ಮುಳಬಾಗಿಲಲ್ಲಿ ರಾಮನ ಬ್ಯಾನರ್ ಹರಿದುಹಾಕಿದ ಕಿಡಿಗೇಡಿಗಳು!

By Kannadaprabha News  |  First Published Jan 18, 2024, 2:21 PM IST

ಅಯೋದ್ಯೆಯಲ್ಲಿ ಜ.22 ರಂದು ರಾಮಮಂದಿರ ಉದ್ಘಾಟನೆ ಹಿನ್ನೆಲೆ ಇಡೀ ದೇಶ ರಾಮನ ಜಪದಲ್ಲಿ ಮುಳುಗಿರುವ ಸಂದರ್ಭದಲ್ಲಿ ಹಿಂದೂಪರ ಸಂಘಟನೆಗಳಿಂದ ಅಳವಡಿಸಿದ್ದ ಶ್ರೀರಾಮನ ಬ್ಯಾನರ್‌ ಅನ್ನು ದುಷ್ಕರ್ಮಿಗಳು ಬ್ಲೇಡ್‌ನಿಂದ ಹರಿದು ಹಾಕಿರುವ ಘಟನೆ ಮುಳಬಾಗಿಲು ಪಟ್ಟಣದ ಗುಣಿಗಂಟೆಪಾಳ್ಯದಲ್ಲಿ ಜರುಗಿದೆ.


ಕೋಲಾರ (ಜ.18): ಅಯೋದ್ಯೆಯಲ್ಲಿ ಜ.22 ರಂದು ರಾಮಮಂದಿರ ಉದ್ಘಾಟನೆ ಹಿನ್ನೆಲೆ ಇಡೀ ದೇಶ ರಾಮನ ಜಪದಲ್ಲಿ ಮುಳುಗಿರುವ ಸಂದರ್ಭದಲ್ಲಿ ಹಿಂದೂಪರ ಸಂಘಟನೆಗಳಿಂದ ಅಳವಡಿಸಿದ್ದ ಶ್ರೀರಾಮನ ಬ್ಯಾನರ್‌ ಅನ್ನು ದುಷ್ಕರ್ಮಿಗಳು ಬ್ಲೇಡ್‌ನಿಂದ ಹರಿದು ಹಾಕಿರುವ ಘಟನೆ ಮುಳಬಾಗಿಲು ಪಟ್ಟಣದ ಗುಣಿಗಂಟೆಪಾಳ್ಯದಲ್ಲಿ ಜರುಗಿದೆ.

ವಿವಿಧ ಹಿಂದೂ ಸಂಘಟನೆಗಳಿಂದ ನಗರದಲ್ಲಿ ಅಳವಡಿಸಲಾಗಿದ್ದ ಶ್ರೀರಾಮನ ಬ್ಯಾನರ್ ಅನ್ನು ಕಿಡಿಗೇಡಿಗಳು ಬ್ಲೇಡ್ ನಿಂದ ಹರಿದು ಹಾಕಿರುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು, ಸಂಸದ ಎಸ್.ಮುನಿಸ್ವಾಮಿ, ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Tap to resize

Latest Videos

ರಾಯಚೂರು: ರಾಮಮಂದಿರ ನಿರ್ಮಾಣದಲ್ಲಿ ಕೈಜೋಡಿಸಿದ ಜಾನೇಕಲ್ ಗ್ರಾಮದ ಶಿಲ್ಪಿ ವಿರೇಶ್ ಬಡಿಗೇರ

ಸಿಸಿ ಟಿವಿ ವಿಡಿಯೋ ಆಧರಿಸಿ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು:

ಬ್ಯಾನರ್‌ ಹರಿದು ಹಾಕಿರುವ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಆಧರಿಸಿ ಪೋಲೀಸರು ಇಬ್ಬರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು ಜಹೀರ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬನ ಹೆಸರು ಇನ್ನೂ ತಿಳಿದುಬಂದಿಲ್ಲ. ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ‘ಜೈ ಶ್ರೀರಾಮ್’ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಮಂಗಳವಾರ ತಡ ರಾತ್ರಿ  ಶ್ರೀರಾಮನ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಕಿಡಿಗೇಡಿಗಳು ಬ್ಲೇಡ್‌ನಿಂದ ಕತ್ತರಿಸಿದ್ದು, ಇದು ಉದ್ದೇಶ ಪೂರ್ವಕವಾಗಿಯೋ ಅಥವಾ ಕೋಮುಗಲಭೆ ಸೃಷ್ಟಿಸಲು ಹರಿದು ಹಾಕಿದ್ದಾರೆಯೋ ಎಂಬುದು ಹೆಚ್ಚಿನ ತನಿಖೆಯಿಂದ ಹೊರ ಬರಬೇಕಿದೆ, ಬ್ಯಾನರ್ ಹರಿದಿರುವ ವಿಷಯವು ಸದ್ಯ ಬೂದಿ ಮುಚ್ಚಿದ ಕೆಂಡದಂತಿದ್ದು, ಮುಳಬಾಗಿಲು ಪಟ್ಟಣದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು, ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿದೆ.

ಕಸಾಯಿಖಾನೆಗೆ ಮುತ್ತಿಗೆ:

ಸಂಸದರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹಿಂದೂಪರ ಕಾರ್ಯಕರ್ತರು ಕಸಾಯಿ ಖಾನೆಗೆ ಮುತ್ತಿಗೆ ಹಾಕಿದರು. ಮುಳಬಾಗಿಲು ಪಟ್ಟಣದಲ್ಲಿರುವ ಜಹಾಂಗೀರ್ ದೊಹಾದಲ್ಲಿ ಹಿಂದೂ ಪರ ಕಾರ್ಯಕರ್ತರಿಂದ ಮುಜ್ನು ಎಂಬುವವರು ಬ್ಯಾನರ್ ಹರಿದು ಹಾಕಲು ಕುಮ್ಮಕ್ಕು ನೀಡಿರುವ ಆರೋಪ ಕೇಳಿ ಬಂದಿದ್ದರಿಂದ ಕಸಾಯಿ ಖಾನೆಗೆ ಮುತ್ತಿಗೆ ಹಾಕಿ ಮುಜ್ನುನನ್ನು ಬಂಧಿಸುವಂತೆ ಒತ್ತಾಯಿಸಿದರು.

ಶ್ರೀರಾಮನ ಬ್ಯಾನರ್ ಇದ್ದ ಬಳಿ ಉರ್ದು ಶಾಲಾ ಕಟ್ಟಡದ ಮೇಲೆ ಹಸಿರು ಬಾವುಟವನ್ನು ಅಳವಡಿಸಲಾಗಿತ್ತು. ಇದರಿಂದ ಕೋಮು ಸೌಹಾರ್ದತೆ ಕದಡುತ್ತಿರುವ ಆರೋಪದ ಹಿನ್ನೆಲೆ ಉರ್ದು ಶಾಲೆಯ ಬಾವುಟವನ್ನು ಹಿಂದೂಪರ ಕಾರ್ಯಕರ್ತರು ಕೆಳಗಿಳಿಸಿದ ಘಟನೆ ನಡೆಯಿತು.

ಬದಲಿ ಶ್ರೀರಾಮನ ಪ್ಲೆಕ್ಸ್ ಅಳವಡಿಕೆ:

ಮುಳಬಾಗಲಿನ ಜಹಾಂಗೀರ್ ಮೊಹಲ್ಲಾದ ಬಳಿ ಶ್ರೀರಾಮನ ಪ್ಲೆಕ್ಸ್‌ಗೆ ಬ್ಲೆಡ್‌ನಿಂದ ಬ್ಲೆಡ್ ಹಾಕಿ ವಿರೂಪಗೊಳಿಸಿದ್ದರಿಂದ ಬೇರೆ ಪ್ಲೆಕ್ಸ್ ಅಳವಡಿಸಿ ಹಿಂದೂ ಕಾರ್ಯಕರ್ತರು ಜೈ ಕಾರ ಕೂಗಿದರು.

ಪ್ಪಿಕಸ್ಥರನ್ನು ಗಡಿಪಾರು ಮಾಡಿ: ಸಂಸದ 

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಸಿಎಂ ಸಿದ್ದರಾಮಯ್ಯ ೧೦ ಸಾವಿರ ಕೋಟಿಯನ್ನು ಮುಸ್ಲಿಂ ಸಮುದಾಯಕ್ಕೆ ಮೀಸಲಿಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಇದುವೇ ಇಂತಹ ಘಟನೆಗಳು ನಡೆಯಲು ಕಾರಣವಾಗಿದೆ, ಮಾಲೂರಿನ ಮಾರಿಕಾಂಬ ದೀಪೋತ್ಸವದ ಮೇಲೆ ಕಲ್ಲು ತೂರಾಟ ನಡೆದಿತ್ತು, ಈಗ ಮುಳಬಾಗಿಲು ಪಟ್ಟಣದಲ್ಲಿ ಶ್ರೀರಾಮನ ಬ್ಯಾನರ್ ಹರಿದು ಹಾಕಿದ್ದಾರೆ, ಇವರು ಈ ದೇಶದಲ್ಲಿರಲು ಯೋಗ್ಯರಲ್ಲ, ಜ.೨೨ ರಂದು ಆಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯದ ಉದ್ಘಾಟನೆ ಸಹಿಸಲಾಗದೆ ಇಂತಹ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಆಗ್ರಹಿಸಿದರು. ಶಾಂತವಾಗಿದ್ದ ಮುಳಬಾಗಿಲಿನಲ್ಲಿ ಯಾರೋ ಹಣ ಕೊಟ್ಟು ಇವರ ಮೂಲಕ ಬ್ಯಾನರ್ ಹರಿದು ಹಾಕಿಸಿದ್ದಾರೆಂಬ ಅನುಮಾನವಿದೆ, ಕಿಡಿಗೇಡಿಗಳನ್ನು ಕೂಡಲೇ ಗಡಿಪಾರು ಮಾಡಬೇಕು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಂತಹ ಕಿಡಿಗೇಡಿಗಳು ಹುಟ್ಟಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಪಾಕಿಸ್ತಾನದ ಏಜೆಂಟ್ ರೀತಿ ಇಲ್ಲಿನ ಕೆಲವು ಮುಸ್ಲಿಮರು ವರ್ತಿಸಿ ಸರ್ಕಾರದ ಎಲ್ಲಾ ಸೌಲಭ್ಯಗಳನ್ನೂ ಬಳಸಿಕೊಳ್ಳುತ್ತಿದ್ದಾರೆ, ಮಾಲೂರು ತಾಲೂಕಿನಲ್ಲಿ ದೀಪೋತ್ಸವದ ವೇಳೆ ಹೆಣ್ಣು ಮಕ್ಕಳ ಮೇಲೆ ಕಲ್ಲು ಎಸೆದಿದ್ದರು. ದೇಶದಲ್ಲಿ ವಾಸ ಮಾಡುವ ಯೋಗ್ಯತೆ ಇವರಿಗಿಲ್ಲ. ಮಟನ್ ಅಂಗಡಿಯ ಮಾಲೀಕ ಮುಜ್ಜು ಎಂಬಾತನಿಂದ ಬ್ಯಾನರ್ ವಿರೋಪಗೊಳಿಸುವ ಕುಮ್ಮಕ್ಕು ನೀಡಲಾಗಿದೆ. ಮುಜ್ನುನ ಬಂಧಿಸಿ ಅವನ ಹಿಂದಿರುವ ಸಂಘಟನೆ ಯಾವುದು ಎಂದು ತನಿಖೆ ನಡೆಸಬೇಕು, ನಮಗೆ ತೊಂದರೆ ಕೊಟ್ಟರೆ ನಾವು ಅವರನ್ನು ಬಿಡುವುದಿಲ್ಲ, ಇಂತಹ ವಿಕೃತ ಮನಸ್ಥಿತಿಯ ಅವರನ್ನು ಕೂಡಲೇ ಗಡಿಪಾರು ಮಾಡಬೇಕು, ಸಿಎಂ ಸಿದ್ಧರಾಮಯ್ಯನವರ ಕುಮ್ಮಕು ಇದೆ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ. ಆಯೋಧ್ಯೆಯ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಕಿಡಿಗೇಡಿಗಳು ಬಹಿರಂಗವಾಗಿ ಕ್ಷಮೆ ಕೇಳಿ, ಹೊಸ ಪ್ಲೆಕ್ಸ್ ಹಾಕುವವರೆಗೂ ನಾವು ಹಿಂದೆ ಸರಿಯುವುದಿಲ್ಲ ಎಂದು ಆಗ್ರಹಿಸಿದರು.

 

ಅಯೋಧ್ಯೆ ರಾಮಮಂದಿರಕ್ಕೆ ಹೋಗಬೇಕೆಂಬ ಆಸೆ ಇದೆ: ಎಚ್‌.ಡಿ.ದೇವೇಗೌಡ

ಘಟನೆಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು: ಶಾಸಕ

ಘಟನೆ ಸಂಬಂಧ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ‘ನನ್ನ ಕ್ಷೇತ್ರದಲ್ಲಿ ಆಗಿರುವ ಸಮಸ್ಯೆಯಿದು, ಬಹಿರಂಗವಾಗಿ ಕ್ಷಮೆಯಾಚಿಸಲು ಸಾಧ್ಯವಿಲ್ಲ. ಇದನ್ನು ನಾನು ಬಗೆಹರಿಸುತ್ತೇನೆ, ನೀವು ಇಲ್ಲಿಗೆ ಬಂದು ಶೋ ಆಫ್ ಕೊಡಬೇಡಿ’ ಎಂದು ಬಹಿರಂಗವಾಗಿ ಹೇಳಿದರು. ಮುಳಬಾಗಿಲಿನ ಘಟನೆಗೆ ಸಂಬಂಧಿಸಿದವರಿಗೆ ತಕ್ಕ ಶಿಕ್ಷೆಯಾಗಬೇಕು, ಮತ್ತೊಬ್ಬರು ಇಂತಹ ತಪ್ಪು ಮಾಡದಂತೆ ಕ್ರಮವಹಿಸಲು ಪೋಲೀಸರಿಗೆ ಸೂಚನೆ ನೀಡಿದ್ದೇನೆ, ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ, ಈ ಸಂದರ್ಭದಲ್ಲಿ ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಶಾಸಕ ಸಮೃದ್ಧಿ ಮಂಜುನಾಥ್ ಹೇಳಿದರು.

click me!