ದಾಬಸ್‍ಪೇಟೆ ಬಳಿ ನಾಪತ್ತೆಯಾಗಿದ್ದ ಯಮುನಾಳ ತಲೆಬುರುಡೆ ಪತ್ತೆ! ಸಿಸಿಟಿವಿಯಲ್ಲಿ ಸೆರೆಯಾಯ್ತು ಕೊನೆಯ ದೃಶ್ಯ !

Kannadaprabha News   | Kannada Prabha
Published : Apr 17, 2026, 07:56 AM IST
Missing Yamunas skull found near Dabaspet Last scene captured on CCTV

ಸಾರಾಂಶ

ದಾಬಸ್‍ಪೇಟೆ ಬಳಿ ನಾಪತ್ತೆಯಾಗಿದ್ದ ಯಮುನಾ ಎಂಬ ಮಹಿಳೆಯ ತಲೆಬುರುಡೆ ಮತ್ತು ಮೂಳೆಗಳು ಪತ್ತೆಯಾಗಿವೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದು, ಸಿಸಿ ಕ್ಯಾಮೆರಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ವ್ಯಕ್ತಿಗಾಗಿ ಬಲೆ ಬೀಸಿದ್ದಾರೆ.

ಬುರುಡೆ, ಮೂಳೆ, ಬ್ಯಾಗ್, ಕಂಪನಿಯ ಐಡಿ ಕಾರ್ಡ್ ಪತ್ತೆ । ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ

 ದಾಬಸ್‍ಪೇಟೆ (ಏ.17):  ನಾಪತ್ತೆಯಾಗಿದ್ದ ಮಹಿಳೆಯೊಬ್ಬರ ಕಳೆಬರ ಪತ್ತೆಯಾಗಿರುವ ಘಟನೆ ದಾಬಸ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಕ್ಯಾತ್ಸಂದ್ರದ ಬಸವೇಶ್ವರ ಬಡಾವಣೆಯಲ್ಲಿ ವಾಸವಿದ್ದ ಯಮುನಾ (38) ಮೃತಪಟ್ಟ ಮಹಿಳೆಯಾಗಿದ್ದು, ಹಳೆನಿಜಗಲ್ ಬಳಿಯಿರುವ ರಿಲಯನ್ಸ್ ಕಂಪನಿಯಲ್ಲಿ ಕಳೆದ ಆರೇಳು ತಿಂಗಳುಗಳಿಂದ ಕೆಲಸ ಮಾಡುತ್ತಿದ್ದರು. ಮಹಿಳೆ ಮಲ್ಲಿಕಾರ್ಜುನ್ ಎಂಬುವವರ ಜೊತೆ 19 ವರ್ಷದ ಹಿಂದೆ ವಿವಾಹವಾಗಿದ್ದರು. ಈಕೆಗೆ ಒಬ್ಬ ಗಂಡು ಹಾಗೂ ಒಬ್ಬ ಹೆಣ್ಣು ಮಗಳಿದ್ದಾಳೆ. ಈಕೆಯ ತಲೆಬುರುಡೆ, ಬ್ಯಾಗ್, ಬಟ್ಟೆಯು ಸೋಂಪುರ ಹೋಬಳಿಯ ಹಳೆನಿಜಗಲ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ- 48ರ ರಸ್ತೆಪಕ್ಕದ ಜಮೀನಿನಲ್ಲಿ ಪತ್ತೆಯಾಗಿದೆ.

ಘಟನಾ ಹಿನ್ನೆಲೆ:

ಮೃತ ಯಮುನಾ ಕಳೆದ ಮಾ.21ರಂದು ಕೆಲಸಕ್ಕೆ ಬಂದಿದ್ದು, ನಂತರ ಮನೆಗೆ ವಾಪಾಸ್ಸು ಹೋಗದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಮೃತಳ ಪತಿ ಮಲ್ಲಿಕಾರ್ಜುನ್ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ನಂದಿಹಳ್ಳಿ ಗ್ರಾಮದ ಉಮೇಶ್ ಎಂಬುವವರು ತನ್ನ ಜಮೀನಿನಲ್ಲಿ ದೇವರ ಕಲ್ಲುಗಳಿದ್ದು, ಅದನ್ನು ಪೂಜಿಸಲು ಬಂದಾಗ ತಲೆಬುರುಡೆ ಬಿದ್ದಿರುವುದನ್ನು ಕಂಡಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಲೆಬುರುಡೆ, ಮೂಳೆ, ಬ್ಯಾಗ್, ಬಟ್ಟೆ ಪತ್ತೆ:

ಘಟನಾ ಸ್ಥಳಕ್ಕೆ ದಾಬಸ್‍ಪೇಟೆ ಹಾಗೂ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಘಟನಾ ಸ್ಥಳದಲ್ಲಿ ತಲೆಬುರುಡೆ, ಕಾಲಿನ ಮೂಳೆಗಳು, ಬ್ಯಾಗ್, ವಾಟರ್ ಬಾಟಲ್, ಕಂಪನಿ ಐಡಿ ಕಾರ್ಡ್, ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಪರಿಶೀಲನೆ ನಡೆಸಿದಾಗ ಮಹಿಳೆಯ ಗುರುತು ಪತ್ತೆಯಾಗಿದೆ.

ಅನೈತಿಕ ಸಂಬಂಧದ ಶಂಕೆ:

ಮೃತಳಿಗೆ ಗಂಡನ ತವರೂರಾದ ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿ ಗ್ರಾಮದಲ್ಲಿ ರಾಘವೇಂದ್ರ ಎಂಬಾತನ ಜೊತೆ ಅನೈತಿಕ ಸಂಬಂಧವಿತ್ತು. ಆತನ ಜೊತೆ ಆರೇಳು ವರ್ಷ ಸಂಸಾರ ನಡೆಸಿ ನಂತರ ಗಂಡನ ಮನೆಗೆ ವಾಪಾಸ್ಸು ಬಂದಿದ್ದರು. ಆದಾದ ಮೇಲೂ ರಾಘವೇಂದ್ರ ಈಕೆಗೆ ಮತ್ತೆ ನನ್ನ ಜೊತೆ ಬಂದು ಸಂಸಾರ ನಡೆಸುವಂತೆ ಕಿರುಕುಳ ಕೊಡುವುದಲ್ಲದೆ ನನ್ನ ಜೊತೆ ಬಾರದಿದ್ದರೆ ನಿನ್ನ ಗಂಡ, ಮಕ್ಕಳು ಸೇರಿದಂತೆ ನಿನ್ನನ್ನು ಸಾಯಿಸುತ್ತೇನೆಂದು ಜೀವ ಬೆದರಿಕೆ ಕೂಡ ಹಾಕಿರುವ ಬಗ್ಗೆ ಕುಟುಂಬಸ್ಥರು ಆರೋಪಿಸಿದ್ದಾರೆ.

ಕೊಲೆ ಮಾಡಿರುವ ಶಂಕೆ:

ಮೃತ ಯುಮುನಾ ತನ್ನ ಗಂಡ ಹಾಗೂ ಮಕ್ಕಳೊಂದಿಗೆ ಮಾ.19ರಂದು ಬರ್ತಡೇ ಆಚರಿಸಿಕೊಂಡಿದ್ದರು. ನಂತರ ಮಾ.21ರಂದು ಎಂದಿನಂತೆ ಕೆಲಸಕ್ಕೆ ಬಂದಿದ್ದಾರೆ. ಅಂದು ಸಂಜೆ ಕೆಲಸ ಬಿಟ್ಟಾಗ ಅನೈತಿಕ ಸಂಬಂಧ ಹೊಂದಿದ್ದ ರಾಘವೇಂದ್ರನ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೋಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರಸ್ತೆ ಪಕ್ಕದಲ್ಲೇ ಇರುವ ಜಮೀನಿಗೆ ಇಬ್ಬರೂ ಹೋಗಿದ್ದು ಅಲ್ಲಿ ಮೃತ ಯುಮುನಾ ಹಾಗೂ ರಾಘವೇಂದ್ರನ ನಡುವೆ ಜಗಳವಾಗಿದ್ದು, ಮಾತಿಗೆ ಮಾತು ಬೆಳೆದು ರಾಘವೇಂದ್ರ ಆಕೆಯನ್ನು ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದು, ನಾಪತ್ತೆಯಾಗಿರುವ ರಾಘವೇಂದ್ರನ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಉಪವರಿಷ್ಠಾಧಿಕಾರಿ ವೆಂಕಟೇಶ್ ಪ್ರಸನ್ನ, ಡಿವೈಎಸ್ ಪಿ ಜಗದೀಶ್, ಇನ್ಸ್ ಪೆಕ್ಟರ್ ಗಳಾದ ಭರತ್ ಗೌಡ, ಗಿರೀಶ್, ನರೇಂದ್ರಬಾಬು, ಸಬ್ ಇನ್ಸ್ ಪೆಕ್ಟರ್ ಗಳಾದ ಸಿದ್ದಪ್ಪ, ದಿವ್ಯ, ವಿಧಿವಿಜ್ಞಾನ ತಂಡದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

TCS Love Jihad ಬೇಧಿಸಲು ಟಾಯ್ಲೆಟ್​ ತೊಳೆದ ಪೊಲೀಸರು! ಹಿಂದೂಗಳ ಬುರ್ಖಾ ಸೆಲ್ಫಿ- ಸಿನಿಮಾ ಮೀರಿಸೋ ಸ್ಟೋರಿ
TCS ಕಂಪೆನಿ Love Jihad ರಾಣಿ ನಿದಾ ಖಾನ್​ಗೆ ದೆಹಲಿ ಬಾಂಬ್​ಬ್ಲಾಸ್ಟ್​ ಲಿಂಕ್​? ಏನಿದು ಸ್ಫೋಟಕ ಮಾಹಿತಿ