
ಮಂಗಳೂರು (ನ. 23): ನಗರದ ನಾಗುರಿಯಲ್ಲಿ ನ.19ರಂದು ಕುಕ್ಕರ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮಂಗಳೂರು ಕಮಿಷನರ್ ಕಚೇರಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಡಿಜಿಪಿ ಪ್ರವೀಣ್ ಸೂದ್ ಸುದ್ದಿಗೋಷ್ಟಿ ನಡೆಸಿದ್ದು ಪ್ರಕರಣವನ್ನು ಶೀಘ್ರದಲ್ಲೇ ಎನ್‌ಐಗೆ ಹಸ್ತಾಂತರಿಸುವುದಾಗಿ ತಿಳಿಸಿದರು. "ಬಾಂಬ್ ಬ್ಲಾಸ್ಟ್ ಕೇಸ್ ಸಂಬಂಧ ಡಿಜಿಪಿ ಜೊತೆ ಮಂಗಳೂರು ವಿಸಿಟ್ ಮಾಡಿದ್ದೇನೆ. ಅಲ್ಲದೇ ಆಟೋ ಚಾಲಕನ ಜೊತೆ ಆಸ್ಪತ್ರೆಗೆ ತೆರಳಿ ಮಾತನಾಡಿದ್ದೇನೆ. ಶಾರೀಕ್ ತೀರ್ಥಹಳ್ಳಿಯವನಾಗಿದ್ದು, ಬೆಂಗಳೂರು, ಕನ್ಯಾಕುಮಾರಿ ಸೇರಿ ಹಲವೆಡೆ ಸುತ್ತಾಡಿದ್ದಾನೆ, ಈ ಸಂಬಂಧ ಪೊಲೀಸರು ಅನೇಕ ಸಾಕ್ಷ್ಯ ಕಲೆ ಹಾಕಿದ್ದಾರೆ, ಫಾರೆನ್ಸಿಕ್ ತಜ್ಞರು ಕೂಡ ಅನೇಕ ದಾಖಲೆ ಕಲೆ ಹಾಕಿದ್ದಾರೆ, ಇವನ ಹಿನ್ನೆಲೆ, ಫಂಡಿಂಗ್ ಹಾಗೂ ಯಾರು ಬೆನ್ನ ಹಿಂದೆ ಇದಾರೆ ಅಂತ ತನಿಖೆ ಮಾಡಲಾಗ್ತಿದೆ ಇವನಿಗೆ ಶಿಕ್ಷೆ ಆಗೋ ನಿಟ್ಟಿನಲ್ಲಿ ಎಲ್ಲಾ ಸಾಕ್ಷ್ಯ ಸಂಗ್ರಹಿಸಲಾಗಿದೆ, ಸುಮಾರು ಎಂಟು ಜನ ತಜ್ಞ ವೈದ್ಯರು ಇಬ್ಬರಿಗೂ ಚಿಕಿತ್ಸೆ ಕೊಡುತ್ತಿದ್ದಾರೆ, ಅವನು ಮಾತನಾಡಲು ಆದ ಮೇಲೆ ಮತ್ತಷ್ಟು ಮಾಹಿತಿ ಸಿಗುತ್ತೆ" ಎಂದರು.
ಮಂಗಳೂರಿನಲ್ಲಿ ಎನ್‌ಐಎ ಕಚೇರಿ: "ಆಟೋ ಡ್ರೈವರ್ ನ ಚಿಕಿತ್ಸಾ ವೆಚ್ಚವನ್ನ ಸರ್ಕಾರವೇ ಭರಿಸುತ್ತೆ, ಉಳಿದ ಆರ್ಥಿಕ ಸಹಾಯದ ಬಗ್ಗೆ ಸಿಎಂ ಜೊತೆ ಮಾತನಾಡ್ತೇನೆ, ಸ್ಥಳೀಯವಾಗಿ ಸಿಗೋ ವಸ್ತು ಜೋಡಿಸಿ ಬಾಂಬ್ ತಯಾರಿಸೋದ್ರಲ್ಲಿ ಅವರು ಪರಿಣಿತರು. ಇದನ್ನ ಎಲ್ಲಾ ಆಯಾಮದಿಂದ ಪೊಲೀಸರು ತನಿಖೆ ಮಾಡ್ತಾರೆ, ರಕ್ತ ಹರಿಸಿ ಪ್ರಾಣ ತೆಗೆಯಲು ಹೊರಟಿರೋ ಮತಾಂಧ ಶಕ್ತಿಗಳನ್ನ ನಾವು ತಡೆಗಟ್ಟುತ್ತೇವೆ, ಕೇಂದ್ರದ ತನಿಖಾ ಸಂಸ್ಥೆಗಳು ಕೂಡ ನಮ್ಮ ಜೊತೆಗೆ ಇದ್ದಾರೆ, ಇದರ ಹಿಂದೆ ಇರೋ ಎಲ್ಲಾ ಶಕ್ತಿಗಳನ್ನ ನಾವು ಬಂಧಿಸ್ತೇವೆ, ಮಂಗಳೂರಿನಲ್ಲಿ ಎನ್.ಐ.ಎ ಕಚೇರಿ ಸ್ಥಾಪನೆ ಬಗ್ಗೆ ಹೇಳಿದ್ದೇವೆ, ಕೇಂದ್ರ ಸರ್ಕಾರ ಕೂಡ ಇದಕ್ಕೆ ಪಾಸಿಟಿವ್ ಒಪಿನಿಯನ್ ನೀಡಿದೆ" ಎಂದರು
ಇದನ್ನೂ ಓದಿ: Mangaluru Auto Blast Case: ಅಪ್ಪ ಕಾರ್ಗಿಲ್ ವೀರ, ಮಗ ಉಗ್ರ ಸಂಚುಕೋರ: ಮಾಜಿ ಸೈನಿಕನ ಮಗ ಭಯೋತ್ಪಾದಕನಾದ ಕಥೆ
ನೂರಾರು ಜನಕ್ಕೆ ಗುರಿ ಇಟ್ಟಿದ್ದನೇ ಶಾರೀಕ್?: ನಗರದ ನಾಗುರಿಯಲ್ಲಿ ನ.19ರಂದು ಕುಕ್ಕರ್ ಬಾಂಬ್ ಸ್ಫೋಟ ಮಾಡಿದ ಶಾರೀಕ್, ಭಾರೀ ಜನಸಂದಣಿ ಇರುವ ಪ್ರದೇಶದಲ್ಲಿ ಬಾಂಬ್ ಸ್ಫೋಟಿಸಿ, ನೂರಾರು ಜನರ ಪ್ರಾಣ ಹಾನಿ ಉಂಟು ಮಾಡುವ ಉದ್ದೇಶ ಹೊಂದಿದ್ದಿರಬಹುದು ಎನ್ನುವ ಸಂಶಯವನ್ನು ಪೊಲೀಸರು ಹೊರಹಾಕಿದ್ದಾರೆ.ಅಲ್ಲದೆ, ಶಾರೀಕ್ ತಂದಿದ್ದ ಬಾಂಬ್‌ಗೆ ಭಾರೀ ಸ್ಫೋಟ ಉಂಟು ಮಾಡುವ ಶಕ್ತಿಯಿತ್ತು. ಡಿಟೋನೇಟರ್‌ನ ಅಸಮರ್ಪಕ ಸಂಪರ್ಕದಿಂದಾಗಿ ಶಾರ್ಚ್ ಸರ್ಕಿಟ್ ಉಂಟಾಗಿ, ಆತನ ಗುರಿ ತಪ್ಪಿ ಮಾರ್ಗಮಧ್ಯೆ ನಾಗುರಿ ಬಳಿಯೇ ಬಾಂಬ್ ಸ್ಫೋಟಿಸಿದೆ ಎನ್ನುವ ಸಂಗತಿ ಬಯಲಾಗಿದೆ.
ಪಂಪ್‌ವೆಲ್ ಟಾರ್ಗೆಟ್ ಆಗಿತ್ತೇ?: ಅಂದು ಬೆಳಗ್ಗೆ ಮೈಸೂರಿನಿಂದ ಬಸ್‌ನಲ್ಲಿ ಬಂದಿದ್ದ ಶಾರೀಕ್, ಪಡೀಲ್‌ನಲ್ಲಿ ಇಳಿದಿದ್ದ. ಅಲ್ಲಿ ಆಟೋ ಹತ್ತಿ, ಪಂಪ್‌ವೆಲ್‌ಗೆ ತೆರಳುವಂತೆ ಸೂಚಿಸಿದ್ದ. ಪಂಪ್‌ವೆಲ್, ಮಂಗಳೂರಿನ ಅತಿ ಮುಖ್ಯ ಹಾಗೂ ಜನನಿಬಿಡ ಪ್ರದೇಶ. ನೆರೆಯ ಕೇರಳ, ರಾಜಧಾನಿ ಬೆಂಗಳೂರು ಹಾಗೂ ಉಡುಪಿ ಮೂಲಕ ಗೋವಾಕ್ಕೆ ತೆರಳುವ ಮೂರು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಸಂಧಿಸುವ ಸ್ಥಳವಿದು. ಅಲ್ಲದೆ, ನಗರಕ್ಕೆ ಪ್ರವೇಶಿಸುವ ಒಳದಾರಿ ಕೂಡ ಇಲ್ಲಿದೆ. ಹೀಗಾಗಿ, ಇಲ್ಲಿ ಯಾವಾಗಲೂ ಜನರ ದಟ್ಟಣೆ ಇರುತ್ತದೆ. ಅದರಲ್ಲೂ ಸಂಜೆಯ ವೇಳೆ, ಇಲ್ಲಿ ಜನರು ಹಾಗೂ ವಾಹನಗಳ ಓಡಾಟ ಹೆಚ್ಚು. ಒಂದು ವೇಳೆ, ಇಲ್ಲಿ ಬಾಂಬ್ ಸ್ಫೋಟವಾದರೆ ಅಪಾರ ಪ್ರಮಾಣದ ಸಾವು, ನೋವು ಸಂಭವಿಸುವ ಸಾಧ್ಯತೆ ಇತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ