
ಮಂಡ್ಯ (ಮಾ.14): ಸಕ್ಕರೆನಾಡು ಮಂಡ್ಯದಲ್ಲಿ ಮನಕಲುಕುವ ಘಟನೆ ನಡೆದಿದೆ. ಪೊಲೀಸರ ಬೇಜವಾಬ್ದಾರಿ ವರ್ತನೆಯಿಂದ ಮಗಳ ಸಾವಿಗೆ ನ್ಯಾಯ ಕೇಳಿದ್ದ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪ್ರಕರಣದಲ್ಲಿ ಪೊಲೀಸರು ಇನ್ನಷ್ಟು ಮುತುವರ್ಜಿಯಿಂದ ಕೆಲಸ ಮಾಡಿ, 21 ವರ್ಷದ ಹುಡುಗಿಯ ಸಾವಿಗೆ ಕನಿಷ್ಠ ನ್ಯಾಯ ದೊರಕಿಸಿಕೊಡುವ ಹೋರಾಟ ಮಾಡಿದ್ದರೆ, ಇಂದು ಆಕೆಯ ತಾಯಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಹಾಗಾಗಿ ಮಗಳ ಸಾವಿಗೆ ನ್ಯಾಯ ಸಿಗದ ಕಾರಣಕ್ಕೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೊರಜಗತ್ತಿಗೆ ಕಂಡರೂ, ಆ ತಾಯಿ ಸಾವು ಕಾಣುವಂತೆ ಮಾಡಿದ್ದು ಮಂಡ್ಯ ಪೊಲೀಸರು. ಇದು ಮಂಡ್ಯ ಪೊಲೀಸರೇ ಮಾಡಿದ 'ಕೊಲೆ'.
ಲವ್, ಸೆಕ್ಸ್, ಮೋಸದ ಪ್ರಕರಣದಲ್ಲಿ ಒಂದೇ ಕುಟುಂಬದ ಇಬ್ಬರು ದಾರುಣ ಅಂತ್ಯ ಕಂಡಿದ್ದಾರೆ. ಪುತ್ರಿ ಸಾವಿನ ಬೆನ್ನಲ್ಲೇ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. 20 ದಿನಗಳ ಹಿಂದೆ 21 ವರ್ಷದ ವಿಜಯಲಕ್ಷ್ಮೀ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು. ತಮ್ಮೂರಿನ ಪಕ್ಕದ ಮಾರಸಿಂಗನಹಳ್ಳಿಯ ಹರಿಕೃಷ್ಣ ಎಂಬಾತನಿಂದ ಮೋಸದ ಆರೋಪವನ್ನು ಇವರು ಮಾಡಿದ್ದರು.
ವಿಜಯಲಕ್ಷ್ಮೀ-ಹರಿಕೃಷ್ಣ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಪ್ರೀತಿಸುವ ನೆಪದಲ್ಲಿ ಕಳೆದ ಒಂದೂವರೆ ವರ್ಷದಿಂದ ಇಬ್ಬರ ನಡುವೆ ದೈಹಿಕ ಸಂಪರ್ಕ ಕೂಡ ನಡೆದಿತ್ತು. ಇತ್ತೀಚೆಗೆ ಹರಿಕೃಷ್ಣ ಬೇರೆ ಹುಡುಗಿಯರ ಜೊತೆ ಸಂಪರ್ಕದಲ್ಲಿದ್ದ. ಈ ಬಗ್ಗೆ ಪ್ರಶ್ನಿಸಿ, ವಿಜಯಲಕ್ಷ್ಮಿ ಮದುವೆಗೆ ಪಟ್ಟು ಹಿಡಿದಿದ್ದಳು. ಆದರೆ, ಹರಿಕೃಷ್ಣ ಮದುವೆಗೆ ನಿರಾಕರಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬೆದರಿಸಿದ್ದ ಎನ್ನಲಾಗಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ವಿಜಯಲಕ್ಷ್ಮೀ ಸೂಸೈಡ್ ಮಾಡಿಕೊಂಡಿದ್ದಳು.
ವಿಜಯಲಕ್ಷ್ಮಿ ಸಾವಿಗೆ ನ್ಯಾಯಕ್ಕಾಗಿ ಒತ್ತಾಯ ಮಾಡಲಾಗಿತ್ತು. ಮಂಡ್ಯ ಗ್ರಾಮಾಂತರ ಠಾಣೆಗೆ ವಿಜಯಲಕ್ಷ್ಮಿ ತಂದೆ ನಂಜುಂಡೇಗೌಡ ದೂರು ನೀಡಿದ್ದರು. ದೂರು ಕೊಟ್ಟು ನ್ಯಾಯ ಕೋರಲು ಹೋದವರ ಮೇಲೆಯೇ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದರು. ಇತ್ತ ಮಗಳ ಸಾವಿಗೆ ನ್ಯಾಯವೂ ಇಲ್ಲ, ನಮ್ಮ ಪರ ಬಂದವರಿಗೆ ನೆಮ್ಮದಿಯೂ ಇಲ್ಲ ಎಂದು ತಾಯಿ ನೊಂದುಕೊಂಡಿದ್ದಳು. ಇದರಿಂದಾಗಿ ಗುರುವಾರ ಸಂಜೆ ಮನೆಯಲ್ಲಿಯೇ ನೇಣಿಗೆ ಕೊರಳೊಡ್ಡಿ ವಿಜಯಲಕ್ಷ್ಮೀ ಅವರ ತಾಯಿ ಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ವೇಳೆ ಮೃತರ ಶವ ಸಾಗಿಸಲು ಬಿಡದೆ ಕುಟುಂಬಸ್ಥರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರ ವಿರುದ್ಧ ಘೋಷಣೆ ಕೂಗಿ ವಿರೋಧಿಸಿದ್ದಾರೆ. ಆರೋಪಿ ಮತ್ತು ಕುಟುಂಬಸ್ಥರ ಬಂಧಿಸುವಂತೆ ಪಟ್ಟು ಹಿಡಿದಿದ್ದು, ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮದುವೆಯಾದ 3 ದಿನಕ್ಕೆ ಹಾರ್ಟ್ ಅಟ್ಯಾಕ್‌ಗೆ ಬಲಿಯಾದ ಟೆಕ್ಕಿ; ಮಂಡ್ಯದ ಗಂಡು ಶಶಾಂಕ್ ಇನ್ನಿಲ್ಲ!
ಭಾರೀ ವಿರೋಧದ ಬಳಿಕ ಎಫ್‌ಐಆರ್: ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾರೀ ವಿರೋಧ ವ್ಯಕ್ತವಾದ ಬಳಿಕ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹರಿಕೃಷ್ಣ ಸೇರಿ 19 ಮಂದಿ ವಿರುದ್ಧ ಎಫ್‌ಐಆರ್. 189, 191, 64, 108, 54, 118, ಸೆಕ್ಷನ್ ಅಡಿಯಲ್ಲಿ ದಾಖಲು ಮಾಡಲಾಗಿದೆ.
ಗಂಡ ಬಿಟ್ಟಿದ್ದ ಗೃಹಿಣಿ, ಮದುವೆಯಾಗೋದಾಗಿ ನಂಬಿಸಿ ಯುವಕ ವಂಚನೆ, ಕೊಟ್ಟ 2 ಲಕ್ಷ ಹಣ ವಾಪಸ್ ಕೇಳಿದ್ದಕ್ಕೆ ಹಲ್ಲೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ