ ಎರಡು ಕಂಪ್ಯೂಟರ್ ಸೇರಿದಂತೆ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ಪ್ರಕರಣ ಸಂಬಂಧ ಈವರೆಗೆ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಸೇರಿದಂತೆ ಐವರನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ವೇಳೆ ಸಿಕ್ಕಿರುವ ಲ್ಯಾಪ್‌ಟಾಪ್, ಹಾರ್ಡ್ ಡಿಕ್ಸ್ ಗಳನ್ನು ತೆರೆದು ಮಾಹಿತಿ ಸಂಗ್ರಹಿಸಲ ಸಿಐಡಿ ಸೈಬರ್ ಮತ್ತು ಟೆಕ್ನಿಕಲ್ ಸೆಲ್ ಮೊರೆ ಹೋಗಲು ಪೊಲೀಸರು ತೀರ್ಮಾನಿಸಿದ್ದಾರೆ. ಈಗಾಗಲೇ ಆರೋಪಿಗಳ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳಲ್ಲಿ ಡಿಲೀಟ್ ಮಾಡಿರುವ ದತ್ತಾಂಶವನ್ನು ರೀಟ್ರೀವ್ ಮಾಡಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ದತ್ತಾಂಶ ರೀಟ್ರೀವ್ ಮಾಡಿದರೆ, ಮಹತ್ವದ ಮಾಹಿತಿ ಲಭ್ಯವಾಗಿ ಪ್ರಕರಣಕ್ಕೆ ಪ್ರಮುಖ ತಿರುವು ಸಿಗಲಿದೆ.
ರಾಜ್ಯಾದ್ಯಂತ ಮತದಾರರ ವಿವರಕ್ಕೆ 'ಚಿಲುಮೆ' ಕನ್ನ!
ಮತದಾರರ ಮಾಹಿತಿ ಕಳವು ಸಂಬಂಧ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು, ಮತದಾರರ ಮಾಹಿತಿ ಸಂಗ್ರಹ ಸಂಬಂಧ ಖಾಸಗಿ ವ್ಯಕ್ತಿಗಳನ್ನು ಬ್ಲಾಕ್ ಮಟ್ಟದ ಅಧಿಕಾರಿ(ಬಿಎಲ್‌ಓ)ಗಳಾಗಿ ನೇಮಕಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ ಅಥವಾ ಹಿರಿಯ ಅಧಿಕಾರಿಗಳು ನೇಮಕಗೊಳಿಸಲು ಅಧಿಕಾರವಿದೆಯೇ? ಚುನಾವಣಾ ಆಯೋಗದ ನಿಯಮಗಳು ಏನು ಹೇಳುತ್ತವೆ. ಬಿಬಿಎಂಪಿ ನಿಯಮಗಳಲ್ಲಿ ಏನಿದೆ ಎಂಬುದರ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಠಾಣೆಗೆ ಹೆಚ್ಚುವರಿ ಆಯುಕ್ತರ ಭೇಟಿ
ಮತದಾರರ ಮಾಹಿತಿ ಕಳವು ಪ್ರಕರಣ ಸಂಬಂಧ ತನಿಖೆ ಕೈಗೊಂಡಿರುವ ಹಲಸೂರು ಗೇಟ್ ಠಾಣೆಗೆ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಬುಧವಾರ ಭೇಟಿ ನೀಡಿ ಸಭೆ ನಡೆಸಿದರು. ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ಸೇರಿದಂತೆ ತನಿಖಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಪ್ರಕರಣ ಸಂಬಂಧ ಈವರೆಗಿನ ತನಿಖೆಯ ಪ್ರಗತಿ, ಆರೋಪಿಗಳ ವಿಚಾರಣೆ ವೇಳೆ ಸಿಕ್ಕಿ ಮಾಹಿತಿ ಸೇರಿದಂತೆ ಮುಂದಿನ ಹಂತದ ತನಿಖೆ ಬಗ್ಗೆ ಸಂದೀಪ್ ಪಾಟೀಲ್ ಮಾಹಿತಿ ಪಡೆದಿದ್ದಾರೆ.
ಇಆರ್‌ಓ, ಎಇಆರ್‌ಓಗಳ ವಿಚಾರಣೆ
ಚಿಲುಮೆ ಸಂಸ್ಥೆಯ ಸಿಬ್ಬಂದಿ ನಕಲಿ ಗುರುತಿನ ಚೀಟಿ ಬಳಸಿಕೊಂಡು ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹಿಸಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಪೊಲೀಸರು ನಗರದ ಮತಕ್ಷೇತ್ರಗಳ ಮತದಾರರ ನೋಂದಣಿ ಅಧಿಕಾರಿ(ಇಆರ್‌ಓ) ಮತ್ತು ಸಹಾಯಕ ಮತದಾರರ ನೋಂದಣಿ ಅಧಿಕಾರಿ(ಎಇಆರ್‌ಓ)ಗಳಿಗೆ ನೋಟಿಸ್ ನೀಡಿ ವಿಚಾರಣೆ ಮಾಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈವರೆಗೆ ಸುಮಾರು 45 ಇಆರ್‌ಓ ಹಾಗೂ ಎಇಆರ್‌ಓಗಳ ವಿಚಾರಣೆ ಮಾಡಿದ್ದಾರೆ.