
ಭೋಪಾಲ್: ಲೀವಿಂಗ್ ಪಾರ್ಟನರ್ ಓರ್ವ ತನ್ನ ಸಂಗಾತಿ ಹಾಗೂ ಆಕೆಯ ಮೂರು ವರ್ಷದ ಮಗಳನ್ನು ನಿರ್ದಯವಾಗಿ ಕೊಂದಂತಹ ಆಘಾತಕಾರಿ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ನಡೆದಿದೆ. ತಾಯಿ ಮಗಳು ಇಬ್ಬರನ್ನು ಕೊಲೆ ಮಾಡಿದ ಮಹಿಳೆಯ ಲೀವೀಂಗ್ ಟುಗೆದರ್ ಸಂಗಾತಿ ಬಳಿಕ ರಾತ್ರಿಯಿಡಿ ಶವದೊಂದಿಗೆ ದಿನ ಕಳೆದಿದ್ದಾನೆ. ಗಂಜ್‌ಬಸೊದಾ ಪ್ರದೇಶದ ವಾರ್ಡ್ ನಂಬರ್ 8 ರಲ್ಲಿ ಈ ಘಟನೆ ನಡೆದಿದೆ. ಕೊಲೆ ಮಾಡಿದ ಬಳಿಕ ಆತ ಮಹಿಳೆಯ ಲಿಪ್‌ಸ್ಟಿಕ್ ಬಳಸಿ ಕೊಲೆಗೆ ಕಾರಣ ಏನು ಎಂಬುದನ್ನು ಮನೆಯ ಗೋಡೆಯ ಮೇಲೆ ಬರೆದಿದ್ದಾನೆ.
ಗಂಡನಿಂದ ದೂರಾಗಿ ಬದುಕುತ್ತಿದ್ದ ಮಹಿಳೆಯ ಜೊತೆ ಲೀವ್ ಇನ್ ರಿಲೇಷನ್‌ಶಿಪ್
ಪೊಲೀಸರ ಪ್ರಕಾರ 36 ವರ್ಷದ ರಾಮ್ಸಕಿ ಕುಶ್ವಾಹಾ ಅವರು ಗಂಡನಿಂದ ದೂರಾಗಿದ್ದು, ಕೆಲ ತಿಂಗಳಿನಿಂದ ರಾಜಾ ಆಲಿಯಾಸ್ ಅನುಜ್ ವಿಶ್ವಕರ್ಮಾ ಎಂಬಾತನ ಜೊತೆ ಸಹಜೀವನ ನಡೆಸುತ್ತಿದ್ದರು. ಇವರಿಬ್ಬರ ಮಧ್ಯೆ ಆಗಾಗ ಜಗಳಗಳಾಗುತ್ತಿದ್ದವು. ಆದರೆ ಇವರ ಈ ಕಿತ್ತಾಟ ಎರಡು ಕೊಲೆಯೊಂದಿಗೆ ಅಂತ್ಯವಾಗಬಹುದು ಎಂದು ಯಾರು ಭಾವಿಸಿರಲಿಲ್ಲ ಎಂದು ನೆರೆಹೊರೆಯ ಹೇಳಿದ್ದಾಗಿ ಪೊಲೀಸರು ಹೇಳಿದ್ದಾರೆ.
ಲಿಪ್‌ಸ್ಟಿಕ್‌ನಿಂದ ಗೋಡೆಯ ಮೇಲೆ ಬರೆದಿದ್ದೇನು?
ಕೊಲೆ ಮಾಡಿದ ಬಳಿಕ ಆರೋಪಿ ಘಟನಾ ಸ್ಥಳದಿಂದ ಪರಾರಿಯಾಗುವ ಬದಲು ಮಹಿಳೆ ರಾಮ್ಸಕಿ ಹಾಗೂ ಆಕೆಯ ಮಗಳು ಮಾನ್ವಿ ಶವದ ಜೊತೆಯೇ ಅದೇ ಮನೆಯಲ್ಲಿ ರಾತ್ರಿ ಕಳೆದಿದ್ದಾನೆ. ಅಲ್ಲದೇ ಗೋಡೆಯ ಮೇಲೆ ಲಿಪ್‌ಸ್ಟಿಕ್‌ನಿಂದ, ಆಕೆಯನ್ನು ನಾನು ಕೊಂದೆ, ಆಕೆ ನನ್ನ ಜೊತೆ ಮಲಗಿದಳು, ಆಕೆ ಮತ್ತೊಬ್ಬನೊಂದಿಗೂ ಸಂಬಂಧ ಹೊಂದಿದ್ದಳು ಎಂದು ಆತ ಬರೆದುಕೊಂಡಿದ್ದಾನೆ.
ಕೊಲೆ ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಗೋಡೆಯ ಮೇಲೆ ಲಿಪ್‌ಸ್ಟಿಕ್‌ನಲ್ಲಿ ಬರೆದಿದ್ದ ತಪ್ಪೊಪ್ಪಿಗೆಯನ್ನು ನೋಡಿ ಬೆಚ್ಚಿದ್ದಾರೆ. ಇದೇ ಪೊಲೀಸರಿಗೆ ಹಂತಕನ ಬಗ್ಗೆ ಮೊದಲ ಸುಳಿವು ನೀಡಿದೆ. ಘಟನಾ ಸ್ಥಳಕ್ಕೆ ಬಂದ ವಿಧಿ ವಿಜ್ಞಾನ ವಿಭಾಗದ ಅಧಿಕಾರಿಗಳು ಕೊಲೆಯಾದ ಸ್ವಲ್ಪ ಹೊತ್ತಿನಲ್ಲೇ ಆರೋಪಿ ಲಿಪ್‌ಸ್ಟಿಕ್‌ನಿಂದ ಈ ಬರಹವನ್ನು ಗೋಡೆಯ ಮೇಲೆ ಬರೆದಿದ್ದಾನೆ ಎಂಬುದನ್ನು ಖಚಿತಪಡಿಸಿದ್ದಾರೆ. ಅಲ್ಲದೇ ಆರೋಪಿಯ ಈ ಬರಹ ಆತನ ಪತ್ತೆಗೆ ಪೊಲೀಸರಿಗೆ ಸಹಾಯ ಮಾಡಿದೆ.
ಘಟನೆಗೆ ಸಂಬಂಧಿಸಿದಂತೆ ಹೆಚ್ಚುವರಿ ಎಸ್‌ಪಿ ಪ್ರಶಾಂತ್ ಚೌಬೆ ಹೇಳಿಕೆ ನೀಡಿದ್ದು, ಗಂಡನಿಂದ ಬೇರಾಗಿ ವಾಸ ಮಾಡುತ್ತಿದ್ದ 36 ವರ್ಷದ ಮಹಿಳೆ ಅನುಜ್ ವಿಶ್ವಕರ್ಮ ಎಂಬಾತನ ಜೊತೆ ಲೀವಿಂಗ್ ರಿಲೇಷನ್‌ಶಿಪ್‌ನಲ್ಲಿ ಇದ್ದಳು. ನಮ್ಮ ಪ್ರಾಥಮಿಕ ತನಿಖೆಯಲ್ಲಿ ತಾಯಿ ಮಗಳು ಇಬ್ಬರನ್ನು ಉಸಿರುಕಟ್ಟಿಸಿ ಕೊಲಲ್ಲಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಅನುಜ್ ವಿಶ್ವಕರ್ಮನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ