ಮಹಾರಾಷ್ಟ್ರದಲ್ಲಿ ಎನ್‌ಸಿಬಿ ಭರ್ಜರಿ ಬೇಟೆ ನಡೆಸಿದ್ದು, 5 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದೆ. ಅಲ್ಲದೆ, ಮೂವರು ಅಧಿಕಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ತಿಳಿದುಬಂದಿದೆ.
ಮಹಾರಾಷ್ಟ್ರ ರಾಜಧಾನಿ ಮುಂಬೈ ಮತ್ತು ನೆರೆಯ ರಾಯಗಢದಲ್ಲಿ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (Narcotics Control Bureau) 3 ಕಾರ್ಯಾಚರಣೆಗಳನ್ನು ನಡೆಸಿದ್ದು, ಒಟ್ಟು 5 ಕೋಟಿ ರೂಪಾಯಿ ಮೌಲ್ಯದ ವಿವಿಧ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ. ಅಲ್ಲದೆ, ಮೂವರು ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ಮಾಹಿತಿ ನೀಡಿದ್ದಾರೆ.
ನಿರ್ದಿಷ್ಟ ಮಾಹಿತಿಯ ಮೇರೆಗೆ ಎನ್‌ಸಿಬಿಯ ಮುಂಬೈ ವಲಯ ಘಟಕವು ಕಳೆದ ಮಂಗಳವಾರ ಮುಂಬೈನ ವಿದೇಶಿ ಅಂಚೆ ಕಚೇರಿಯಿಂದ (Foreign Post Office) ಕೊರಿಯರ್ ಪಾರ್ಸೆಲ್‌ನಲ್ಲಿ 870 ಗ್ರಾಂ ಹೈಡ್ರೋಪೋನಿಕ್ ಗಾಂಜಾ (Hydrophonic Weed) ಅನ್ನು ವಶಪಡಿಸಿಕೊಂಡಿತ್ತು. ನಾಗ್ಪುರ ಮೂಲದವರಿಗಾಗಿ ಈ ಪಾರ್ಸೆಲ್ ಅನ್ನು ಅಮೆರಿಕದಿಂದ ಕಳುಹಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ಅಮಿತ್ ಶಾ ಎದುರು 30 ಸಾವಿರ ಕೇಜಿ ಡ್ರಗ್ಸ್ ನಾಶ
ಇನ್ನು, ಈ ಪ್ರಕರಣದ ತನಿಖೆ ನಡೆಯುತ್ತಿರುವಾಗ, ಶುಕ್ರವಾರ ಮುಂಬೈನಲ್ಲಿ ಕೊರಿಯರ್ ಪಾರ್ಸೆಲ್‌ನಲ್ಲಿ ಸುಮಾರು 4.95 ಕೆಜಿ ಮೆಥಾಕ್ವಾಲೋನ್ ಅನ್ನು ಸಾಗಿಸಲಾಗುತ್ತಿರುವ ಬಗ್ಗೆ ಎನ್‌ಸಿಬಿ ಮಾಹಿತಿ ಪಡೆದುಕೊಂಡಿದೆ. ಬಳಿಕ, ಈ ಬಗ್ಗೆ ಹುಡುಕಾಟ ನಡೆಸಿದ ಎನ್‌ಸಿಬಿ ಈ ಪಾರ್ಸೆಲ್ ಅನ್ನು ವಶಪಡಿಸಿಕೊಂಡಿದ್ದು, ಅದನ್ನು ನಾಗ್ಪುರದಿಂದ ನ್ಯೂಜಿಲೆಂಡ್‌ಗೆ ಕಳುಹಿಸಲು ಬುಕ್ ಮಾಡಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ಎರಡೂ ಕೊರಿಯರ್ ಪಾರ್ಸೆಲ್‌ಗಳಿಗೆ ನಾಗ್ಪುರ ಸಾಮಾನ್ಯ ಸ್ಥಳವಾಗಿರುವುದರಿಂದ, ಎರಡೂ ಪ್ರಕರಣಗಳ ಹೆಚ್ಚಿನ ತನಿಖೆಗಾಗಿ ಎನ್‌ಸಿಬಿ ತಂಡವವೊಂದನ್ನು ಮಹಾರಾಷ್ಟ್ರದ ನಾಗ್ಪುರ ನಗರಕ್ಕೆ ಕಳುಹಿಸಲಾಗಿದೆ ಎಂದೂ ಅಧಿಕಾರಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಸಿಂಡಿಕೇಟ್‌ಗಳನ್ನು ಗುರುತಿಸಲು ವಿವಿಧ ಅಂಶಗಳನ್ನು ವಿಶ್ಲೇಷಿಸಲಾಗುತ್ತಿದೆ ಮತ್ತು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇನ್ನು, ಮೂರನೇ ಕಾರ್ಯಾಚರಣೆಯಲ್ಲಿ, ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಬಳಿಯ ರಾಯಗಢ ಜಿಲ್ಲೆಯ ಕರ್ಜತ್‌ನಲ್ಲಿ ಭಾನುವಾರ ಮಧ್ಯರಾತ್ರಿ ಎನ್‌ಸಿಬಿ ಅಂತರ-ರಾಜ್ಯ ಮಾದಕವಸ್ತು ಕಳ್ಳಸಾಗಣೆ ಸಿಂಡಿಕೇಟ್ ಅನ್ನು ಭೇದಿಸಿತು ಎಂದು ಅವರು ಹೇಳಿದರು. ಸಕ್ರಿಯ ಸಿಂಡಿಕೇಟ್‌ನಿಂದ ಬೃಹತ್ ಪ್ರಮಾಣದ ಡ್ರಗ್ಸ್ ಸಾಗಿಸುವ ಸಾಧ್ಯತೆಯ ಬಗ್ಗೆ ಏಜೆನ್ಸಿಯು ಮಾಹಿತಿಯನ್ನು ಹೊಂದಿದೆ ಎಂದೂ ಅವರು ಹೇಳಿದರು. ಅದರಂತೆ, ಎನ್‌ಸಿಬಿ ಕರ್ಜತ್ ಬಳಿ ವಾಹನವನ್ನು ಅಡ್ಡಗಟ್ಟಿದೆ. ಆ ವಾಹನದಲ್ಲಿ ಏನಿದೆ ಎಂದು ಕೇಳಿದಾಗ, ವಾಹನದ ಚಾಲಕ ತೃಪ್ತಿದಾಯಕ ಉತ್ತರವನ್ನು ನೀಡಲಿಲ್ಲವಾದ್ದರಿಂದ ಎನ್‌ಸಿಬಿ ಅಧಿಕಾರಿಗಳು ಆ ವಾಹನವನ್ನು ಪರಿಶೀಲಿಸಿದ್ದಾರೆ. ಆ ವೇಳೆ ವಾಹನದೊಳಗೆ ಸೃಷ್ಟಿಸಿದ್ದ ಸುಳ್ಳು ಕುಳಿಗಳಲ್ಲಿ 88 ಕೆಜಿ ಉತ್ತಮ ಗುಣಮಟ್ಟದ ಗಾಂಜಾವನ್ನು ಅವರು ವಶಪಡಿಸಿಕೊಂಡಿದ್ದಾರೆ ಎಂದೂ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪಂಜಾಬ್ ಪೊಲೀಸರಿಂದ 7 ಲಕ್ಷ ಡ್ರಗ್ಸ್ ಕ್ಯಾಪ್ಸೂಲ್ ವಶ
ವಾಹನದ ಚಾಲಕನಿಗೆ ಮಾರ್ಗದರ್ಶಕರಾಗಿದ್ದ ಇಬ್ಬರ ಬಂಧನ
ಈ ಮಧ್ಯೆ, 88 ಕೆಜಿ ಗಾಂಜಾ ವಶಪಡಿಸಿಕೊಂಡ ವಾಹನದ ಚಾಲಕನನ್ನು ಎಲ್ಲಿಗೆ ಹೋಗಬೇಕೆಂದು ಮಾರ್ಗದರ್ಶನ ಮಾಡುವ ಕೆಲಸವನ್ನು ಹಾಗೂ ಆ ವಾಹನ ನಿಗದಿತ ಸ್ಥಳ ತಲುಪಿದ ಬಳಿಕ ಅದನ್ನ ಸ್ವೀಕರಿಸುವ ಕೆಲಸವನ್ನು ಇಬ್ಬರಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಆ ಇಬ್ಬರನ್ನು ಎನ್‌ಸಿಬಿ ತಂಡವು ಹೆದ್ದಾರಿ ಬದಿಯ ಉಪಾಹಾರ ಗೃಹದಿಂದ ಬಂಧಿಸಿದೆ ಎಂದು ಹೇಳಿದೆ. ಆಂಧ್ರಪ್ರದೇಶದಿಂದ ಬಂದ ಆ ಉತ್ತಮ ಗುಣಮಟ್ಟದ ಗಾಂಜಾವನ್ನು ಮುಂಬೈ ಮತ್ತು ಉಪನಗರ ಪ್ರದೇಶಗಳಲ್ಲಿನ ಡ್ರಗ್ ಪೆಡ್ಲರ್‌ಗಳಿಗೆ ಮತ್ತಷ್ಟು ವಿತರಿಸಲು ಉದ್ದೇಶಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ವ್ಯಕ್ತಿಗಳು ಅನುಭವಿ ದಂಧೆಕೋರರಾಗಿದ್ದು, 4 ವರ್ಷಗಳಿಂದ ಇವರು ಅಕ್ರಮ ಮಾದಕ ವ್ಯಸನ ಉದ್ಯೋಗದಲ್ಲಿದ್ದಾರೆ ಎಂದು ಅವರು ಹೇಳಿದರು. ಮಾಲ್ ಅನ್ನು ಅವರು ಡೆಲಿವರಿ ಮಾಡಲು ಪ್ಲ್ಯಾನ್ ಮಾಡುವಾಗ ತಮ್ಮ ಸಂಪರ್ಕ ಸಂಖ್ಯೆಗಳನ್ನು ಮಾತ್ರವಲ್ಲದೆ ವಾಹನದ ನಂಬರ್ ಪ್ಲೇಟ್‌ಗಳನ್ನು ಸಹ ಎನ್‌ಸಿಬಿಯಿಂದ ಭೌತಿಕ ಟ್ರ್ಯಾಕಿಂಗ್ ತಪ್ಪಿಸಲು ಬಳಸುತ್ತಿದ್ದರು ಎಂದು ಅಧಿಕಾರಿ ಹೇಳಿದ್ದಾರೆ. ಅಲ್ಲದೆ, ಉಳಿದ ಜಾಲವನ್ನು ಕೆಡವಲು ಇತರ ಡ್ರಗ್ ಪೆಡ್ಲರ್‌ಗಳು, ಪೂರೈಕೆ ಲಿಂಕ್‌ಗಳು ಮತ್ತು ಪ್ರಮುಖ ಸಹಚರರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮೂವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದೂ ಮುಂಬೈನಲ್ಲಿ ಮಾದಕ ವಸ್ತು ನಿಯಂತ್ರಣ ಬ್ಯೂರೋ ಅಧಿಕಾರಿಗಳು ತಿಳಿಸಿದ್ದಾರೆ.