
ಬೆಂಗಳೂರು (ಜು.16): ಡ್ರಗ್ಸ್ ಮಾಫಿಯಾ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು, ರಾಜಧಾನಿಗೆ ಫ್ಲಿಪ್ ಕಾರ್ಡ್ ಬಾಕ್ಸ್‌ಗಳಲ್ಲಿ ಗಾಂಜಾ ತುಂಬಿ ಸಿನಿಮೀಯ ಶೈಲಿಯಲ್ಲಿ ಪೂರೈಸುತ್ತಿದ್ದ ಎಂಬಿಎ ವಿದ್ಯಾರ್ಥಿ ಸೇರಿದಂತೆ ಮೂವರನ್ನು ಸೆರೆಹಿಡಿದು 12 ಕೋಟಿ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ರಾಜಸ್ಥಾನದ ಚಂದ್ರಭಾನು ಬಿಸ್ನೋಯಿ, ಆಂಧ್ರಪ್ರದೇಶದ ವಿಶಾಖಪಟ್ಟಣದ ಲಕ್ಷ್ಮೇಮೋಹನ್ ದಾಸ್ ಹಾಗೂ ಚಾಮರಾಜಪೇಟೆಯ ಸಲ್ಮಾನ್ ಬಂಧಿತರಾಗಿದ್ದು, ಆರೋಪಿಗಳಿಂದ 12 ಕೋಟಿ ರು ಮೌಲ್ಯದ 1.5 ಟನ್ ಗಾಂಜಾ ಹಾಗೂ ಸರಕು ಸಾಗಾಣಿಕೆ ವಾಹನ ಜಪ್ತಿ ಮಾಡಲಾಗಿದೆ.
ಹೇಗೆ ಕಾರ್ಯಾಚರಣೆ?: ವೃತ್ತಿಪರ ಕ್ರಿಮಿನಲ್ ಆಗಿರುವ ಸಲ್ಮಾನ್ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಲವು ದಿನಗಳಿಂದ ಗಾಂಜಾ ದಂಧೆಯಲ್ಲಿ ನಿರತನಾಗಿದ್ದ. ಆಂಧ್ರಪ್ರದೇಶದ ವಿಶಾಖಪಟ್ಟಣದ ಲಕ್ಷ್ಮೇ ಮೋಹನ್ ದಾಸ್ ಹಾಗೂ ಚಂದ್ರಭಾನು ಅವರಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ನಗರದಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ. ಸಲ್ಮಾನ್ ಮಾತ್ರವಲ್ಲದೆ ಹಲವು ಪೆಡ್ಲರ್‌ಗಳಿಗೆ ಮೋಹನ್ ಹಾಗೂ ಚಂದ್ರಭಾನು ಗಾಂಜಾ ಪೂರೈಕೆ ಮಾಡುತ್ತಿದ್ದರು.
ಹೆಣ್ಣಿನ ವೇಷದಲ್ಲಿ ಭಿಕ್ಷಾಟನೆ ಮಾಡಿ ಮನೆಯನ್ನೇ ಕಟ್ಟಿದ!
ಚಾಮರಾಜಪೇಟೆ ಸಮೀಪ ಸಲ್ಮಾನ್ ಸಿಕ್ಕಿಬಿದ್ದ ಬಳಿಕ ಆಂಧ್ರಪ್ರದೇಶದ ಪೆಡ್ಲರ್‌ಗಳ ಸಂಪರ್ಕ ಜಾಲವನ್ನು ಶೋಧಿಸಿದಾಗ ಅವರ ಜಾಡು ಸಿಕ್ಕಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮಾಹಿತಿ ಪಡೆದ ಕೂಡಲೇ ಜಂಟಿ ಆಯುಕ್ತ ಎಸ್.ಡಿ.ಶರಣಪ್ಪ ಅವರು, ಪೂರೈಕೆದಾರರ ಬೇಟೆಗೆ ಡಿಸಿಪಿ ಯತೀಶ್ಚಂದ್ರ ನೇತೃತ್ವದ ತಂಡ ರಚಿಸಿದರು. ಅಂತೆಯೇ ಆಂಧ್ರಪ್ರದೇಶದ ವಿಶಾಖಪಟ್ಟಣಕ್ಕೆ ತೆರಳಿದ ಸಿಸಿಬಿ ಪೊಲೀಸರು, ಅಲ್ಲಿ ಪೆಡ್ಲರ್‌ಗಳ ಸೋಗಿನಲ್ಲಿ ಮೂರು ವಾರ ನಿರಂತರ ಕಾರ್ಯಾಚರಣೆ ನಡೆಸಿ ಕೊನೆಗೆ ಮೋಹನ್ ಹಾಗೂ ಚಂದ್ರಭಾನು ಅವರನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಗೂಡ್ಸ್ ಗಾಡಿ ಕೆಳಗೆ ಕಂಪಾರ್ಟ್‌ಮೆಂಟ್: ಆಂಧ್ರಪ್ರದೇಶದ ಕಾಡುಗಳಲ್ಲಿ ಅಕ್ರಮವಾಗಿ ಗಾಂಜಾ ಬೆಳೆದು ಬಳಿಕ ಅವುಗಳನ್ನು ದೇಶದ ವಿವಿಧ ನಗರಗಳಿಗೆ ಮೋಹನ್ ಹಾಗೂ ಚಂದ್ರಭಾನು ಪೂರೈಕೆ ಮಾಡುತ್ತಿದ್ದರು. ಕಾಡಿನಿಂದ ಗಾಂಜಾ ಸಾಗಾಣಿಕೆ ವೇಳೆ ಪೊಲೀಸರ ಕಣ್ತಪ್ಪಿಸುವ ಸಲುವಾಗಿ ಈ ಇಬ್ಬರು, ತಮ್ಮ ಸರಕು ಸಾಗಾಣಿಕೆ ವಾಹನದ ಹಿಂಬದಿ ರಹಸ್ಯವಾಗಿ ಕಂಪಾರ್ಟ್‌ಮೆಂಟ್ ಮಾಡಿದ್ದರು. ಅದರಲ್ಲಿ ಪ್ಲಿಪ್ ಕಾರ್ಡ್ ಬಾಕ್ಸ್‌ಗಳಲ್ಲಿ ಗಾಂಜಾ ತುಂಬಿ ಈ ಇಬ್ಬರು ಸಾಗಿಸುತ್ತಿದ್ದರು ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ನಂ. ಪ್ಲೇಟ್ ಬದಲಾವಣೆ: ಸರಕು ಸಾಗಾಣಿಕೆ ವಾಹನಕ್ಕೆ ರಹಸ್ಯ ಕಂಪಾರ್ಟ್‌ಮೆಂಟ್ ಮಾಡಿದ್ದಲ್ಲದೆ ಪೊಲೀಸರಿಗೆ ಸಿಗದಂತೆ ಆ ವಾಹನಕ್ಕೆ ನಕಲಿ ನಂಬರ್ ಪ್ಲೇಟ್‌ಗಳನ್ನು ಆರೋಪಿಗಳು ಉಪಯೋಗಿಸಿದ್ದರು. ಹೀಗಾಗಿ ಈ ನೋಂದಣಿ ಸಂಖ್ಯೆ ಆಧರಿಸಿ ಆ ವಾಹನದ ಸಂಚಾರದ ದಾಖಲೆ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನನಗೆ ಸಹಕರಿಸು ಎಂದು ಸ್ಟಾಪ್ ನರ್ಸ್ಗೆ ಕಿರುಕುಳ: ಸರ್ಕಾರಿ ವೈದ್ಯನ ವಿರುದ್ಧ ಪ್ರಕರಣ ದಾಖಲು
ಇಬ್ಬರು ಪದವೀಧರರು: ಲಕ್ಷ್ಮೇಮೋಹನ್ ದಾಸ್ ಬಿಎ ವಿದ್ಯಾಭ್ಯಾಸ ಮುಗಿಸಿದ್ದಾನೆ. ಇನ್ನು ಚಂದ್ರಭಾನು ಬಿಸ್ನೋಯಿ ಎಂಬಿಎ ವಿದ್ಯಾರ್ಥಿ ಆಗಿದ್ದ. ಈತನ ಅಣ್ಣ ರಾಜಸ್ಥಾನದಿಂದ ಬಂದು ವಿಶಾಖಪಟ್ಟಣದಲ್ಲಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದ. ಅಲ್ಲಿಗೆ ಬಂದಿದ್ದ ಚಂದ್ರಭಾನು ಎಂಬಿಎ ವಿದ್ಯಾಭ್ಯಾಸ ಮಾಡುತ್ತಿದ್ದ. ಲಕ್ಷ್ಮೇಮೋಹನ್ ಮತ್ತು ಚಂದ್ರಭಾನು ಗಾಂಜಾ ದಾಸರಾಗಿದ್ದು, ಗಾಂಜಾದಿಂದಲೇ ಸ್ನೇಹಿತರಾಗಿದ್ದರು. ಬಳಿಕ ಅವರೇ ಗಾಂಜಾ ಸಾಗಣೆಗೆ ಇಳಿದಿದ್ದರು ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ