ಮಗ ಆತ್ಮಹತ್ಯೆ: ಕಾರಿಗೆ ತಲೆಕೊಟ್ಟ ತಾಯಿ..!

By Kannadaprabha NewsFirst Published Aug 19, 2021, 11:41 AM IST
Highlights

*  ಮಗನ ಸಾವಿನಿಂದ ಆಘಾತಗೊಂಡಿದ್ದ ತಾಯಿ
*  ನೇಣು ಬಿಗಿದು ಆತ್ಮಹತ್ಯೆ ಯತ್ನಿಸಿದ್ದ ಮಗ
*  ಈ ಸಂಬಂಧ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು 
 

ಬೆಂಗಳೂರು(ಆ.19): ತನ್ನ ಸ್ನೇಹಿತರ ಬೈಕ್ ಕಳ್ಳತನದ ಸುಳ್ಳು ಆರೋಪದಿಂದ ಬೇಸರಗೊಂಡು ಮಗ ಆತ್ಮಹತ್ಯೆಗೆ ಶರಣಾದರೆ, ಮಗನ ಸಾವಿನಿಂದ ನೊಂದು ರಸ್ತೆಗೆ ಹಠತ್ತಾಗಿ ನುಗ್ಗಿ ಕಾರಿಗೆ ತಲೆಕೊಟ್ಟು ಆತನ ತಾಯಿ ಪ್ರಾಣತ್ಯಾಗ ಮಾಡಿದ ಮನಕಲುವ ಘಟನೆ ವಿಜಯನಗರದಲ್ಲಿ ನಡೆದಿದೆ.

ಮಾರೇನಹಳ್ಳಿ ಸಮೀಪದ ಎಂ.ಸಿ.ಲೇಔಟ್‌ನ ಮೋಹನ್ ಗೌಡ (20) ಹಾಗೂ ಆತನ ತಾಯಿ ಲೀಲಾವತಿ (45) ಮೃತ ದುರ್ದೈವಿಗಳು. ಮನೆಯಲ್ಲಿ ಮಂಗಳವಾರ ನೇಣು ಬಿಗಿದು ಆತ್ಮಹತ್ಯೆ ಯತ್ನಿಸಿದ್ದ ಮಗನನ್ನು ವಿಜಯನಗರದಲ್ಲಿ ಖಾಸಗಿ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ. ಇದರಿಂದ ಆಘಾತಕ್ಕೊಳಗಾದ ಲೀಲಾವತಿ, ಆಸ್ಪತ್ರೆಯಿಂದ ಕಣ್ಣೀರು ಸುರಿಸುತ್ತ ದಿಢೀರಾಗಿ ರಸ್ತೆಗೆ ನುಗ್ಗಿ ಕಾರಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮುಂಡಗೋಡ: ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ವ್ಯಕ್ತಿ ಆತ್ಮಹತ್ಯೆ

ತಂದೆ-ತಾಯಿ ಬುದ್ಧಿವಾದ: 

ಹಲವು ವರ್ಷಗಳಿಂದ ಮಾರೇನಹಳ್ಳಿಯಲ್ಲಿ ತಮ್ಮ ಇಬ್ಬರು ಮಕ್ಕಳ ಜತೆ ಲೋಕೇಶ್ ಹಾಗೂ ಲೀಲಾವತಿ ದಂಪತಿ ನೆಲೆಸಿದ್ದು, ಮನೆ ಸಮೀಪ ಲೋಕೇಶ್ ದಿನಸಿ ಅಂಗಡಿ ಇಟ್ಟಿದ್ದಾರೆ. ಖಾಸಗಿ ಕಾಲೇಜಿನಲ್ಲಿ ಪ್ರಥಮ ಬಿಕಾಂನಲ್ಲಿ ಓದುತ್ತಿದ್ದ ಮೋಹನ್, ಬೈಕ್ ವಿಚಾರವಾಗಿ ತನ್ನ ಸ್ನೇಹಿತರ ಜತೆ ಜಗಳ ಮಾಡಿಕೊಂಡಿದ್ದ. ಈ ಸಂಗತಿ ತಿಳಿದು ಆತನಿಗೆ ತಾಯಿ ಬುದ್ಧಿವಾದ ಹೇಳಿದ್ದರು. ಇದರಿಂದ  ಬೇಸರಗೊಂಡ ಮೋಹನ್, ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಯತ್ನಿಸಿದ್ದಾನೆ. ತಕ್ಷಣವೇ ಆತನನ್ನು ರಕ್ಷಿಸಿದ ಪೋಷಕರು, ವಿಜಯನಗರದ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆದಲ್ಲೇ ಆತ ಕೊನೆಯುಸಿರೆಳೆದಿದ್ದಾನೆ.

ಮಗನ ಸಾವಿನಿಂದ ಆಘಾತಗೊಂಡು ಜೋರಾಗಿ ಚೀರುತ್ತ ಲೀಲಾವತಿ ಅವರು, ಆಸ್ಪತ್ರೆಯಿಂದ ಹೊರಗೆ ಬಂದಿದ್ದಾರೆ. ಆಗ ಅವರನ್ನು ಸಮಾಧಾನಪಡಿಸಿ ಪಾದಚಾರಿ ಮಾರ್ಗದಲ್ಲಿ ಸಂಬಂಧಿಕರು ಕೂರಿಸಿದ್ದರು. ಆದರೆ ಮಗನ ಹೋದ ಮೇಲೆ ನಾನು ಬದುಕುವುದಿಲ್ಲ. ನಾನು ಸಾಯುತ್ತೇನೆ ಎನ್ನುತ್ತ ರಸ್ತೆಗೆ ಹೋಗಿ ವಾಹನಗಳಿಗೆ ಸಿಲುಕಲು ಅವರು ಯತ್ನಿಸಿದ್ದರು. ಆ ವೇಳೆ ಅವರನ್ನು ಸಂತೈಸಲು ಕುಟುಂಬದವರು ಯತ್ನಿಸಿ ವಿಫಲವಾಗಿದ್ದಾರೆ. ಈ ಹಂತದಲ್ಲಿ ಹಠಾತ್ತಾಗಿ ಅವರಿಗೆ ಕಾರು ಗುದ್ದಿದೆ ಎಂದು ಪೊಲೀಸರು ಹೇಳಿದ್ದಾರೆ.

ರಸ್ತೆಗೆ ದಿಢೀರ್ ಬಂದ ಲೀಲಾವತಿ ಅವರನ್ನು ರಕ್ಷಿಸಲು ಚಾಲಕ ಯತ್ನಿಸಿದರೂ ಸಾಧ್ಯವಾಗಿಲ್ಲ. ಕಾರು ಡಿಕ್ಕಿಯಾದ ರಭಸಕ್ಕೆ ಕೆಳಗೆ ಬಿದ್ದ ಅವರ ಮೇಲೆ ಚಕ್ರಗಳು ಹರಿದಿವೆ. ಘಟನೆಯಲ್ಲಿ ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!