
ಮಂಗಳೂರು (ಮೇ.24): ಮಂಗಳೂರು ಹೊರವಲಯದ ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಗೆ ಹಾರಿ ಆತ್ಮ*ಹ*ತ್ಯೆ ಮಾಡಲು ಪ್ರಯತ್ನಿಸುತ್ತಿದ್ದ ಹಾಸನ ಜಿಲ್ಲೆ ಚೆನ್ನರಾಯಪಟ್ಟಣ ತಾಲೂಕಿನ ಶ್ರವಣ ಬೆಳಗೊಳದ ಹಳ್ಳಿಯೊಂದರ ಕೃಷಿಕನೋರ್ವನನ್ನು ಪಣಂಬೂರು ಪೊಲೀಸರು ಸಮಯಪ್ರಜ್ಞೆಯಿಂದ ಕಾಪಾಡಿದ್ದಾರೆ. ಆರೋಗ್ಯ ಹಾಗೂ ಸಣ್ಣ ಮಟ್ಟಿಗಿನ ಹಣಕಾಸು ಸಮಸ್ಯೆ ಇದ್ದ ಹಾಸನ ಮೂಲದ ಈ ವ್ಯಕ್ತಿ ಶುಕ್ರವಾರ ಬೆಳಗ್ಗೆ ಯಾರಿಗೂ ಹೇಳದೆ ಮನೆ ಬಿಟ್ಟು ಬಂದಿದ್ದು ಮೊಬೈಲ್ ಫೋನ್‌ನ್ನು ಮಾತ್ರ ಆನ್‌ನಲ್ಲಿ ಇಟ್ಟುಕೊಂಡಿದ್ದರು.
ಫೋನ್ ಮುಖಾಂತರ ಮನೆಯವರು, ಸಂಬಂಧಿಕರು ಅವರನ್ನು ಸಂಪರ್ಕಿಸಿದಾಗ, ಮನೆಗೆ ಹಿಂದಿರುಗಿ ಬರುವಂತೆ ಎಷ್ಟು ಬೇಡಿಕೊಂಡರೂ ತಾನು ಎಲ್ಲಿದ್ದೇನೆ ಎಂದು ತನ್ನ ಇರುವಿಕೆ ಬಗ್ಗೆ ಹೇಳದೆ ತಾನು ಸಾಯುವುದಾಗಿ ಹೇಳಿಕೊಂಡಿದ್ದನು. ಕೊನೆಗೆ ಅವರು ಪಣಂಬೂರು ಬೀಚ್ ಹತ್ತಿರ ಇರುವ ಬಗ್ಗೆ ಮಾಹಿತಿ ಪಡೆದ ಸಂಬಂಧಿಕರು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮುಖಾಂತರ ಸಂಜೆ 5.30 ಗಂಟೆ ಸುಮಾರಿಗೆ ಪಣಂಬೂರು ಪೊಲೀಸ್ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್ ಅವರನ್ನು ಸಂಪರ್ಕಿಸಿ ವಿಚಾರ ತಿಳಿಸಿ ಹೇಗಾದರೂ ಮಾಡಿ ತಮ್ಮವರನ್ನು ಕಾಪಾಡುವಂತೆ ಕೇಳಿಕೊಂಡಿದ್ದರು.
ಕೂಡಲೇ ಈ ಬಗ್ಗೆ ಪೊಲೀಸ್ ಇನ್ಸ್‌ಪೆಕ್ಟರ್ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ತಮ್ಮ ತಂಡದೊಂದಿಗೆ ಆತ್ಮ*ಹ*ತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದ ವ್ಯಕ್ತಿಯ ಪತ್ತೆಗಾಗಿ ಕಾರ್ಯಪ್ರವೃತ್ತರಾದರು. ಪೊಲೀಸ್ ಕಮೀಷನರ್ ಕಚೇರಿಯ ತಾಂತ್ರಿಕ ಘಟಕದೊಂದಿಗೆ ಸಮನ್ವಯ ಸಾಧಿಸಿ ಆತ್ಮ*ಹ*ತ್ಯೆ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯ ಹುಡುಕಾಟಕ್ಕೆ ತೊಡಗಿದರು.
ಮೊದಲಿಗೆ ಫೋನ್ ಮಾಡಿ ಸಂಪರ್ಕ ಸಾಧಿಸಿದ ಪೊಲೀಸರು ಕೌನ್ಸಿಲಿಂಗ್ ಮಾಡಿ ಎಷ್ಟು ಸಾಂತ್ವನ ಹೇಳಿದರೂ ವ್ಯಕ್ತಿ ಸ್ಪಂದಿಸುತ್ತಿರಲಿಲ್ಲ. ಕೊನೆಗೆ ನಿರಂತರ ಒಂದೂವರೆ ಗಂಟೆ ಕಾಲ ಹುಡುಕಾಡಿದ ನಂತರ ಸಂಜೆ 7 ಗಂಟೆ ಸುಮಾರಿಗೆ ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಗೆ ಹಾರಿ ಆತ್ಮ*ಹ*ತ್ಯೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾದರು.
ಆತನನ್ನು ರಕ್ಷಿಸಿ ಬುದ್ಧಿಮಾತು ಹೇಳಿ ಆತ್ಮ ವಿಶ್ವಾಸ ಮೂಡಿಸಿದರು. ಕೊನೆಗೆ ಊರಿನಿಂದ ಬಂದ ಸಂಬಂಧಿಕರ ಜೊತೆ ಆತನನ್ನು ಕಳುಹಿಸಿಕೊಟ್ಟರು. ಕಾರ್ಯಾಚರಣೆಯಲ್ಲಿ ಪಣಂಬೂರು ಪೊಲೀಸ್ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್, ಸಬ್ ಇನ್ಸ್‌ಪೆಕ್ಟರ್ ಜ್ಞಾನಶೇಖರ್, ಎಎಸ್ಐ ಸುಬ್ರಹ್ಮಣ್ಯ, ಸಿಬ್ಬಂದಿಗಳಾದ ಸುರೇಂದ್ರ, ದೀಪಕ್, ಇಮ್ತಿಯಾಜ್, ರಾಕೇಶ್, ಫಕ್ಕಿರೇಶ್, ಶರಣ ಬಸವ , ಅನ್ವರ್, ಮಂಜುನಾಥ್ ಮತ್ತಿತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ